Indian Navy Day 2024: ಭಾರತೀಯ ನೌಕಾಪಡೆ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 04, 2024 | 9:46 AM

1971ರಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಭಾರತೀಯ ನೌಕಾಪಡೆ ಆಪರೇಶನ್​ ಟ್ರೈಡೆಂಟ್​ ಮೂಲಕ ಪಾಕ್​ ಸೇನೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವ ಸೇರಿದಂತೆ ಇನ್ನಿತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ.

Indian Navy Day 2024: ಭಾರತೀಯ ನೌಕಾಪಡೆ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

1971 ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯದ ಸಂಭ್ರಮಕ್ಕೆ ಇಂದಿಗೆ 52 ವರ್ಷಗಳು ಸಂದಿವೆ. ಹೌದು, ಪ್ರತಿ ವರ್ಷ ಡಿಸೆಂಬರ್ 4 ರಂದು ದೇಶದ ಹೆಮ್ಮೆಯ ಭಾರತೀಯ ನೌಕಾ ಪಡೆಗಳ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಿ, ನೌಕಾಪಡೆಗೆ ಗೌರವವನ್ನು ಸೂಚಿಸಲಾಗುತ್ತದೆ. 1971 ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಪ್ರಾರಂಭಿಸಿದ ನೆನಪಿಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಯೋಧರನ್ನು ಸ್ಮರಿಸುವ ಸಲುವಾಗಿ ಈ ದಿನದ ಆಚರಣೆಯೂ ಚಾಲ್ತಿಯಲ್ಲಿದೆ.

ಭಾರತೀಯ ನೌಕಾ ಪಡೆ ದಿನದ ಇತಿಹಾಸ

ಭಾರತೀಯ ನೌಕಾಪಡೆಯನ್ನು 1612 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. 1971 ರಲ್ಲಿ ಭಾರತ-ಪಾಕ್ ಯುದ್ಧದ ಸಮಯದಲ್ಲಿ, ಪಾಕಿಸ್ತಾನವು ಡಿಸೆಂಬರ್ 3 ರಂದು ಭಾರತೀಯ ವಾಯು ನೆಲೆಗಳ ಮೇಲೆ ದಾಳಿ ಮಾಡಿತು. ಅವರ ಆಕ್ರಮಣಕಾರಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ನೌಕಾಪಡೆಯು ಡಿಸೆಂಬರ್ 4 ಮತ್ತು 5 ರ ರಾತ್ರಿ ದಾಳಿ ಮಾಡಲು ಯೋಜನೆ ರೂಪಿಸಿತ್ತು. ಆ ವೇಳೆಗೆ ಬಾಂಬ್ ಸ್ಫೋಟಗಳನ್ನು ನಡೆಸಲು ಪಾಕಿಸ್ತಾನವು ವಿಮಾನವನ್ನು ಹೊಂದಿರಲ್ಲಿಲ್ಲ. ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಭಾರತೀಯ ನೌಕಾಪಡೆಯು ಕರಾಚಿಯ ಪಾಕಿಸ್ತಾನ ನೌಕಾಪಡೆಯ ಪ್ರಧಾನ ಕಛೇರಿಯ ಮೇಲೆ ಕಣ್ಣಿಟ್ಟಿತು.

ಈ ವೇಳೆಯಲ್ಲಿ ಮೂರು ಕ್ಷಿಪಣಿ ದೋಣಿಗಳಾದ INS ವೀರ್, INS ನಿಪತ್ ಮತ್ತು INS ನಿರ್ಘಾಟ್ ಗಳನ್ನು ಬಳಸಿಕೊಂಡಿತ್ತು. ಈ ಯುದ್ದದಲ್ಲಿ ಶತ್ರು ಸೈನ್ಯವಾದ ಪಾಕಿಸ್ತಾನಿ ನೌಕಾಪಡೆಯ ಹಡಗುಗಳನ್ನು ಮುಳುಗಿಸುವಲ್ಲಿ ಯಶಸ್ವಿಯಾಯಿತು. ಈ ವೇಳೆಯಲ್ಲಿ ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆಯ ಸಂಪೂರ್ಣ ನೇತೃತ್ವವನ್ನು ಕಾಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ವಹಿಸಿದ್ದು , ಕೊನೆಗೂ ಭಾರತೀಯ ನೌಕಾ ಪಡೆಯೂ ಯಶಸ್ವಿಯಾಯಿತು. ಮೇ 1972 ರಲ್ಲಿ ನಡೆದ ಹಿರಿಯ ನೌಕಾ ಅಧಿಕಾರಿಗಳ ಸಮ್ಮೇಳನದಲ್ಲಿ, 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಲು ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತೀಯ ನೌಕಾಪಡೆ ದಿನದ ಮಹತ್ವ ಹಾಗೂ ಆಚರಣೆ

ಪ್ರತಿ ವರ್ಷ ಡಿಸೆಂಬರ್ 4 ರಂದು ಆಚರಿಸಲಾಗುವ ಭಾರತೀಯ ನೌಕಾಪಡೆಯ ದಿನದಂದು ನೌಕಾಪಡೆಗೆ ಗೌರವವನ್ನು ಸೂಚಿಸುವುದು ಹಾಗೂ ನೌಕಾಪಡೆಯ ಸೈನಿಕರು ತಮ್ಮ ಜೀವದ ಹಂಗನ್ನು ತೊರೆದು, ದೇಶಕ್ಕಾಗಿ ಹೋರಾಡಿದವರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಮುಂಬೈನಲ್ಲಿ ಪ್ರಧಾನ ಕಚೇರಿಯಲ್ಲಿ ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್, ತಮ್ಮ ಹಡಗುಗಳು ಮತ್ತು ಸೈನಿಕರೆಲ್ಲರೂ ಒಟ್ಟಿಗೆ ಸೇರಿ ಈ ದಿನವನ್ನು ಆಚರಿಸಲಾಗುತ್ತದೆ. ಅದಲ್ಲದೇ, ಭಾರತೀಯ ನೌಕಾಪಡೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಗೇಟ್‌ವೇ ಆಫ್ ಇಂಡಿಯಾದಲ್ಲಿ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಚೀನಾದ ಜತೆ ಭಾರತದ ಸಂಬಂಧ ಹೇಗಿದೆ? ವಿವರಿಸಿದ ಸಚಿವ ಎಸ್ ಜೈಶಂಕರ್

ಭಾರತೀಯ ನೌಕಾ ಪಡೆಗೆ ವಿಶ್ವದಲ್ಲೇ ಎಷ್ಟನೇ ಸ್ಥಾನ ಹಾಗೂ ಏನಿದರ ಕರ್ತವ್ಯ?

ಭಾರತೀಯ ನೌಕಾಪಡೆಯನ್ನು 1612 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಇದನ್ನು ರಾಯಲ್ ಇಂಡಿಯನ್ ನೇವಿ ಎನ್ನುವ ಹೆಸರಿನಿಂದ ಕರೆಯಲಾಗಿತ್ತು. ಆದರೆ ಇದೀಗ ವಿಶ್ವದಲ್ಲೇ ಪ್ರಬಲವಾದ ಸೇನೆಯಾಗಿ ಭಾರತೀಯ ನೌಕಾಪಡೆಯು ಬೆಳೆದು ನಿಂತಿದೆ. ಭಾರತೀಯ ನೌಕಪಡೆಯೂ ವಿಶ್ವದಲ್ಲೇ ಪ್ರಬಲ ನೌಕಾಪಡೆಯಲ್ಲಿ ಏಳನೇ ಸ್ಥಾನವನ್ನು ಗಳಿಸಿಕೊಂಡಿದೆ. ಅಂಡಮಾನ್ ಹಾಗೂ ನಿಕೋಬಾರ್, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಗುಜರಾತ್, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಸುಮಾರು ಹನ್ನೊಂದಕ್ಕೂ ಹೆಚ್ಚು ನೌಕಾ ನೆಲೆಯನ್ನು ಹೊಂದಿದೆ. ಭಾರತೀಯ ನೌಕಾ ಪಡೆಯು ಐಎನ್ ಎಸ್ ವಿಕ್ರಮಾದಿತ್ಯ ಹಾಗೂ ಐಎನ್ ಎಸ್ ವಿಕ್ರಾಂತ್ ಎಂಬ ಪ್ರಬಲವಾದ ವಿಮಾನವಾಹಕ ನೌಕೆಗಳು ಹೊಂದಿದೆ. ಭಾರತೀಯ ನೌಕಾಪಡೆಯು ದೇಶದ ಸಮುದ್ರ ಗಡಿಗಳನ್ನು ಭದ್ರಪಡಿಸುತ್ತವೆ. ಅದಲ್ಲದೇ, ಬಂದರು ಭೇಟಿಗಳು, ಹೂಡಿಕೆಗಳು, ವಿಪತ್ತು ಪರಿಹಾರ ಮತ್ತು ಹೆಚ್ಚಿನವುಗಳ ಮೂಲಕ ಭಾರತದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ