Railway Achievements: ಒಂದು ರೈಲುದುರಂತಕ್ಕೆ 9 ವರ್ಷದ ಸಾಧನೆ ನೀರಲ್ಲಿ ಹೋಮ ಮಾಡಿದಂತೆಯಾ? 2014ರ ಬಳಿಕ ರೈಲ್ವೆ ಇಲಾಖೆಯಲ್ಲಾದ ಬದಲಾವಣೆಗಳೇನು? ತಪ್ಪದೇ ನೋಡಿ

|

Updated on: Jun 04, 2023 | 2:11 PM

Indian Railways Transformation After 2014: ಒಂದು ಕಾಲದಲ್ಲಿ ಪ್ರತೀ ರೈಲು ಪ್ರಯಾಣದಲ್ಲೂ ಜನರು ಜೀವ ಕೈಲಿಡಿದು ಹೋಗಬೇಕಾದ ಪರಿಸ್ಥಿತಿ ಇದ್ದ ರೈಲ್ವೆ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ರೀತಿಯಲ್ಲಿ ಪರಿವರ್ತನೆ ಆಗಿರುವುದನ್ನು ಮರೆಯಲು ಸಾಧ್ಯವಾ? 2014ರ ಬಳಿಕ ರೈಲ್ವೆ ಇಲಾಖೆಗೆ ತಂದ ವಿವಿಧ ಸುಧಾರಣೆಗಳೇನು ಎಂಬ ವಿವರ ಇಲ್ಲಿದೆ...

Railway Achievements: ಒಂದು ರೈಲುದುರಂತಕ್ಕೆ 9 ವರ್ಷದ ಸಾಧನೆ ನೀರಲ್ಲಿ ಹೋಮ ಮಾಡಿದಂತೆಯಾ? 2014ರ ಬಳಿಕ ರೈಲ್ವೆ ಇಲಾಖೆಯಲ್ಲಾದ ಬದಲಾವಣೆಗಳೇನು? ತಪ್ಪದೇ ನೋಡಿ
ಭಾರತೀಯ ರೈಲ್ವೆ
Follow us on

ಒಡಿಶಾದ ಬಾಲೇಶ್ವರ್ ಅಥವಾ ಬಾಲಾಸೋರ್​ನಲ್ಲಿ (Balasore Train Accident) ಶುಕ್ರವಾರ ರಾತ್ರಿ ಭೀಕರ ಸರಣಿ ರೈಲುದುರಂತ ಸಂಭವಿಸಿ, ಸುಮಾರು 300 ಮಂದಿಯಷ್ಟು ಜನರು ದಾರುಣವಾಗಿ ಬಲಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡವರ ಸಂಖ್ಯೆಯೂ ಸಾಕಷ್ಟಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ. ದುರಂತಕ್ಕೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ (Electronic Interlocking) ವ್ಯವಸ್ಥೆ ವಿಫಲವಾಗಿದ್ದು ಕಾರಣ ಎಂದು ರೈಲ್ವೆ ಇಲಾಖೆ ಕಾರಣ ಪತ್ತೆಹಚ್ಚಿ ಬಹಿರಂಗಪಡಿಸಿದೆ. ವಿಪಕ್ಷಗಳು ರೈಲ್ವೆ ಇಲಾಖೆ ಮತ್ತು ರೈಲ್ವೆ ಸಚಿವಾಲಯವನ್ನು ಖಂಡತುಂಡವಾಗಿ ಹೀಗಳೆಯುತ್ತಿವೆ. ಯಾವುದೇ ದುರಂತವಾದಾಗ ಆಯಾ ಇಲಾಖೆ ಮತ್ತು ಸಚಿವಾಲಯವನ್ನು ಹೊಣೆ ಮಾಡುವುದು ಸಹಜ. ಆದರೆ, ಒಂದು ಕಾಲದಲ್ಲಿ ಪ್ರತೀ ರೈಲು ಪ್ರಯಾಣದಲ್ಲೂ ಜನರು ಜೀವ ಕೈಲಿಡಿದು ಹೋಗಬೇಕಾದ ಪರಿಸ್ಥಿತಿ ಇದ್ದ ರೈಲ್ವೆ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ರೀತಿಯಲ್ಲಿ ಪರಿವರ್ತನೆ ಆಗಿರುವುದನ್ನು ಮರೆಯಲು ಸಾಧ್ಯವಾ? 2014ರ ಬಳಿಕ ರೈಲ್ವೆ ಇಲಾಖೆಗೆ ತಂದ ವಿವಿಧ ಸುಧಾರಣೆಗಳು ಈಗ ನೀರಲ್ಲಿ ಹೋಮ ಮಾಡಿದಂತಾಗುತ್ತವೆಯಾ? ಭಾರತೀಯ ರೈಲ್ವೆ ಇಲಾಖೆಯ ಅಮೋಘ ಆಧುನೀಕರಣವು ಬಾಲಸೋರ್ ದುರಂತದ ಕಪ್ಪು ಚುಕ್ಕೆಯಲ್ಲಿ ಕಳೆದುಹೋಗುವುದು ಸರಿಯಾ?

ದುರಂತಕ್ಕೆ ಯಾರನ್ನೂ ಸಮರ್ಥನೆ ಮಾಡುವ ಪ್ರಯತ್ನ ಇದಲ್ಲ. ಪರಿವರ್ತನೆಯ ಹಾದಿಯಲ್ಲಿರುವ ಮತ್ತು ಪ್ರಯೋಗಗಳನ್ನು ಮಾಡುತ್ತಾ ಉನ್ನತಿಗೆ ಯತ್ನಿಸುತ್ತಿರುವ ರೈಲ್ವೆ ಇಲಾಖೆಯ ಉತ್ಸಾಹ ಕುಂದಿಸುವ ನಡೆಸಲಾಗುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ರಿಯಾಲಿಟಿ ತೋರಿಸುವ ಪ್ರಯತ್ನ ಇದು. ಕಳೆದ 8-9 ವರ್ಷದಲ್ಲಿ ರೈಲ್ವೆ ಇಲಾಖೆ ಸುಧಾರಣೆಗೊಂಡಿರುವುದಕ್ಕೆ ಅಪಘಾತನಗಳ ಸಂಖ್ಯೆಯೇ ನಿದರ್ಶನವನ್ನಾಗಿ ಕೊಡಬಹುದು.

2014ರಿಂದೀಚೆ ಅಪಘಾತ ಸಂಖ್ಯೆ ಗಣನೀಯವಾಗಿ ಕಡಿಮೆ

ಬಾಲಾಸೋರ್ ಅಪಘಾತಕ್ಕೆ ಮುನ್ನ 2014-15ರಿಂದ ಸಂಭವಿಸಿದ್ದ ರೈಲು ಅಪಘಾತಗಳ ಸಂಖ್ಯೆ 638 ಇತ್ತು. 2006-07ರಿಂದ 2013-14ರವರೆಗೆ 1,243 ರೈಲು ಅಪಘಾತಗಳು ಸಂಭವಿಸಿದ್ದವು. ಕಳೆದ 9 ವರ್ಷದಲ್ಲಿ ರೈಲು ಅಪಘಾತಗಳ ಸಂಖ್ಯೆ ಹಿಂದಿನ 7 ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: Train Accident: ರೈಲುದುರಂತ: ರಜೆಯಲ್ಲಿದ್ದ ಯೋಧನ ಸಮಯಪ್ರಜ್ಞೆ; ರಕ್ಷಣಾ ಕಾರ್ಯಾಚರಣೆ ತ್ವರಿತಗೊಳ್ಳಲು ಕಾರಣ

ರೈಲು ಪ್ರಯಾಣದ ಅನುಭವ ಉತ್ತಮಪಡಿಸಲು ಎನ್​ಡಿಎ ಸರ್ಕಾರ ಬಹಳಷ್ಟು ಕ್ರಮಗಳನ್ನು ಕೈಗೊಂಡಿರುವುದು ಹೌದು. ಎಲ್ಲಾ ರೈಲ್ವೆ ಕ್ರಾಸಿಂಗ್​ನಲ್ಲೂ ಸಿಗ್ನಲ್ ವ್ಯವಸ್ಥೆ, ಕವಚ್ ತಂತ್ರಜ್ಞಾನ ಹೀಗೆ ಬಹಳಷ್ಟು ಸುರಕ್ಷತಾ ವ್ಯವಸ್ಥೆ ಬಲಗೊಳಿಸಲಾಯಿತು. ಪ್ರತೀ ದಶಲಕ್ಷ ಟ್ರೈನ್ ಕಿಲೋಮೀಟರ್​ಗೆ ಆಗುವ ಅಪಘಾತ (ಎಪಿಎಂಟಿಕೆಎಂ) ಸಂಖ್ಯೆ 2006-07ರಲ್ಲಿ 0.23 ಇತ್ತು. 2022-23ರಲ್ಲಿ ಇದು 0.03ಕ್ಕೆ ಇಳಿದಿರುವುದು ಗಮನಾರ್ಹ ಸಂಗತಿ.

2014ರಿಂದ ರೈಲ್ವೇ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ, ಹೊಸ ಹಳಿಗಳ ನಿರ್ಮಾಣ, ಗೇಜ್ ಬದಲಾವಣೆ, ಡಬ್ಲಿಂಗ್ ಕಾರ್ಯ

2022-23ರಲ್ಲಿ 5,243 ಕಿಲೋ ಮೀಟರ್, ಪ್ರತಿದಿನ ಸುಮಾನ 14.4 ಕಿಲೋ ಮೀಟರ್ ಹೊಸ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. 2014ರಿಂದ 2022ರವರೆಗೆ 3,970 ಕಿಲೋ ಮೀಟರ್ ಹೊಸ ಮಾರ್ಗ, 5,507 ಗೇಜ್ ಬದಲಾವಣೆ, 11,151 ಕಿಲೋ ಮೀಟರ್ ಡಬ್ಲಿಂಗ್ ಸೇರಿ ಒಟ್ಟು 20,628 ಕಿಲೋ ಮೀಟರ್ ಕಾರ್ಯಾಚರಣೆ ಮಾಡಲಾಗಿದೆ. ಆದ್ರೆ 2009ರಿಂದ 2014ರ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ 1,520 ಕಿಲೋ ಮೀಟರ್ ಕಾರ್ಯಾಚರಣೆ ಮಾಡಲಾಗಿತ್ತು. ಅಂದ್ರೆ 2014ರಿಂದ 2022ರ ಅವಧಿಯಲ್ಲಿ ಶೇ.70ರಷ್ಟು ಹೆಚ್ಚು ನಿರ್ಮಾಣ ಕಾರ್ಯಗಳಾಗಿವೆ.

2022-2023ರ ಬಜೆಟ್​ನಲ್ಲಿ ರೈಲ್ವೇ ಇಲಾಖೆಗೆ ಸರ್ವಕಾಲಿಕ ಹೆಚ್ಚು ಅನುದಾನ

2009ರಿಂದ 2014ರಲ್ಲಿ ರೈಲ್ವೆ ಇಲಾಖೆಗೆ 11,527 ಕೋಟಿ ಹಣ ನೀಡಲಾಗಿತ್ತು. ಆದ್ರೆ 2022-23ರ ಹಣಕಾಸಿನ ವರ್ಷದಲ್ಲೇ ಅದಕ್ಕಿಂತ ಶೇ.481ರಷ್ಟು ಹೆಚ್ಚು ಹಣ ನೀಡಲಾಗಿದೆ. ರೈಲ್ವೇ ಇಲಾಖೆ ಕೂಡ 2021-22ರಲ್ಲಿ ಸರಕು ಸಾಗಣೆಯಿಂದ 1.4 ಲಕ್ಷ ಕೋಟಿ ಆದಾಯ ತಂದುಕೊಟ್ಟಿದೆ.

ಇದನ್ನೂ ಓದಿ: Odisha Train Accident: ಬಾಲಸೋರ್ ಆಸ್ಪತ್ರೆಗೆ ತೆರಳಿ ಒಡಿಶಾ ರೈಲು ದುರಂತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ

2014ರಿಂದೀಚೆ ರೈಲ್ವೆ ಮಾರ್ಗದ ವಿದ್ಯುದ್ದೀಕರಣ

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭೂತಪೂರ್ವ ಬದಲಾವಣೆ ಆಗಿದೆ. ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ 21,400 ಕಿಲೋ ಮೀಟರ್ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲಾಗಿತ್ತು. ಆದ್ರೆ 2014ರಿಂದ 2023ರ ಅವಧಿಯಲ್ಲಿಯೇ 37,011 ಕಿಲೋ ಮೀಟರ್ ಮಾರ್ಗವನ್ನು ವಿದ್ಯುದ್ದೀಕರಿಸಲಾಗಿದೆ. ಭಾರತದಲ್ಲಿ ಸದ್ಯ ಶೇ. 90ರಷ್ಟು ರೈಲ್ವೇ ಮಾರ್ಗ ವಿದ್ಯುದ್ದೀಕರಣಗೊಂಡಿದೆ.

ಮುಂದುವರಿದ ಮತ್ತು ದೊಡ್ಡ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ರೈಲ್ವೇ ಇಲಾಖೆಯಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಯಾಗಿದೆ. ಅಮೆರಿಕದಲ್ಲಿ ಶೇ. 1ರಷ್ಟು, ಕೆನಡಾದಲ್ಲಿ ಶೇ.0.2ರಷ್ಟು, ಆಸ್ಟ್ರೇಲಿಯಾದಲ್ಲಿ ಶೇ.10ರಷ್ಟು, ರಷ್ಯಾ ಶೇ. 51ರಷ್ಟು , ಚೀನಾ ಶೇ.68ರಷ್ಟು ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣ ಆಗಿದೆ.

ಇಷ್ಟೆಲ್ಲಾ ಸಾಧನೆ ಮಾಡಿರುವ ರೈಲ್ವೆ ಇಲಾಖೆಯನ್ನು ನಿರುಪಯುಕ್ತ ಎಂಬಂತೆ ಹೀಯಾಳಿಸುತ್ತಿರುವುದು ಸರಿಯಲ್ಲ ಎಂಬುದು ತಜ್ಞರ ಅನಿಸಿಕೆ. ರೈಲುಗಳ ಇನ್ನಷ್ಟು ಸುರಕ್ಷತೆ ಆಗಬೇಕೆಂದರೆ ಹಳಿಗಳನ್ನು ಬದಲಿಸುವುದು ಅಗತ್ಯ. ಆ ಕಾರ್ಯ ಪೂರ್ಣವಾಗಿ ನಡೆಯಬೇಕೆಂದರೆ ಹಲವು ವರ್ಷಗಳೇ ಆಗುತ್ತವೆ. ಹಲವು ದಶಕಗಳಿಂದ ನಷ್ಟದಲ್ಲಿ ಸಾಗುತ್ತಾ ಇದ್ದ ಇಲಾಖೆ ಒಮ್ಮೆಲೇ ಮೈಕೊಡವಿ ನವನಿರ್ಮಾಣ ಆಗಬೇಕೆಂದು ನಿರೀಕ್ಷಿಸುವುದು ಸಾಧುವಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ