ಉತ್ತಮ ಕೆಲಸ ಕೊಡಿಸುವ ಆಮಿಷವೊಡ್ಡಿ ಅಪರಾಧಿಗಳಿಗೆ ಐಟಿ ವೃತ್ತಿಪರರನ್ನು ಒಪ್ಪಿಸಿದ ಜಾಬ್ ಕಂಪನಿ

ಬಂಧನದಲ್ಲಿಟ್ಟು ‘ಡೇಟಾ ಫ್ರಾಡ್’ ದುಷ್ಕೃತ್ಯ ಮಾಡಲು ಒತ್ತಾಯಿಸಲಾಗುತ್ತಿದೆ. ನಾವು ಬದುಕಿರಬೇಕು ಎಂದಾದರೆ ಇವರು ಹೇಳಿದಂತೆ ಕೇಳಬೇಕಿದೆ ಎಂದು ಐಟಿ ವೃತ್ತಿಪರರು ಕಣ್ಣೀರು ಹಾಕುತ್ತಿದ್ದಾರೆ.

ಉತ್ತಮ ಕೆಲಸ ಕೊಡಿಸುವ ಆಮಿಷವೊಡ್ಡಿ ಅಪರಾಧಿಗಳಿಗೆ ಐಟಿ ವೃತ್ತಿಪರರನ್ನು ಒಪ್ಪಿಸಿದ ಜಾಬ್ ಕಂಪನಿ
ಮ್ಯಾನ್ಮಾರ್​ನಲ್ಲಿ ಕೇರಳದ ಐಟಿ ವೃತ್ತಿಪರರು ಸಿಲುಕಿದ್ದಾರೆ (ಸಂಗ್ರಹ ಚಿತ್ರ)
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 26, 2022 | 8:05 AM

ತಿರುವನಂತಪುರ: ಥಾಯ್ಲೆಂಡ್​ ಮೂಲದ ಉದ್ಯೋಗ ಮಾರ್ಗದರ್ಶಿ (Job Providing Company) ಸಂಸ್ಥೆಯೊಂದರ ಮೋಸದ ಬಲೆಯಿಂದ ಮ್ಯಾನ್ಮಾರ್​ (ಬರ್ಮಾ) ದೇಶದಲ್ಲಿ ನೂರಾರು ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ (Indians Trapped in Myanmar). ಬಹುತೇಕರು ಕೇರಳ ಮೂಲದ ಐಟಿ ವೃತ್ತಿಪರರೇ ಆಗಿದ್ದು, ಅವರನ್ನು ಪ್ರಸ್ತುತ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ಗಡಿಯಲ್ಲಿ ಕೂಡಿ ಹಾಕಲಾಗಿದೆ. ಐಟಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ನಿರಂತರ ಒತ್ತಡ ಮತ್ತು ಚಿತ್ರಹಿಂಸೆ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ನಮ್ಮ ಮಕ್ಕಳನ್ನು ಬಿಡಿಸಿಕೊಂಡು ಬರಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ‘ಮ್ಯಾನ್ಮಾರ್​ನಲ್ಲಿ ಸಿಲುಕಿರುವ ಭಾರತೀಯರ ನಿಖರ ಅಂದಾಜು ತಿಳಿದಿಲ್ಲ. ಸುಮಾರು 150 ಮಂದಿ ಸಿಲುಕಿರುವ ಸಾಧ್ಯತೆಯಿದ್ದು, ಬಿಡಿಸಿಕೊಂಡು ಬರಲು ಯತ್ನಿಸುತ್ತೇವೆ’ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.

ಮ್ಯಾನ್ಮಾರ್​ನಲ್ಲಿ ಪ್ರಸ್ತುತ ಅಂತರ್ಯುದ್ಧದ ವಾತಾವರಣವಿದೆ. ಅಲ್ಲಿ ಸಿಲುಕಿರುವ ಭಾರತೀಯರ ಸಂಖ್ಯೆಯ ಬಗ್ಗೆ ಕೇಂದ್ರ ಸರ್ಕಾರವು ಈವರೆಗೆ ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಕೇರಳ ಸರ್ಕಾರವು ಸ್ಥಾಪಿಸಿರುವ ‘ಅನಿವಾಸಿ ಕೇರಳೀಯರ ಕಲ್ಯಾಣ ಸಂಸ್ಥೆ’ಗೆ 11 ಯುವಕರು ಕರೆ ಮಾಡಿ ತಮ್ಮ ಸಂಕಷ್ಟ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೇರಳದ ಒಟ್ಟು ನಿವಾಸಿಗಳ ಸಂಖ್ಯೆ ಸುಮಾರು 100 ಇರಬಹುದು. ಈ ಪೈಕಿ ಕೆಲವರಿಗೆ ಮಾತ್ರವೇ ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗಿದೆ. ಉಳಿದವರ ಪರಿಸ್ಥಿತಿ ಏನಾಗಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕೇರಳ ಸರ್ಕಾರವು ಈ ಯುವಕರು ಹಂಚಿಕೊಂಡ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮ್ಯಾನ್ಯಾರ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಹಂಚಿಕೊಂಡಿದೆ ಎಂದು ವಿದೇಶಗಳಲ್ಲಿ ಸಂಕಷ್ಟದಲ್ಲಿರುವವರ ನೆರವಿಗಾಗಿ ಸ್ಥಾಪಿಸಿರುವ ‘ನೊರ್ಕಾ ರೂಟ್ಸ್​’ (Norka Roots) ಸಂಸ್ಥೆಯ ಸಿಇಒ ಹರಿಕೃಷ್ಣನ್ ನಂಬೂದಿರಿ ಹೇಳಿದ್ದಾರೆ. ಕೆಲವು ಯುವಕರು ತಾವು ಸಿಲುಕಿರುವ ಪ್ರದೇಶದ ಜಿಪಿಎಸ್ ವಿವರವನ್ನೂ ಹಂಚಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಭಾರತೀಯರು ಅಥವಾ ಕೇರಳೀಯರ ಸಂಖ್ಯೆ ಎಷ್ಟು ಎಂಬುದು ನಮಗೆ ತಿಳಿದಿಲ್ಲ. ಆದರೆ ದಕ್ಷಿಣ ಕೇರಳದ ಯುವಕರಲ್ಲಿ ಒಬ್ಬರು ತಮ್ಮ ಜಿಲ್ಲೆಯೊಂದರರಿಂದ ಹೋಗಿದ್ದ ಕನಿಷ್ಠ 100 ಜನರು ಇರಬಹುದು ಎಂದು ಹೇಳಿದ್ದಾರೆ’ ಎಂದು ನಂಬೂದಿರಿ ಹೇಳಿದ್ದಾರೆ. ತಮ್ಮ ಕುಟುಂಬಗಳೊಂದಿಗೆ ವೀಡಿಯೊ ಸಂದೇಶಗಳನ್ನು ಹಂಚಿಕೊಂಡಿರುವ ಯುವಕರು, ಸೈಬರ್ ಅಪರಾಧಗಳನ್ನು ಮಾಡಲು ತಮ್ಮನ್ನು ಒತ್ತಾಯಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅವರಲ್ಲಿ ಹೆಚ್ಚಿನವರು ಐಟಿ ವೃತ್ತಿಪರರಾಗಿದ್ದಾರೆ.

ಮ್ಯಾನ್ಮಾರ್ ಸರ್ಕಾರದ ನಿಯಂತ್ರಣವಿಲ್ಲದ ಥಾಯ್ಲೆಂಡ್ ಗಡಿಗೆ ಅವರನ್ನು ಕರೆದೊಯ್ಯಲಾಗಿದ್ದು, ಸೈಬರ್ ಅಪರಾಧಗಳನ್ನು ಮಾಡಲು ಒತ್ತಾಯಿಸಲಾಗುತ್ತಿದೆ. ದುಷ್ಕರ್ಮಿಗಳು ತಮ್ಮ ಮಗ ಮತ್ತು ಇತರ ಒತ್ತೆಯಾಳುಗಳನ್ನು ನಿರಂತರವಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಸರಿಯಾಗಿ ಊಟ ಕೊಡುತ್ತಿಲ್ಲ. ಅವರ ಪರಿಸ್ಥಿತಿ ಆತಂಕಕಾರಿಯಾಗಿದೆ’ ಎಂದು ಹಲವು ಪೋಷಕರು ಆತಂಕ ತೋಡಿಕೊಂಡಿದ್ದಾರೆ.

ಉತ್ತಮ ಉದ್ಯೋಗ ಸಿಗಬಹುದು ಎನ್ನುವ ಆಸೆಯಿಂದ ಸುಮಾರು ₹ 1.2 ಲಕ್ಷ ಖರ್ಚು ಮಾಡಿಕೊಂಡು ಇಲ್ಲಿಗೆ ಬಂದೆವು. ಆದರೆ ನಮ್ಮನ್ನು ಈಗ ಬಂಧನದಲ್ಲಿಟ್ಟು ‘ಡೇಟಾ ಫ್ರಾಡ್’ ದುಷ್ಕೃತ್ಯ ಮಾಡಲು ಒತ್ತಾಯಿಸಲಾಗುತ್ತಿದೆ. ನಾವು ಬದುಕಿರಬೇಕು ಎಂದಾದರೆ ಇವರು ಹೇಳಿದಂತೆ ಕೇಳಬೇಕಿದೆ. ಭಾರತ ಸರ್ಕಾರವೇ ನಮ್ಮನ್ನು ಕಾಪಾಡಬೇಕು’ ಎಂದು ಅಕ್ರಮ ಬಂಧನದಲ್ಲಿರುವ ಐಟಿ ವೃತ್ತಿಪರರು ತಮ್ಮ ಕುಟುಂಬಗಳಿಗೆ ಕಳಿಸಿರುವ ವಿಡಿಯೊ ಮೆಸೇಜ್​ನಲ್ಲಿ ಕಣ್ಣೀರು ಇಡುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada