ವಡೋದರಾದಲ್ಲಿ ಟಾಟಾ ಗ್ರೂಪ್​ನಿಂದ ಮಿಲಿಟರಿ ವಿಮಾನದ ಫ್ಯಾಕ್ಟರಿ; ಸ್ಪೇನ್ ಪ್ರಧಾನಿ ಮತ್ತು ನರೇಂದ್ರ ಮೋದಿಯಿಂದ ಉದ್ಘಾಟನೆ

|

Updated on: Oct 28, 2024 | 11:26 AM

Tata Aircraft Complex: ಗುಜರಾತ್​ನ ವಡೋದರಾದಲ್ಲಿ ಸಿ-295 ವಿಮಾನ ತಯಾರಿಕೆಯ ಘಟಕವೊಂದನ್ನು ಆರಂಭಿಸಲಾಗಿದೆ. ಇದು ಭಾರತದ ಮೊದಲ ಖಾಸಗಿ ಮಿಲಿಟರಿ ಏರ್​ಕ್ರಾಫ್ಟ್ ಫ್ಯಾಕ್ಟರಿಯಾಗಿದೆ. ಸ್ಪೇನ್​ನ ಏರ್​ಬಸ್ ಸಹಯೋಗದಲ್ಲಿ ಟಾಟಾ ಸಂಸ್ಥೆ ಈ ವಿಮಾನವನ್ನು ತಯಾರಿಸಲಿದೆ. ಭಾರತ ಮತ್ತು ಸ್ಪೇನ್ ಪ್ರಧಾನಿಗಳು ಇಂದು ಸೋಮವಾರ ಈ ಘಟಕಕ್ಕೆ ಚಾಲನೆ ನೀಡಿದ್ದಾರೆ.

ವಡೋದರಾದಲ್ಲಿ ಟಾಟಾ ಗ್ರೂಪ್​ನಿಂದ ಮಿಲಿಟರಿ ವಿಮಾನದ ಫ್ಯಾಕ್ಟರಿ; ಸ್ಪೇನ್ ಪ್ರಧಾನಿ ಮತ್ತು ನರೇಂದ್ರ ಮೋದಿಯಿಂದ ಉದ್ಘಾಟನೆ
ಸ್ಪೇನ್ ಪ್ರಧಾನಿ ಜೊತೆ ನರೇಂದ್ರ ಮೋದಿ
Follow us on

ವಡೋದರಾ, ಅಕ್ಟೋಬರ್ 28: ಭಾರತದ ಮೊದಲ ಖಾಸಗಿ ಯುದ್ಧವಿಮಾನ ತಯಾರಿಕೆಯ ಘಟಕ ಗುಜರಾತ್​ನ ವಡೋದರಾದಲ್ಲಿ ಚಾಲನೆಗೊಂಡಿದೆ. ಟಾಟಾ ಏರ್​ಕ್ರಾಫ್ಟ್ ಕಾಂಪ್ಲೆಕ್ಸ್​ನಲ್ಲಿ ಸಿ-295 ವಿಮಾನ ತಯಾರಿಕೆಯ ಘಟಕ ಇದಾಗಿದೆ. ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಈ ಕಾಂಪ್ಲೆಕ್ಸ್ ಅನ್ನು ಉದ್ಘಾಟನೆ ಮಾಡಿದ್ದಾರೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್​ನ ಕ್ಯಾಂಪಸ್​ನಲ್ಲಿರುವ ಈ ಘಟಕದಲ್ಲಿ ಸ್ಪೇನ್ ಮೂಲದ ವಿಮಾನ ತಯಾರಿಕೆಯ ಸಂಸ್ಥೆ ಏರ್​ಬಸ್ ಸಹಯೋಗದಲ್ಲಿ ಸಿ-295 ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುತ್ತದೆ. ಒಟ್ಟಾರೆ ಈ ಯೋಜನೆಯಲ್ಲಿ 56 ವಿಮಾನಗಳ ತಯಾರಿಕೆಗೆ ಒಪ್ಪಂದವಾಗಿದೆ. ಏರ್​ಬಸ್ ಸಂಸ್ಥೆ ತನ್ನ ದೇಶದಲ್ಲಿರುವ ತಯಾರಿಕಾ ಘಟಕದಿಂದ 16 ವಿಮಾನಗಳನ್ನು ತಯಾರಿಸಿ ಅಲ್ಲಿಂದಲೇ ನೇರವಾಗಿ ಭಾರತಕ್ಕೆ ಕಳುಹಿಸಲಿದೆ. ಇನ್ನುಳಿದ 40 ವಿಮಾನಗಳನ್ನು ಟಾಟಾ ಸಂಸ್ಥೆಯ ವಡೋದರಾ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ.

ಇದನ್ನೂ ಓದಿ: ಜಮ್ಮುವಿನ ಅಖ್ನೂರ್​ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಉಗ್ರರ ದಾಳಿ; ಗುಲ್ಮಾರ್ಗ್​ನಲ್ಲಿ ಗುಂಡಿನ ಚಕಮಕಿ

ಭಾರತ ಮತ್ತು ಸ್ಪೇನ್ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಪೆಡ್ರೋ ಸಾಂಚೆಜ್ ಅವರು ಟಾಟಾ ಘಟಕಕ್ಕೆ ಚಾಲನೆ ನೀಡುವ ಮುನ್ನ ಏರ್​ಪೋರ್ಟ್​ನಿಂದ ಎರಡೂವರೆ ಕಿಮೀ ದೂರ ರೋಡ್​ಶೋ ನಡೆಸಿದರು. ಈ ಘಟಕದ ಉದ್ಘಾಟನೆಯನ್ನು ಭಾರತೀಯ ವಾಯುಯಾನ ಉದ್ಯಮಕ್ಕೆ ಒಂದು ವಿಶೇಷ ದಿನ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

‘ಸಿ-295 ಯೋಜನೆಯು ಭಾರತೀಯ ಖಾಸಗಿ ಉದ್ಯಮಕ್ಕೆ ಮಹತ್ತರ ಮೈಲಿಗಲ್ಲಾಗಿದೆ. ಖಾಸಗಿ ಕಂಪನಿಯೊಂದು ಇದೇ ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ ಮಿಲಿಟರಿ ವಿಮಾನವನ್ನು ತಯಾರಿಸಲಾಗುತ್ತಿದೆ. ಭಾರತದಲ್ಲಿ ಬೆಳವಣಿಗೆ ಹೊಂದುತ್ತಿರುವ ಏರೋಸ್ಪೇಸ್ ಇಕೋಸಿಸ್ಟಂಗೆ ಈ ಯೋಜನೆ ಒಳ್ಳೆಯ ಪುಷ್ಟಿ ನೀಡಲಿದೆ,’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ತಿರುಪತಿಯ ಇಸ್ಕಾನ್ ದೇಗುಲಕ್ಕೆ ಬಾಂಬ್ ಬೆದರಿಕೆ ಸಂದೇಶ: ಹೈ ಅಲರ್ಟ್​

ಸಿ-295 ಏರ್​​ಕ್ರಾಫ್ಟ್ ವಿಶೇಷತೆಗಳು…

ವಿಶ್ವದ ಎರಡು ಪ್ರಮುಖ ವಿಮಾನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಏರ್​ಬಸ್ ಸಂಸ್ಥೆಯ ಸಿ-295 ಮಿಲಿಟರಿ ವಿಮಾನ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಯಲ್ಲೂ ಕ್ಷಮತೆಯಿಂದ ಕೆಲಸ ಮಾಡುತ್ತದೆ. ಒಮ್ಮೆ ಇಂಧನ ತುಂಬಿಸಿದರೆ ಇದು 11 ಗಂಟೆ ಕಾಲ ಹಾರಾಡಬಲ್ಲುದು. ಭಾರತದ ವಾಯುಪಡೆಯಲ್ಲಿ ಆವ್ರೋ-748 ವಿಮಾನಗಳ ಅವಧಿ ಬಹುತೇಕ ಮುಗಿಯುತ್ತಿದ್ದು ಅವುಗಳ ಸ್ಥಾನದಲ್ಲಿ ಹೆಚ್ಚು ಶಕ್ತಿಶಾಲಿಯಾದ ಸಿ-295 ವಿಮಾನಗಳನ್ನು ಸೇರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ