IndiGo Crisis: ಡಿಸೆಂಬರ್​ನಲ್ಲಿ ಉಂಟಾದ ವಿಮಾನಗಳ ಹಾರಾಟದ ತೊಂದರೆಗೆ ಇಂಡಿಗೋಗೆ 22 ಕೋಟಿ ರೂ. ದಂಡ!

ಡಿಸೆಂಬರ್ 2025ರಲ್ಲಿ ಸಂಭವಿಸಿದ ಬೃಹತ್ ವಿಮಾನ ಹಾರಾಟದ ಅಡಚಣೆಗಳ ಹಿಂದೆ ಪ್ಲಾನಿಂಗ್ ಕೊರತೆ, ಕಾರ್ಯಾಚರಣೆ ಮತ್ತು ನಿಯಂತ್ರಕ ಲೋಪಗಳು ಕಂಡುಬಂದಿವೆ ಎಂದು ತನಿಖೆಯಲ್ಲಿ ಕಂಡುಬಂದ ನಂತರ ನಾಗರಿಕ ವಿಮಾನಯಾನ ನಿಯಂತ್ರಕ (ಡಿಜಿಸಿಎ) ಇಂಡಿಗೋ ಸಂಸ್ಥೆಗೆ 22.20 ಕೋಟಿ ರೂ. ದಂಡ ವಿಧಿಸಿದೆ. ಕಳೆದ ವರ್ಷ ಡಿಸೆಂಬರ್ 3 ಮತ್ತು 5ರ ನಡುವೆ ಇಂಡಿಗೋ ವಿಮಾನಗಳಲ್ಲಿ ಭಾರೀ ವಿಳಂಬಗಳು ಮತ್ತು ರದ್ದತಿಗಳು ಸಂಭವಿಸಿತ್ತು. ಈ ಸಮಯದಲ್ಲಿ ಇಂಡಿಗೋ 2,507 ವಿಮಾನಗಳನ್ನು ರದ್ದುಗೊಳಿಸಿತ್ತು ಮತ್ತು 1,852 ವಿಮಾನಗಳು ವಿಳಂಬವಾಗಿದ್ದವು. ಇದರಿಂದ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದರು.

IndiGo Crisis: ಡಿಸೆಂಬರ್​ನಲ್ಲಿ ಉಂಟಾದ ವಿಮಾನಗಳ ಹಾರಾಟದ ತೊಂದರೆಗೆ ಇಂಡಿಗೋಗೆ 22 ಕೋಟಿ ರೂ. ದಂಡ!
Indigo

Updated on: Jan 17, 2026 | 11:05 PM

ನವದೆಹಲಿ, ಜನವರಿ 17: 2025ರ ಡಿಸೆಂಬರ್​ನಲ್ಲಿ ಇಂಡಿಗೋ (IndiGo) ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟಾಗಿತ್ತು. ಡಿಸೆಂಬರ್ 3ರಿಂದ 5ರವರೆಗೆ ಇಂಡಿಗೋ ಸಾವಿರಾರು ವಿಮಾನಗಳ ಹಾರಾಟವನ್ನು ರದ್ದುಮಾಡಿತ್ತು. ವಿಮಾನಗಳ ರದ್ದತಿ ಮತ್ತು ವಿಳಂಬಗಳಿಗೆ ಪ್ರತಿಕ್ರಿಯೆಯಾಗಿ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ಸಂಸ್ಥೆಗೆ 22.2 ಕೋಟಿ ರೂ. ದಂಡ ವಿಧಿಸಿದೆ. ಇದರ ಜೊತೆಗೆ ಇಂಡಿಗೋ ವಿಮಾನಯಾನ ಸಂಸ್ಥೆಗೆ 50 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಿದೆ.

ಡಿಸೆಂಬರ್ ಮೊದಲ ವಾರ ಇಂಡಿಗೋ 2,507 ವಿಮಾನಗಳನ್ನು ರದ್ದುಗೊಳಿಸಿತ್ತು. ಇಂಡಿಗೋದ 1,852 ವಿಮಾನಗಳ ಹಾರಾಟ ವಿಳಂಬಗೊಂಡಿತ್ತು. ಇದರಿಂದಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಇದರಿಂದ ಸಾವಿರಾರು ಪ್ರಯಾಣಿಕರು ಮದುವೆ, ತಿಥಿ, ನಾಮಕರಣ ಮುಂತಾದ ತಮ್ಮ ಜೀವನದ ಅಮೂಲ್ಯ ಕ್ಷಣಗಳಿಂದ ವಂಚಿತರಾದರು. ಅನೇಕ ಜನರು ಆಹಾರ, ನಿದ್ರೆಯಿಲ್ಲದೆ ಅನಾರೋಗ್ಯಕ್ಕೂ ತುತ್ತಾದರು. ಈ ಸಮಸ್ಯೆಗಳನ್ನು ಪರಿಹರಿಸಲು ಇಂಡಿಗೋ ಸಂಸ್ಥೆ ವಿಫಲವಾದ ಕಾರಣ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರ ಕೂಡ ಇಂಡಿಗೋ ಮುಖ್ಯಸ್ಥರ ಜೊತೆ ಸಭೆ ನಡೆಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಅದರಂತೆ ಇದೀಗ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.


ಇದನ್ನೂ ಓದಿ: ವಿಮಾನ ರದ್ದತಿಯಿಂದ ತೀವ್ರ ತೊಂದರೆಗೊಳಗಾದ ಪ್ರಯಾಣಿಕರಿಗೆ ಇಂಡಿಗೋದಿಂದ 10,000 ರೂ. ಪ್ರಯಾಣ ವೋಚರ್‌

“ಡಿಸೆಂಬರ್ 2025ರ ಅಡಚಣೆಗಳ ಸಂದರ್ಭದಲ್ಲಿ ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಕಾರ್ಯಾಚರಣೆಯ ಲೋಪಗಳಿಗೆ ನಾವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ” ಎಂದು ಇಂಡಿಗೋ ವಕ್ತಾರರು ಹೇಳಿದ್ದಾರೆ. ಇದರ ಜೊತೆಗೆ ವಿಮಾನಗಳು ರದ್ದಾದ ಅಥವಾ 3 ಗಂಟೆಗಳಿಗಿಂತ ಹೆಚ್ಚು ವಿಳಂಬವಾದ ಪ್ರಯಾಣಿಕರಿಗೆ 10,000 ರೂ. ವೋಚರ್ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ