AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಗಾಂಧಿ ಸೋಲಿನ ಬಳಿಕ ರಾಹುಲ್ ಹುಟ್ಟುಹಬ್ಬಕ್ಕೆ ಸ್ನೇಹಿತರೇ ಬರಲಿಲ್ಲ: ಸೋನಿಯಾ ಗಾಂಧಿ ನೆನಪು

1977ರಲ್ಲಿ ಇಂದಿರಾ ಗಾಂಧಿಯವರ ಚುನಾವಣಾ ಸೋಲಿನ ಪರಿಣಾಮ ರಾಹುಲ್ ಗಾಂಧಿಯವರ ಏಳನೇ ಹುಟ್ಟುಹಬ್ಬದ ಮೇಲೂ ಬೀರಿತು. ಸ್ನೇಹಿತರು ಬಾರದೆ ರಾಹುಲ್ ಬೇಸರಗೊಂಡರು. ಈ ಘಟನೆಯನ್ನು ಸೋನಿಯಾ ಗಾಂಧಿ ತಮ್ಮ ಆತ್ಮಕಥನ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನಲ್ಲಿ ನೆನಪಿಸಿಕೊಂಡಿದ್ದಾರೆ. ರಾಜಕೀಯ ಸೋಲು ಕುಟುಂಬದ ಖಾಸಗಿ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರಿಸುತ್ತದೆ.

ಇಂದಿರಾ ಗಾಂಧಿ ಸೋಲಿನ ಬಳಿಕ ರಾಹುಲ್ ಹುಟ್ಟುಹಬ್ಬಕ್ಕೆ ಸ್ನೇಹಿತರೇ ಬರಲಿಲ್ಲ: ಸೋನಿಯಾ ಗಾಂಧಿ ನೆನಪು
ಸೋನಿಯಾ ಗಾಂಧಿ, ರಾಹುಲ್ Image Credit source: Business Today
ನಯನಾ ರಾಜೀವ್
|

Updated on: Nov 11, 2026 | 11:15 AM

Share

ನವದೆಹಲಿ, ನವೆಂಬರ್ 11: 1977ರಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತ ಬಳಿಕ ಗಾಂಧಿ ಕುಟುಂಬದ ಜೀವನದಲ್ಲಿ ಹಲವು ಬದಲಾವಣೆಗಳಾದವು. ರಾಜಕೀಯ ಸೋಲಿನ ಪರಿಣಾಮ ಏಳು ವರ್ಷದ ರಾಹುಲ್ ಗಾಂಧಿಯವರ ವೈಯಕ್ತಿಕ ಬದುಕಿನ ಮೇಲೂ ಬೀರಿತ್ತು. ಅಂದು ಅವರ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದ ಬಹುತೇಕ ಸ್ನೇಹಿತರು ಬರಲೇ ಇಲ್ಲ. ಒಬ್ಬನೇ ಒಬ್ಬ ಸ್ನೇಹಿತ ಸಿದ್ಧಾರ್ಥ್ ಪಾರ್ಟಿಗೆ ಬಂದಿದ್ದ. ಈ ಘಟನೆಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕಥನ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್​ನಲ್ಲಿ ನೆನಪಿಸಿಕೊಂಡಿದ್ದಾರೆ.

ಪಾರ್ಟಿಗೆ ಸಿದ್ಧತೆ ಮಾಡಿದ್ದ ಸೋನಿಯಾ

ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಜೂನ್ 19ರಂದು. 1977ರಲ್ಲಿ ಕುಟುಂಬವು ದೆಹಲಿಯ 12, ವಿಲ್ಲಿಂಗ್ಡನ್ ಕ್ರೆಸೆಂಟ್‌ನ ಹೊಸ ಮನೆಗೆ ಸ್ಥಳಾಂತರಗೊಂಡಿತ್ತು. ಆ ಸಮಯದಲ್ಲಿ ಸೋನಿಯಾ ಗಾಂಧಿ ಮಗನಿಗಾಗಿ ಚಿಕ್ಕದಾದ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲು ನಿರ್ಧರಿಸಿದ್ದರು.

ರಾಹುಲ್ ತಮ್ಮ ಹಿಂದಿನ ಹುಟ್ಟುಹಬ್ಬದ ಪಾರ್ಟಿಗಳಿಗೆ ಬಂದಿದ್ದ ಸ್ನೇಹಿತರ ಹೆಸರಿನ ಪಟ್ಟಿಯನ್ನೂ ತಾಯಿಗೆ ನೀಡಿದ್ದರು. ಸೋನಿಯಾ ಮತ್ತು ಮಗಳು ಪ್ರಿಯಾಂಕಾ ಸೇರಿ ಕೇಕ್ ತಯಾರಿಸಿ, ಬಲೂನ್‌ಗಳು ಮತ್ತು ಅಲಂಕಾರಗಳಿಂದ ಮನೆಯನ್ನು ಸಿದ್ಧಪಡಿಸಿದ್ದರು. ಆದರೆ ಆಹ್ವಾನಿತ ಮಕ್ಕಳು ಒಬ್ಬೊಬ್ಬರಾಗಿ ಬರಬೇಕಾದ ಸಮಯ ಕಳೆದರೂ ಯಾರೂ ಬರಲಿಲ್ಲ. ಕೊನೆಗೆ ರಾಹುಲ್ ಅವರ ಆತ್ಮೀಯ ಸ್ನೇಹಿತ ಸಿದ್ಧಾರ್ಥ್ ಮಾತ್ರ ಪಾರ್ಟಿಗೆ ಬಂದಿದ್ದ.

ರಾಜಕೀಯದಿಂದ ಮಕ್ಕಳ ಸ್ನೇಹಕ್ಕೂ ಧಕ್ಕೆ

ಆರಂಭದಲ್ಲಿ ಮಕ್ಕಳು ಬರದಿರುವುದಕ್ಕೆ ಸಂವಹನದ ಸಮಸ್ಯೆ ಕಾರಣವಿರಬಹುದು ಎಂದು ಸೋನಿಯಾ ಭಾವಿಸಿದ್ದರು. ಆದರೆ ಸ್ನೇಹಿತರ ಪೋಷಕರು ಗಾಂಧಿ ಕುಟುಂಬದೊಂದಿಗೆ ಸಂಬಂಧ ಬೆಳೆಸಲು ಹಿಂಜರಿಯುತ್ತಿದ್ದಾರೆ ಎಂಬುದು ಅವರಿಗೆ ನಂತರ ಅರ್ಥವಾಯಿತು. ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತಿದ್ದರಿಂದ ರಾಜಕೀಯ ವಾತಾವರಣ ಬದಲಾಗಿತ್ತು. ಅದರ ಪರಿಣಾಮ ಮಕ್ಕಳ ನಡುವಿನ ಸ್ನೇಹದ ಮೇಲೂ ಬಿದ್ದಿತ್ತು. ರಾಹುಲ್‌ಗೆ ಇದರಿಂದ ಬೇಸರವಾಗಿತ್ತು. ಕೊನೆಗೆ ಕುಟುಂಬದವರು ಹೆಚ್ಚು ಉತ್ಸಾಹವಿಲ್ಲದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.

ಇದನ್ನೂ ಓದಿ:

ಪ್ರಧಾನಿಯಾಗಲು ಒಪ್ಪಿದ್ದ ಸೋನಿಯಾ ಗಾಂಧಿ ಮನೆಯಲ್ಲಿ ಆ ರಾತ್ರಿ ಏನಾಯ್ತು?

ರಾಜೀವ್ ಗಾಂಧಿ ಮಗನಿಗೆ ಹೇಳಿದ್ದೇನು?

ರಾಹುಲ್ ಬೇಸರಗೊಂಡಿರುವುದನ್ನು ಕಂಡ ತಂದೆ ರಾಜೀವ್ ಗಾಂಧಿ ಮಗನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. “ಇದು ನಿನ್ನ ಸ್ನೇಹಿತರ ತಪ್ಪಲ್ಲ. ಅವರ ಮೇಲೆ ಬೇಸರ ಮಾಡಿಕೊಳ್ಳಬೇಡ. ಬಹುಶಃ ಅವರ ಪೋಷಕರು ನಮ್ಮ ಕುಟುಂಬದೊಂದಿಗೆ ಸ್ನೇಹ ಬೆಳೆಸಲು ಹೆದರುತ್ತಿರಬಹುದು. ಕೆಲವು ಜನರು ಸರ್ಕಾರಕ್ಕೆ ಹೆದರುತ್ತಾರೆ” ಎಂದು ರಾಜೀವ್ ಹೇಳಿದ್ದಾಗಿ ಸೋನಿಯಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಹುಟ್ಟುಹಬ್ಬಕ್ಕೆ ಇಂದಿರಾ ಗಾಂಧಿ ತಂದಿದ್ದ ವಿಶೇಷ ಉಡುಗೊರೆ

ಈ ಪಾರ್ಟಿಯಲ್ಲಿ ಇಂದಿರಾ ಗಾಂಧಿ ಕೂಡ ಭಾಗಿಯಾಗಿದ್ದರು. ಅವರು ಬಂಗಾಳದ ಮಣ್ಣಿನಿಂದ ತಯಾರಿಸಿದ ಕೀಟಗಳು, ಹಲ್ಲಿಗಳು ಮತ್ತು ನೊಣಗಳಂತೆ ಕಾಣುವ ಆಟಿಕೆಗಳನ್ನು ಸಂಗ್ರಹಿಸಿಟ್ಟಿದ್ದರು. ಮಕ್ಕಳಿಗೆ ಅನಿರೀಕ್ಷಿತವಾಗಿ ಈ ಆಟಿಕೆಗಳನ್ನು ತೋರಿಸಿ ಅವರನ್ನು ಬೆಚ್ಚಿಬೀಳಿಸುವುದು ಇಂದಿರಾ ಅವರಿಗೆ ಇಷ್ಟವಾಗಿತ್ತು. ಆದರೆ ಆ ದಿನ ಪಾರ್ಟಿಗೆ ಮಕ್ಕಳು ಬಾರದ ಕಾರಣ ಆ ಆಟಿಕೆಗಳನ್ನೂ ಬಳಸಲು ಸಾಧ್ಯವಾಗಲಿಲ್ಲ. “ಇನ್ನೊಂದು ದಿನ ಬಳಸಬಹುದು” ಎಂದು ಇಂದಿರಾ ಬೇಸರದಿಂದ ಹೇಳಿದ್ದನ್ನು ಸೋನಿಯಾ ನೆನಪಿಸಿಕೊಂಡಿದ್ದಾರೆ.

ಪ್ರಿಯಾಂಕಾ ಕಲಿಸಿದ ಕ್ಷಮೆಯ ಪಾಠ

ಪುಸ್ತಕದಲ್ಲಿ ಪ್ರಿಯಾಂಕಾ ಗಾಂಧಿ ಅವರ ಬಾಲ್ಯದ ಮತ್ತೊಂದು ಘಟನೆಯನ್ನೂ ಸೋನಿಯಾ ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಒಬ್ಬ ಹುಡುಗ ಪ್ರಿಯಾಂಕಾಗೆ ನೋವಾಗುವಂತೆ ಮಾತನಾಡಿದ್ದರಿಂದ ಆಕೆ ಅಳುತ್ತಿದ್ದಳು. ಇದನ್ನು ತಿಳಿದು ಸೋನಿಯಾ ಶಾಲೆಗೆ ಧಾವಿಸಿದ್ದರು. ಆದರೆ ಆ ಹುಡುಗನಿಗೆ ಶಿಕ್ಷಕರು ಈಗಾಗಲೇ ಬುದ್ಧಿ ಹೇಳಿದ್ದರಿಂದ ಮತ್ತೆ ಏನೂ ಮಾಡಬೇಡಿ ಎಂದು ಪ್ರಿಯಾಂಕಾ ತಾಯಿಗೆ ಮನವಿ ಮಾಡಿದ್ದಳು. ಐದು ವರ್ಷದ ಮಗಳು ತನಗೆ ಕ್ಷಮಿಸುವ ಪಾಠ ಕಲಿಸಿದಳು ಎಂದು ಸೋನಿಯಾ ಬರೆದಿದ್ದಾರೆ.

1977ರಲ್ಲಿ ಇಂದಿರಾ ಗಾಂಧಿ ಸೋತಿದ್ದೇಕೆ?

1975ರ ಜೂನ್ 25ರಂದು ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ಅವಧಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳು ಹೇರಲ್ಪಟ್ಟಿದ್ದವು. ವಿರೋಧ ಪಕ್ಷದ ಹಲವು ನಾಯಕರು ಜೈಲಿಗೆ ಹೋಗಿದ್ದರು. ಬಲವಂತದ ಕುಟುಂಬ ಯೋಜನೆ ಮತ್ತು ಇತರ ಸರ್ಕಾರಿ ಕ್ರಮಗಳೂ ವ್ಯಾಪಕ ಟೀಕೆಗೆ ಗುರಿಯಾಗಿದ್ದವು.

1977ರ ಮಾರ್ಚ್ 16ರಿಂದ 20ರವರೆಗೆ ಲೋಕಸಭೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿ, ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಇಂದಿರಾ ಗಾಂಧಿ ರಾಯ್‌ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಸೋತರೆ, ಅವರ ಪುತ್ರ ಸಂಜಯ್ ಗಾಂಧಿ ಅಮೇಠಿಯಲ್ಲಿ ಸೋತಿದ್ದರು. ಮೊರಾರ್ಜಿ ದೇಸಾಯಿ ದೇಶದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರು. ಮಾರ್ಚ್ 21ರಂದು ತುರ್ತು ಪರಿಸ್ಥಿತಿ ಅಧಿಕೃತವಾಗಿ ಅಂತ್ಯಗೊಂಡಿತು.

1978ರಲ್ಲಿ ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಇಂದಿರಾ ಗಾಂಧಿ ಗೆಲುವು ಸಾಧಿಸಿದರು. ಇದು ರಾಜಕೀಯವಾಗಿ ಮತ್ತೆ ಪುಟಿದೇಳಲು ಅವರಿಗೆ ನೆರವಾಯಿತು.

ಸೋನಿಯಾ ಗಾಂಧಿ ಆತ್ಮಕಥನದಲ್ಲೇನಿದೆ?

ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಎಂಬುದು ಸೋನಿಯಾ ಗಾಂಧಿಯವರ ವೈಯಕ್ತಿಕ ಬದುಕು, ಕುಟುಂಬ, ರಾಜೀವ್ ಗಾಂಧಿ ಜೊತೆಗಿನ ಸಂಬಂಧ, ಇಂದಿರಾ ಗಾಂಧಿಯವರೊಂದಿಗಿನ ಒಡನಾಟ ಮತ್ತು ರಾಜಕೀಯ ಜೀವನದ ಅನುಭವಗಳನ್ನು ಒಳಗೊಂಡ ಆತ್ಮಕಥನ. 544 ಪುಟಗಳ ಈ ಪುಸ್ತಕವನ್ನು ಭಾರತದಲ್ಲಿ ನವೆಂಬರ್ 10ರಂದು ಹಾರ್ಪರ್‌ಕಾಲಿನ್ಸ್ ಪ್ರಕಟಿಸಿದೆ. ತಮ್ಮ ಕುಟುಂಬದ ಖಾಸಗಿ ಬದುಕು ಮತ್ತು ಇದುವರೆಗೆ ಹೆಚ್ಚು ಹಂಚಿಕೊಳ್ಳದ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವುದು ಈ ಪುಸ್ತಕದ ಉದ್ದೇಶ ಎಂದು ಸೋನಿಯಾ ಹೇಳಿದ್ದಾರೆ.

ಇಂದಿರಾ ಗಾಂಧಿಯವರ ಚುನಾವಣಾ ಸೋಲು ಕೇವಲ ರಾಜಕೀಯ ಬದಲಾವಣೆಯಾಗಿರಲಿಲ್ಲ. ಅದರ ಪರಿಣಾಮ ಕುಟುಂಬದ ಮಕ್ಕಳ ಬದುಕಿನ ಮೇಲೂ ಹೇಗೆ ಬೀರಿತ್ತು ಎಂಬುದನ್ನು ರಾಹುಲ್ ಅವರ ಏಳನೇ ಹುಟ್ಟುಹಬ್ಬದ ಘಟನೆಯ ಮೂಲಕ ಸೋನಿಯಾ ಗಾಂಧಿ ವಿವರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More