ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಮೇಲ್ಛಾವಣಿ ಕುಸಿದು ದುರಂತ: ಸಾವಿನ ಸಂಖ್ಯೆ 35ಕ್ಕೆ ಏರಿಕೆ
ಮಹಿಳೆಯೊಬ್ಬರು ಏಣಿಯ ಸಹಾಯದಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ಮೆಟ್ಟಿಲು ಬಾವಿಗೆ ಬೀಳುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ
ಮಧ್ಯಪ್ರದೇಶದ ಇಂದೋರ್‌ನ (Indore) ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಮೆಟ್ಟಿಲುಬಾವಿ ಮೇಲ್ಛಾವಣಿ (stepwell roof) ಕುಸಿತದ ಸಾವಿನ ಸಂಖ್ಯೆ 35 ಕ್ಕೆ ಏರಿದೆ, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಇನ್ನೂ 21 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಹತ್ತಾರು ಜನರು ರಾಮನವಮಿ ವಿಶೇಷ ಪ್ರಾರ್ಥನೆಗಾಗಿ ದೇವಸ್ಥಾನದಲ್ಲಿದ್ದಾಗ ಕಲ್ಲಿನ ಚಪ್ಪಡಿಗಳಿಂದ ಆವೃತವಾದ ಛಾವಣಿ ಕುಸಿದಿದೆ. ಮೆಟ್ಟಿಲುಬಾವಿಯಲ್ಲಿ ಒಂಬತ್ತು ಅಡಿ ಆಳ ನೀರಿದ್ದು, ಕೆಸರು ತುಂಬಿತ್ತು. ತಕ್ಷಣ ಕನಿಷ್ಠ 15 ಜನರನ್ನು ರಕ್ಷಿಸಲಾಯಿತು ಮತ್ತು ಹಗ್ಗಗಳ ಸಹಾಯದಿಂದ ಮೇಲಕ್ಕೆ ಎಳೆಯಲಾಯಿತು. ಆದರೆ ಹಲವರು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಗುರುವಾರ ತಡರಾತ್ರಿ ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ರಾಜ್ಯ ವಿಪತ್ತು ತುರ್ತು ಮತ್ತು ಪ್ರತಿಕ್ರಿಯೆ ಪಡೆಯ ಉಪ ಮಹಾನಿರೀಕ್ಷಕ ಮಹೇಶ್ ಚಂದ್ರ ಜೈನ್ ತಿಳಿಸಿದ್ದಾರೆ. ಎಪ್ಪತ್ತು ಯೋಧರು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿ ಶವಗಳನ್ನು ಮೇಲೆತ್ತಿದ್ದಾರೆ. ಮೃತದೇಹಗಳು ಮೆಟ್ಟಿಲುಬಾವಿಯಲ್ಲಿ ಛಾವಣಿಯ ಅವಶೇಷಗಳ ಅಡಿಯಲ್ಲಿದ್ದವು ಎಂದು ಅವರು ಹೇಳಿದ್ದಾರೆ.
ಮೆಟ್ಟಿಲುಬಾವಿಯಿಂದ ನೀರು ನಿರಂತರವಾಗಿ ಹೊರಬರುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ ಜೈನ್.ಮಹಿಳೆಯೊಬ್ಬರು ಏಣಿಯ ಸಹಾಯದಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ಮೆಟ್ಟಿಲು ಬಾವಿಗೆ ಬೀಳುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ಘೋಷಿಸಿದರು. ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ₹ 2 ಲಕ್ಷ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Delhi: ಸೊಳ್ಳೆ ಕಾಯಿಲ್‌ನಿಂದ ಉಸಿರುಗಟ್ಟಿ 6 ಮಂದಿ ಸಾವು
ದೇವಸ್ಥಾನದ ಮುಖ್ಯ ಅರ್ಚಕ ಲಕ್ಷ್ಮೀನಾರಾಯಣ ಶರ್ಮಾ ಮಾತನಾಡಿ, ಅವರು ಪ್ರತಿ ವರ್ಷ ರಾಮನವಮಿಯಂದು ದೇವಸ್ಥಾನದ ಹೊರಗೆ ಹವನ ಮತ್ತು ಪೂಜೆಯನ್ನು ಆಯೋಜಿಸುತ್ತಾರೆ. ಆದರೆ ಈ ವರ್ಷ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಾಗಾಗಿ ದೇವಸ್ಥಾನದ ಒಳಗಡೆಯೇ ಪೂಜೆ ಆಯೋಜಿಸಲಾಗಿತ್ತು. ನಾನು ಕೂಡ ಬಿದ್ದೆ ಆದರೆ ಮೆಟ್ಟಿಲುಬಾವಿಯಿಂದ ಹೊರಬಂದೆ. ಯಾವುದೇ ಕಾಂಕ್ರೀಟ್ ಇಲ್ಲದೆ ಮೇಲ್ಛಾವಣಿಯನ್ನು ನಿರ್ಮಿಸಲಾಗಿದೆ. ಕಲ್ಲು ಚಪ್ಪಡಿಗಳನ್ನು ಹಾಕಿ, ಕಬ್ಬಿಣದ ಸರಳುಗಳನ್ನು ಇಲ್ಲಿ ಅಳವಡಿಸಲಾಗಿತ್ತು. ದೇವಾಲಯದ ಟ್ರಸ್ಟ್ ವಿರುದ್ಧ ಕ್ರಮಕೈಗೊಳ್ಳುವಂತೆ ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Fri, 31 March 23