ಕಡಲ್ಗಳ್ಳರಿಂದ ಇರಾನ್ ಹಡಗು, 23 ಪಾಕಿಸ್ತಾನೀಯರ ರಕ್ಷಿಸಿದ ಭಾರತೀಯ ನೌಕಾಪಡೆ

ದೊಡ್ಡಮಟ್ಟದ ಕಾರ್ಯಚರಣೆ ನಡೆಸಿರುವ ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಸತತ ಹನ್ನೆರಡು ಗಂಟೆ ಸೆಣಸಾಡಿ ಕಡಲಗಳ್ಳರ ವಶವಾಗಿದ್ದ ಇರಾನ್ ಹಡಗನ್ನು ರಕ್ಷಣೆ ಮಾಡಿವೆ. ಅದರಲ್ಲಿದ್ದ 23 ಮಂದಿ ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.

ಕಡಲ್ಗಳ್ಳರಿಂದ ಇರಾನ್ ಹಡಗು, 23 ಪಾಕಿಸ್ತಾನೀಯರ ರಕ್ಷಿಸಿದ ಭಾರತೀಯ ನೌಕಾಪಡೆ
ಚಿತ್ರ ಕೃಪೆ: ಭಾರತೀಯ ನೌಕಾಪಡೆ ಎಕ್ಸ್​ ಖಾತೆ
Follow us
Ganapathi Sharma
|

Updated on:Mar 30, 2024 | 8:26 AM

ನವದೆಹಲಿ, ಮಾರ್ಚ್​ 30: ಇರಾನ್​ನ ಮೀನುಗಾರಿಕಾ ಹಡಗೊಂದರ (Iranian Fishing Vessel) ಮೇಲೆ ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರು (Pirates) ದಾಳಿ ನಡೆಸಿದ್ದು, ಕೊನೆಗೆ ಭಾರತೀಯ ನೌಕಾಪಡೆ ಸತತ 12 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಡಗನ್ನು ರಕ್ಷಣೆ ಮಾಡಿದೆ. ಅದರಲ್ಲಿದ್ದ 23 ಪಾಕಿಸ್ತಾನೀಯರನ್ನೂ ರಕ್ಷಿಸಿದೆ. ಮಾರ್ಚ್ 28 ರಂದು ತಡರಾತ್ರಿ ಇರಾನಿನ (Iran) ಮೀನುಗಾರಿಕಾ ಹಡಗು ‘ಅಲ್-ಕಂಬಾರ್ 786′ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ ಬಗ್ಗೆ ನೌಕಾಪಡೆಗೆ ಮಾಹಿತಿ ದೊರೆತಿತ್ತು. ಹೀಗಾಗಿ, ಸಾಗರ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಎರಡು ನೌಕೆಗಳನ್ನು ಕಡಲ್ಗಳ್ಳರ ದಾಳಿಗೆ ಸಿಲುಕಿರುವ ಇರಾನ್​ನ ಹಡಗಿನ ರಕ್ಷಣೆಗೆ ಕಳುಹಿಸಲಾಯಿತು ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ತೀವ್ರತರದ ಕಾತರ್ಯಾಚರಣೆಯ ನಂತರ, ಕಡಲ್ಗಳ್ಳರ ವಶದಲ್ಲಿದ್ದ ಇರಾನ್​ ನೌಕೆಯಲ್ಲಿದ್ದ ಕಡಲ್ಗಳ್ಳರು ಶರಣಾಗುವಂತೆ ಸೂಚಿಸಲಾಯಿತು. ಆ ಬಳಿಕ 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಂತೆ ಹಡಗಿನ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ಹೇಳಿದೆ.

ಭಾರತೀಯ ನೌಕಾಪಡೆಯ ಎಕ್ಸ್​ ಸಂದೇಶ

ಕಡಲ್ಗಳ್ಳರು ಶರಣಾದ ನಂತರ ಭಾರತೀಯ ನೌಕಾಪಡೆಯ ತಂಡಗಳು ಹಡಗನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡು ಶುಚಿಗೊಳಿಸಿದವು. ಆ ಹಡಗನ್ನು ದಡದತ್ತ ಕೊಂಡೊಯ್ಯುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಇದೀಗ ನಿರ್ದಿಷ್ಟ ಪ್ರದೇಶದಲ್ಲಿ ನಿರಾತಂಕವಾಗಿ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾರ್ಚ್ 29 ರಂದು, ಇರಾನ್​ನ ‘ಅಲ್​-ಕಂಬಾರ್’ ಮೀನುಗಾರಿಕಾ ಹಡಗನ್ನು ಐಎನ್​ಎಸ್ ಸುಮೇಧಾ ತಡೆಯಿತು. ನಂತರ ನೌಕಾಪಡೆಯ ಇತರ ನೌಕೆಗಳಿಗೂ ಸಂದೇಶ ರವಾನಿಸಿತು. ಬಳಿಕ ಐಎನ್​ಎಸ್ ತ್ರಿಶೂಲ್ ಸಹ ಕಾರ್ಯಾಚರಣೆಯಲ್ಲಿ ಸೇರಿಕೊಂಡಿತು.

ಇದನ್ನೂ ಓದಿ: ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಬ್ಯಾಂಕ್ ಖಾತೆ ರದ್ದು ಬಗ್ಗೆ ಅಮೆರಿಕ ಮತ್ತು ವಿಶ್ವಸಂಸ್ಥೆಯಲ್ಲಿ ಪ್ರಶ್ನೆ ಕೇಳಿದ ವ್ಯಕ್ತಿ ಯಾರು?

ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಇರಾನ್ ಹಡಗನ್ನು ಹತ್ತಿದಾಗ ಅದು ಹಿಂದೂ ಮಹಾಸಾಗರದ ಯೆಮೆನ್ ದ್ವೀಪವಾದ ಸೊಕೊಟ್ರಾದ ನೈಋತ್ಯಕ್ಕೆ ಸುಮಾರು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿತ್ತು ಎನ್ನಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 am, Sat, 30 March 24