25000 ದಿಂದ 95 ಲಕ್ಷ ರೂ. ವರೆಗೆ: ಲೋಕಸಭೆ ಚುನಾವಣೆ ಖರ್ಚಿನ ಮಿತಿ ಹೆಚ್ಚಳ ಯಾವಾಗೆಲ್ಲ ಆಯ್ತು? ಇಲ್ಲಿದೆ ಮಾಹಿತಿ
Election Expenditure Limit: ದೇಶದಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಆದಾಗ ಅಭ್ಯರ್ಥಿಯ ಖರ್ಚಿಗೆ ಎಷ್ಟು ಮೊತ್ತ ನಿಗದಿಪಡಿಸಲಾಗಿತ್ತು? ಆಮೇಲೆ ಯಾವಾಗಲೆಲ್ಲ ಚುನಾವಣಾ ಖರ್ಚಿನ ಮಿತಿ ಹೆಚ್ಚು ಮಾಡಲಾಯಿತು? ಈಗ ಎಷ್ಟಾಗಿದೆ ಎಂಬುದರ ಇಣುಕು ನೋಟ ಇಲ್ಲಿದೆ.
ನವದೆಹಲಿ, ಮಾರ್ಚ್ 30: ಹಣವಿಲ್ಲದ ಕಾರಣ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿರುವುದು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ. ಈ ಮಧ್ಯೆ, ಪ್ರತಿ ಬಾರಿಯೂ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಚುನಾವಣೆಯ ಉದ್ದೇಶಕ್ಕೆ ಇಂತಿಷ್ಟು ಮೊತ್ತ ಖರ್ಚು ಮಾಡಬಹುದು ಎಂದು ಚುನಾವಣಾ ಆಯೋಗ ಮಿತಿ ನಿಗದಿಪಡಿಸುತ್ತದೆ. ಈ ಮಿತಿಯನ್ನೂ ಮೀರಿ ಅಭ್ಯರ್ಥಿಗಳು ಅಕ್ರಮವಾಗಿ ಹಣ, ಉಡುಗೊರೆ ಹಂಚುವುದು ಕೂಡ ಗುಟ್ಟಾಗಿ ಏನೂ ಉಳಿದಿಲ್ಲ.
ಆದಾಗ್ಯೂ, ಆಯೋಗ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಖರ್ಚಿಗೆ ಸದ್ಯ ನಿಗದಿಪಡಿಸಿರುವ ಮಿತಿ 95 ಲಕ್ಷ ರೂಪಾಯಿ. ಅದೇ ರೀತಿ ವಿಧಾನಸಭೆ ಚುನಾವಣೆಗೆ 40 ಲಕ್ಷ ರೂ. ಖರ್ಚಿನ ಮಿತಿ ನಿಗದಿಪಡಿಸಲಾಗಿದೆ.
ಹಾಗಾದರೆ ದೇಶದಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಆದಾಗ ಅಭ್ಯರ್ಥಿಯ ಖರ್ಚಿಗೆ ಎಷ್ಟು ಮೊತ್ತ ನಿಗದಿಪಡಿಸಲಾಗಿತ್ತು? ಆಮೇಲೆ ಯಾವಾಗಲೆಲ್ಲ ಚುನಾವಣಾ ಖರ್ಚಿನ ಮಿತಿ ಹೆಚ್ಚು ಮಾಡಲಾಯಿತು? ಈಗ ಎಷ್ಟಾಗಿದೆ ಎಂಬುದರ ಇಣುಕು ನೋಟ ಇಲ್ಲಿದೆ.
- 1951-52: ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆಯ ಅಭ್ಯರ್ಥಿಗಳು ಗರಿಷ್ಠ 25,000 ರೂ.ಗಳನ್ನು ಖರ್ಚು ಮಾಡಲು ಅವಕಾಶ ನೀಡಲಾಗಿತ್ತು.
- 1971: ಹೆಚ್ಚಿನ ರಾಜ್ಯಗಳಲ್ಲಿ ವೆಚ್ಚದ ಮಿತಿಯನ್ನು 35,000 ರೂ.ಗೆ ಹೆಚ್ಚಳ ಮಾಡಲಾಯಿತು.
- 1980: ಪ್ರತಿ ಅಭ್ಯರ್ಥಿಗೆ ಗರಿಷ್ಠ 1 ಲಕ್ಷ ರೂ. ಗೆ ಖರ್ಚಿನ ಮಿತಿ ಏರಿಕೆ ಮಾಡಲಾಯಿತು.
- 1984: ಕೆಲವು ರಾಜ್ಯಗಳಲ್ಲಿ 1.5 ಲಕ್ಷಕ್ಕೆ ಮತ್ತು ಸಣ್ಣ ರಾಜ್ಯಗಳಲ್ಲಿ 1.3 ಲಕ್ಷ ರೂ.ಗೆ ಏರಿಕೆ ಮಾಡಲಾಯಿತು. ಒಂದರಿಂದ ಎರಡು ಸೀಟುಗಳನ್ನು ಹೊಂದಿರುವ ರಾಜ್ಯಗಳು 1 ಲಕ್ಷಕ್ಕೆ ಮಿತಿಗೊಳಿಸಿದರೆ, ಚಂಡೀಗಢದಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ 50,000 ರೂ. ನಿಗದಿ ಮಾಡಲಾಯಿತು.
- 1996: ಹೆಚ್ಚಿನ ರಾಜ್ಯಗಳಿಗೆ ಚುನಾವಣಾ ವೆಚ್ಚದ ಮಿತಿ 4.5 ಲಕ್ಷ ರೂ.ಗೆ ಮಿತಿ ಹೆಚ್ಚಳ.
- 1998: ಚುನಾವಣಾ ವೆಚ್ಚದ ಮಿತಿ 15 ಲಕ್ಷ ರೂ.ಗೆ ಹೆಚ್ಚಳ.
- 2004: 25 ಲಕ್ಷ ರೂ.ಗೆ ಚುನಾವಣಾ ಖರ್ಚು ಏರಿಕೆ ಮಾಡಲಾಯಿತು.
- 2014: 70 ಲಕ್ಷ ರೂ.ಗೆ ಚುನಾವಣಾ ವೆಚ್ಚದ ಮಿತಿ ಹೆಚ್ಚಳ ಮಾಡಲಾಯಿತು.
- 2024: ಪ್ರಸ್ತುತ ಚುನಾವಣೆಯಲ್ಲಿ 95 ಲಕ್ಷ ರೂ.ಗೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಚುನಾವಣೆ ಸ್ಪರ್ಧಿಸಲು ಎಷ್ಟು ಹಣ ಬೇಕು? ನಿರ್ಮಲಾ ಹೇಳಿಕೆಯಿಂದ ಮೂಡಿದ ಪ್ರಶ್ನೆಗೆ ಇಲ್ಲಿದೆ ಉತ್ತರ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Sat, 30 March 24