ಹೊಸ ಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್; ಸಚಿವರ ಮಕ್ಕಳು, ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆ ಟಿಕೆಟ್
ಲೋಕಸಭಾ ಚುನಾವಣೆ 2024: ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಸ ಮುಖಗಳಿಗೆ ಆದ್ಯತೆ ಹೆಚ್ಚು ಕೊಟ್ಟಿದೆ. ಅದರಲ್ಲೂ ಸಚಿವರ ಮಕ್ಕಳಿಗೆ, ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗಿದ್ದು ಈ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಸಚಿವರ ಹೆಗಲಿಗೆ ಹಾಕಲಾಗಿದೆ.
ಬೆಂಗಳೂರು, ಮಾರ್ಚ್.30: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್ (Congress) ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗ್ತಿದೆ. ಅದ್ರಲ್ಲೂ ಬಹುತೇಕ ಕ್ಷೇತ್ರಗಳಲ್ಲಿ ಹೊಸ ಹಾಗೂ ಯುವ ಮುಖಗಳಿಗೆ ಮಣೆಹಾಕಿದೆ. ರಾಜಕೀಯ ಹಿನ್ನೆಲೆ ಇರುವ ಸಚಿವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಸಮರ್ಥರು ಮತ್ತು ಗೆಲುವಿನ ಮಾನದಂಡದ ಸೂತ್ರದಡಿ ಸಚಿವರ ಮಕ್ಕಳು, ಕುಟುಂಬದವರಿಗೆ ಟಿಕೆಟ್ ನೀಡಲಾಗಿದ್ದು ಈ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಸಚಿವರ ಹೆಗಲಿಗೆ ಹಾಕಲಾಗಿದೆ. ಹಾಗಿದ್ರೆ ಯಾವ್ಯಾವ ಕ್ಷೇತ್ರಗಳಲ್ಲಿ ಕೈ ಪಕ್ಷ ಹೊಸ ಮುಖಗಳಿಗೆ ಮಣೆ ಹಾಕಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ.
ಕಾಂಗ್ರೆಸ್‌ನ ಹೊಸ ಮುಖಗಳು
- ಬೀದರ್- ಸಾಗರ್ ಖಂಡ್ರೆ
- ಬಾಗಲಕೋಟೆ- ಸಂಯುಕ್ತಾ ಪಾಟೀಲ
- ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್
- ರಾಯಚೂರು- ಜಿ.ಕುಮಾರ ನಾಯಕ
- ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ
- ಮೈಸೂರು- ಎಂ.ಲಕ್ಷ್ಮಣ
- ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್
- ದಕ್ಷಿಣ ಕನ್ನಡ- ಪದ್ಮರಾಜ್
- ಧಾರವಾಡ- ವಿನೋದ್ ಅಸೂಟಿ
- ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
- ಚಾಮರಾಜನಗರ- ಸುನೀಲ್ ಬೋಸ್
- ಬೆಂಗಳೂರು ಕೇಂದ್ರ- ಮನ್ಸೂರ್ ಅಲಿ ಖಾನ್
- ಮಂಡ್ಯ- ಸ್ಟಾರ್ ಚಂದ್ರು
- ಕೋಲಾರ – ಕೆ.ವಿ. ಗೌತಮ್ಪರಿಸರ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆಗೆ ಇನ್ನೂ 26ರ ಹರೆಯ. ಬೀದರ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ವಿಜಯಪುರದ ಸಂಯುಕ್ತಾ ಪಾಟೀಲ್ ಬಾಗಲಕೋಟೆಯಿಂದ ಸ್ಪರ್ಧಿಸಿದ್ದಾರೆ. ಇನ್ನು ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಇ ಡಾ.ಪ್ರಭಾ ಮಲ್ಲಿಕಾರ್ಜುನ್ ಡೆಂಟಲ್ ಡಾಕ್ಟರ್ ಆಗಿದ್ದಾರೆ. ಶಾಸಕ ಶಾಮನೂರು ಶಿವಶಂಕಪ್ಪ ಅವ್ರ ಸೊಸೆಯಾಗಿರುವ ಇವ್ರು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವ್ರ ಪತ್ನಿಯಾಗಿದ್ದಾರೆ. ಇದೆ ಮೊದಲ ಬಾರಿಗೆ ಇವ್ರು ರಾಜಕೀಯ ಪ್ರವೇಶ ಮಾಡಿದ್ದಾರೆ. ಎಸ್‌ಟಿ ಕ್ಷೇತ್ರ ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ನಿವೃತ್ತ ಐಎಎಸ್ ಅಧಿಕಾರಿ.
ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮೇಯರ್ ಪುತ್ರ ಗೌತಮ್ ಕಣಕ್ಕೆ
ಇದೆ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸಿವಿಲ್ ಇಂಜಿನಿಯರಿಂಗ್ ಪದವೀಧರ. ಇದೆ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ವಕ್ತಾರರಾಗಿರೋ ಇವ್ರು 2018ರಲ್ಲಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ರು. ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನೂ 27 ವರ್ಷದ ಇವ್ರು 10 ಉದ್ಯಮ ಸಂಸ್ಥೆಗಳ ನಿರ್ದೇಶಕಿ ಆಗಿದ್ದಾರೆ.
ಇದಲ್ಲದೆ ಮಲ್ಲಿಕಾರ್ಜುನ ಖರ್ಗೆ ಅವ್ರು ಸೋದರಳಿಯ ರಾಧಾಕೃಷ್ಣ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇದೆ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ್ದಾರೆ. ಸದ್ಯ ಅವ್ರು ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟೆ ಅಧ್ಯಕ್ಷರಾಗಿದ್ದಾರೆ. ಬೆಳಗಾವಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 31 ವರ್ಷ ವಯಸ್ಸಿನ ಮೃಣಾಲ್ ಕಾಂಗ್ರೆಸ್ ಯುವ ಘಟಕದಲ್ಲಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೈ ಅಭ್ಯರ್ಥಿ ಪದ್ಮರಾಜ್ ಬಿಲ್ಲವ ಸಮಾಜದವ್ರು. ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಶಿಷ್ಯ. ಕುದ್ರೋಳಿ ಗೋಕರ್ಣನಾಥ ದೇವಾಲಯದ ಖಚಾಂಜಿಯಾಗಿರುವ ಇವ್ರು ಸಮಾಜಸೇವೆಯಲ್ಲಿ ತೊಡಗಿದ್ದಾರೆ.ಧಾರವಾಡ ಕ್ಷೇತ್ರದ ಕುರುಬ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ರಾಜಕೀಯ ನಂಟು ಇಲ್ಲದ ಕುಟುಂಬದಿಂದ ಬಂದವರು. ಧಾರವಾಡ ಗ್ರಾಮೀಣ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಇವ್ರು ಸಿಎಂ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವ್ರ ಪುತ್ರ ರಕ್ಷಾ ರಾಮಯ್ಯಗೆ ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯ ಆಶೀರ್ವಾದದಿಂದಾಗಿ ವೀರಪ್ಪ ಮೊಯ್ಲಿಯಂತಹ ಘಟಾನುಘಟಿನಾಯಕರ ಪೈಪೋಟಿ ನಡುವೆ ಟಿಕೆಟ್ ದೊರಕಿದೆ. ಉಳಿದಂತೆ ಸಚಿವ ಮಹದೇವಪ್ಪ ಅವ್ರ ಪುತ್ರ ಸುನೀಲ್ ಬೋಸ್ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ತಂದೆ ಜತೆ ರಾಜಕೀಯವಾಗಿ ಸಕ್ರಿಯವಾಗಿದ್ದ ಸುನೀಲ್ ಬೋಸ್ ಇದೆ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಇನ್ನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಮನ್ಸೂರ್ ಅಲಿಖಾನ್ ಮತ್ತು ಜಿದ್ದಾಜಿದ್ದಿನ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉದ್ಯಮಿ ಸ್ಟಾರ್ ಚಂದ್ರಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಇನ್ನು ಕೋಲಾರ ಕ್ಷೇತ್ರದಲ್ಲಿ ಮುನಿಯಪ್ಪ, ರಮೇಶ್ ಕುಮಾರ್ ಬಣದ ಜಟಾಪಟಿ ನಡುವೆ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಗೆ ಮಣೆ ಹಾಕಿದೆ. ಪರಿಶಿಷ್ಟ ಎಡಗೈ ಸಮುದಾಯದ ಮಾಜಿ ಮೇಯರ್ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ.ಗೌತಮ್ಗೆ ‘ಕೈ’ ಟಿಕೆಟ್ ನೀಡಿದ್ದು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಒಟ್ಟಾರೆ ಸಚಿವರನ್ನು ಲೋಕಸಭೆ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿತ್ತು. ಆದ್ರೆ ರಾಜ್ಯ ರಾಜಕಾರಣ ಬಿಟ್ಟು ಹೋಗಲು ಯಾವ ಸಚಿವರು ಕೂಡ ಒಪ್ಪಲಿಲ್ಲ. ಹೀಗಾಗಿ ಸಂಪನ್ಮೂಲ ಕ್ರೂಢೀಕರಣ ಮುಂತಾದ ಲೆಕ್ಕಾಚಾರಗಳೊಂದಿಗೆ ಕಾಂಗ್ರೆಸ್ ಅವರ ಪುತ್ರರು, ಬಂಧುಗಳಿಗೆ ಮಣೆ ಹಾಕಿದೆ. ಇತರ ರಾಜ್ಯಗಳಲ್ಲೂ ಹೊಸ ಮುಖಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದ್ದು, ಯುವಕರ ಮತ ಬ್ಯಾಂಕ್ ಹಾಗೂ ಭವಿಷ್ಯದಲ್ಲಿ ಪಕ್ಷಕ್ಕಾಗುವ ಲಾಭವನ್ನು ಗಮನದಲ್ಲಿರಿಸಿಕೊಂಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:54 am, Sat, 30 March 24