ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ವರು ವಿದ್ಯಾರ್ಥಿಗಳ ಬಂಧನ
ಬಂಧನಕ್ಕೆ ಒಳಪಟ್ಟ ನಾಲ್ಕು ಮಂದಿಯನ್ನು ನಾಜಿರ್ ಹುಸೇನ್ (26 ವರ್ಷ), ಝುಲ್ಫೀಕರ್ ಅಲಿ ವಾಜಿರ್ (25 ವರ್ಷ), ಅಯಾಜ್ ಹುಸೇನ್ (28 ವರ್ಷ), ಮುಜಮ್ಮಿಲ್ ಹುಸೇನ್ (25 ವರ್ಷ) ಎಂದು ಗುರುತಿಸಲಾಗಿದೆ. ಈ ನಾಲ್ವರೂ ಕಾರ್ಗಿಲ್ ಸಮೀಪದ ತಂಗ್ ಹಳ್ಳಿಯ ನಿವಾಸಿಗಳಾಗಿದ್ದು, ಇವರ ಪೈಕಿ ಇಬ್ಬರು ಖಾಸಾ ಸಹೋದರರು ಹಾಗೂ ಇನ್ನಿಬ್ಬರು ಸಹೋದರ ಸಂಬಂಧಿಗಳು ಎಂದು ತಿಳಿದುಬಂದಿದೆ.
ದೆಹಲಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ಜನವರಿ 29ರಂದು ನಡೆದ ಲಘು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ಕೈಗೊಂಡಿದ್ದ ದೆಹಲಿ ಪೊಲೀಸ್ ವಿಶೇಷ ಪಡೆಯ ಅಧಿಕಾರಿಗಳು ಕಾರ್ಗಿಲ್ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಕೇಂದ್ರೀಯ ತಂಡ ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಕಾರ್ಗಿಲ್ ಬಳಿ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದೇವೆ. ಸದ್ಯ ಬಂಧಿತ ಆರೋಪಿಗಳನ್ನು ದೆಹಲಿಗೆ ನಿನ್ನೆ (ಜೂನ್ 24) ಕರೆತರಲಾಗಿದೆ ಎಂದು ತಿಳಿಸಿದ್ದಾರೆ.
ಬಂಧನಕ್ಕೆ ಒಳಪಟ್ಟ ನಾಲ್ಕು ಮಂದಿಯನ್ನು ನಾಜಿರ್ ಹುಸೇನ್ (26 ವರ್ಷ), ಝುಲ್ಫೀಕರ್ ಅಲಿ ವಾಜಿರ್ (25 ವರ್ಷ), ಅಯಾಜ್ ಹುಸೇನ್ (28 ವರ್ಷ), ಮುಜಮ್ಮಿಲ್ ಹುಸೇನ್ (25 ವರ್ಷ) ಎಂದು ಗುರುತಿಸಲಾಗಿದೆ. ಈ ನಾಲ್ವರೂ ಕಾರ್ಗಿಲ್ ಸಮೀಪದ ತಂಗ್ ಹಳ್ಳಿಯ ನಿವಾಸಿಗಳಾಗಿದ್ದು, ಇವರ ಪೈಕಿ ಇಬ್ಬರು ಖಾಸಾ ಸಹೋದರರು ಹಾಗೂ ಇನ್ನಿಬ್ಬರು ಸಹೋದರ ಸಂಬಂಧಿಗಳು ಎಂದು ತಿಳಿದುಬಂದಿದೆ.
ಬಂಧಿತರು ಶಾಂತಿ ಕದಡುವ ಆಲೋಚನೆಯಲ್ಲಿದ್ದು, ದೆಹಲಿಯಲ್ಲಿ ಉಗ್ರ ಚಟುವಟಿಕೆ ಮೂಲಕ ಅನಾಹುತ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಇದೀಗ ಸಮಗ್ರ ತನಿಖೆ ನಂತರ ನಾಲ್ವರನ್ನೂ ವಶಕ್ಕೆ ಪಡೆಯಲಾಗಿದ್ದು, ದೆಹಲಿಯಲ್ಲಿ ಹಿರಿಯ ಅಧಿಕಾರಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆ ನಡೆಸಿದ್ದು, ಬಂಧಿತರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ನಿಗಾದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರ ಪೈಕಿ ಅಯಾಜ್ ಹುಸೇನ್ ಎಂಬಾತ ದೆಹಲಿಯ ರಮ್ಜಾಸ್ ಕಾಲೇಜಿನಿಂದ ಪದವಿ ಪಡೆದಿದ್ದು, ಆತನ ಸಹೋದರ ಮುಜಮ್ಮಿಲ್ ಹುಸೇನ್ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಿದ್ದಾನೆ. ಝುಲ್ಫೀಕರ್ ಅಲಿ ಎಂಬಾತ ದೆಹಲಿಯ ದ್ಯಾಲ್ ಸಿಂಗ್ ಕಾಲೇಜಿನಿಂದ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ದೂರ ಶಿಕ್ಷಣ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿದ್ದು, ನಾಜಿರ್ ಹುಸೇನ್ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ.
ಈ ನಾಲ್ವರು ಆರೋಪಿಗಳೂ ಸ್ಫೋಟ ನಡೆದ ದಿನ ದೆಹಲಿಯಲ್ಲೇ ಇದ್ದರು ಎನ್ನುವುದು ಪೊಲೀಸರಿಗೆ ಗೊತ್ತಾಗಿದ್ದು, ಇವರಿಗೆ ಯಾರೊಂದಿಗೆಲ್ಲಾ ನಂಟಿದೆ. ಯಾವ ಉದ್ದೇಶಗಳನ್ನು ಹೊಂದಿದ್ದಾರೆ ಎಂಬ ಹೆಚ್ಚಿನ ತನಿಖೆ ಆಗುತ್ತಿದೆ. ಆದರೆ, ಬಂಧಿತರ ಪೋಷಕರು ತಮ್ಮ ಮಕ್ಕಳಿಗೂ ದುಷ್ಕೃತ್ಯಕ್ಕೂ ಸಂಬಂಧ ಇಲ್ಲವೆನ್ನುವಂತೆ ಮಾತಾನಡಿದ್ದಾರೆ. ನಾಜಿರ್ನ ತಂದೆ ಹೇಳುವಂತೆ ಆತ ಪದವಿ ಮುಗಿಸಿ ಮನೆಗೆ ಬಂದ ನಂತರ ಲಾಕ್ಡೌನ್ ವೇಳೆಯಲ್ಲಿ ಎಲ್ಲೂ ಹೋಗಿಲ್ಲ. ಅಲ್ಲದೇ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡಲು ಅವಕಾಶ ಗಿಟ್ಟಿಸಿಕೊಂಡು ಆನ್ಲೈನ್ ಮೂಲಕವೇ ಮನೆಯಲ್ಲೇ ಇದ್ದು ಶಿಕ್ಷಣ ಪಡೆಯುತ್ತಿದ್ದಾನೆ. ಕಾರ್ಗಿಲ್ ಪೊಲೀಸರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿದ್ದು, ಇದೀಗ ದೆಹಲಿ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ನಮ್ಮ ಮಗ ದೆಹಲಿಗೆ ಹೋಗಿಯೇ ಇಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಸಮೀಪದ ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ IED ಸ್ಫೋಟ: ವಾಹನದಲ್ಲಿ ಬಂದು ಬಾಂಬ್ ಎಸೆದು ಹೋಗಿರುವ ಶಂಕೆ