
ಶ್ರೀಹರಿಕೋಟ, ನವೆಂಬರ್ 2: ಭಾರತದಲ್ಲಿ ಇದೂವರೆಗೂ ನಿರ್ಮಿಸಲಾಗಿರುವ ಸೆಟಿಲೈಟ್ಗಳಲ್ಲಿ ಅತ್ಯಂತ ಭಾರದ್ದೆನ್ನಲಾದ ಸಿಎಂಎಸ್-03 ಕಮ್ಯೂನಿಕೇಶನ್ ಸೆಟಿಲೈಟ್ (CMS-03 satellite) ಅನ್ನು ಯಶಸ್ವಿಯಾಗಿ ನಭಕ್ಕೆ ಸಾಗಿಸಲಾಗಿದೆ. ಇಸ್ರೋ ನಿರ್ಮಿಸಿರುವ, ಬಾಹುಬಲಿ ಎಂದೇ ಖ್ಯಾತವಾಗಿರುವ 43.5 ಮೀಟರ್ ಎತ್ತರದ ಎಲ್ವಿಎಂ3-ಎಂ4 ರಾಕೆಟ್ನಲ್ಲಿ (LVM3-M4 rocket) ಸಿಎಂಎಸ್-03 ಉಪಗ್ರಹವನ್ನು ಕೂರಿಸಿ ಆಗಸಕ್ಕೆ ಕಳುಹಿಸಲಾಗಿದೆ. ಆಂಧ್ರದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ನಲ್ಲಿ ಸಂಜೆ 5:26ಕ್ಕೆ ಈ ಉಡಾವಣೆ ಮಾಡಲಾಗಿದೆ.
ಸಂವಹನ ಉಪಗ್ರಹವಾದ ಸಿಎಂಎಸ್-03 ಬರೋಬ್ಬರಿ 4,410 ಕಿಲೋ ತೂಕದ್ದಾಗಿದೆ. ಇದನ್ನು ಜಿಟಿಒ (ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್) ಕಕ್ಷೆಗೆ ಸೇರಿಸಲಾಗಿದೆ. ಬಹಳ ಕಡಿಮೆ ವೆಚ್ಚದಲ್ಲಿ ಈ ಭಾರೀ ತೂಕದ ಉಪಗ್ರಹವನ್ನು ನಭಕ್ಕೆ ಸಾಗಿಸಲಾಗಿದೆ.
ಇದನ್ನೂ ಓದಿ: ಜೇನುತುಪ್ಪಗೆ ದೊಡ್ಡ ಬೇಡಿಕೆ; ಜೇನುಸಾಕಣೆಗೆ ಕೇಂದ್ರದಿಂದ ಉತ್ತೇಜನ; ‘ಸಿಹಿ ಕ್ರಾಂತಿ’ ಹಾದಿಯಲ್ಲಿ ಭಾರತ
ದೊಡ್ಡ ತೂಕದ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲು ಇಸ್ರೋ ಫ್ರಾನ್ಸ್ ದೇಶದ ಏರಿಯೇನ್ಸ್ಪೇಸ್ ಕಂಪನಿಯ ರಾಕೆಟ್ಗಳನ್ನು ಬಳಸುತ್ತಿತ್ತು. ಫ್ರೆಂಚ್ ಗಯಾನ ಪ್ರದೇಶದಲ್ಲಿ ಅವುಗಳನ್ನು ಉಡಾವಣೆ ಮಾಡಲಾಗುತ್ತಿತ್ತು. ಈಗ ಭಾರತದ ನೆಲದಲ್ಲಿ ಉಡಾವಣೆಯಾದ ಅತ್ಯಂತ ಹೆಚ್ಚು ತೂಕದ ಸೆಟಿಲೈಟ್ ಎನ್ನುವ ದಾಖಲೆಯನ್ನು ಸಿಎಂಎಸ್-03 ಬರೆದಿದೆ.
ಸಿಎಂಎಸ್-03 ಒಂದು ಕಮ್ಯೂನಿಕೇಶನ್ ಸೆಟಿಲೈಟ್ ಆಗಿದ್ದು, ಟೆಲಿಕಾಂ, ಇಂಟರ್ನೆಟ್, ಬ್ರಾಡ್ಕ್ಯಾಸ್ಟಿಂಗ್ ಸೇವೆಗಳನ್ನು ಬಲಪಡಿಸಲು ಸಹಾಯವಾಗುತ್ತದೆ. ಮಿಲಿಟರಿ ಕಣ್ಗಾವಲು ನಡೆಸುವುದು ಸೇರಿದಂತೆ ಹಲವು ಕಾರ್ಯಗಳಿಗೆ ಸಿಎಂಎಸ್-03 ಸೇವೆಯನ್ನು ಬಳಸಿಕೊಳ್ಳಲಾಗಬಹುದು.
ಇದನ್ನೂ ಓದಿ: ಆರ್ಜೆಡಿ ಕಾಂಗ್ರೆಸ್ ತಲೆಗೆ ಬಂದೂಕಿಟ್ಟು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ: ನರೇಂದ್ರ ಮೋದಿ
ಸಿಎಂಎಸ್-03 ಸೆಟಿಲೈಟ್ ಅನ್ನು ಹೊತ್ತು ಹೋದ ಎಲ್ವಿಎಂ-3 ಬಾಬುಬಲಿ ರಾಕೆಟ್ ಎಂದೇ ಹೆಸರಾಗಿದೆ. ಹೆಚ್ಚು ತೂಕದ ಸೆಟಿಲೈಟ್ಗಳನ್ನು ಹೊತ್ತು ಹೋಗುವ ಸಾಮರ್ಥ್ಯ ಇದಕ್ಕಿದೆ. 4,000 ಕಿಲೋವರೆಗಿನ ಸೆಟಿಲೈಟ್ಗಳನ್ನು ಇದು ಜಿಟಿಒ ಕಕ್ಷೆಗೆ ಸೇರಿಸಬಲ್ಲುದು. ಕೆಳ ಭೂಕಕ್ಷೆಯಾದರೆ 8,000 ಕಿಲೋ ತೂಕದ ಸೆಟಿಲೈಟ್ಗಳನ್ನೂ ಇದು ಹೊತ್ತೊಯ್ಯಬಲ್ಲುದು.
2023ರಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ಹೋದ ಚಂದ್ರಯಾನ-3 ಸೆಟಿಲೈಟ್ ಅನ್ನು ಆಗಸಕ್ಕೆ ಸೇರಿಸಿದ್ದು ಇದೇ ಎಲ್ವಿಎಂ-3 ರಾಕೆಟ್ ಎಂಬುದು ವಿಶೇಷ. ಅದಕ್ಕೂ ಹಿಂದಿನ ವರ್ಷದಲ್ಲಿ (2022) 72 ಸೆಟಿಲೈಟ್ಗಳನ್ನು ಹೊತ್ತೊಯ್ದು ಕೆಳ ಭೂಕಕ್ಷೆಗೆ ಸೇರಿಸಿತ್ತು ಈ ರಾಕೆಟ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ