ಚಂದ್ರಯಾನ-3 ಟಚ್‌ಡೌನ್ ಸ್ಪಾಟ್​​​ಗೆ ಶಿವಶಕ್ತಿ ಪಾಯಿಂಟ್ ಎಂದು ಹೆಸರಿಟ್ಟಿದ್ದರಲ್ಲಿ ತಪ್ಪೇನಿಲ್ಲ: ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್

'ಶಿವಶಕ್ತಿ ಪಾಯಿಂಟ್' ಹೆಸರಿನ ಬಗ್ಗೆ ಮಾತನಾಡಿದ ಸೋಮನಾಥ್, ಪ್ರಧಾನಿ ಅವರು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಅದರ ಅರ್ಥವನ್ನು ವಿವರಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯತೆಯನ್ನು ಧ್ವನಿಸುವ ಹೆಸರನ್ನು ನೀಡಿದ್ದಾರೆ. ದೇಶದ ಪ್ರಧಾನಿ ಆಗಿದ್ದರಿಂದ ಹೆಸರು ನೀಡುವ ವಿಶೇಷ ಅಧಿಕಾರವನ್ನು ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಚಂದ್ರಯಾನ-3 ಮಿಷನ್‌ನ ಇತ್ತೀಚಿನ ಅಪ್ಡೇಟ್ ಬಗ್ಗೆ ಮಾತನಾಡಿದ ಅವರು ರೋವರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಚಂದ್ರಯಾನ-3 ಟಚ್‌ಡೌನ್ ಸ್ಪಾಟ್​​​ಗೆ ಶಿವಶಕ್ತಿ ಪಾಯಿಂಟ್ ಎಂದು ಹೆಸರಿಟ್ಟಿದ್ದರಲ್ಲಿ ತಪ್ಪೇನಿಲ್ಲ: ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್
ಎಸ್. ಸೋಮನಾಥ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 28, 2023 | 1:55 PM

ತಿರುವನಂತಪುರಂ ಆಗಸ್ಟ್: ಚಂದ್ರಯಾನ-3ಕ್ಕೆ (Chandrayaan-3) ಮುನ್ನ ಇಸ್ರೋ (ISRO) ವಿಜ್ಞಾನಿಗಳು ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದರು. ಆ ಹೊತ್ತಲ್ಲಿ ವಿಜ್ಞಾನಿಗಳು ದೇವಾಲಯಗಳಿಗೆ ಭೇಟಿ ನೀಡುವುದರ ಕುರಿತು, ‘ವಿಜ್ಞಾನ ಮತ್ತು ಧರ್ಮ’ದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗಿತ್ತು. ಚಂದ್ರಯಾನ-3 ಯಶಸ್ಸಿನ ಬಳಿಕ ಭಾನುವಾರ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ (S Somanath) ತಿರುವನಂತಪುರಂನಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರಲ್ಲಿ ಧರ್ಮ ಮತ್ತು ವಿಜ್ಞಾನದ ಬಗ್ಗೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಸೋಮನಾಥ್, ನಾನೊಬ್ಬ ಪರಿಶೋಧಕ. ನಾವು ಚಂದ್ರನನ್ನು ಪರಿಶೋಧಿಸಿದ್ದೇವೆ. ನಾನು ನನ್ನ ಅಂತರಂಗವನ್ನೂ ಪರಿಶೋಧಿಸುತ್ತಿರುತ್ತೇನೆ. ವಿಜ್ಞಾನ ಮತ್ತು ಆಧ್ಯಾತ್ಮ ಎರಡನ್ನೂ ಪರಿಶೋಧಿಸುವುದು ನನ್ನ ಬದುಕಿನ ಪಯಣದ ಭಾಗ. ನಾನು ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಹಲವು ಧರ್ಮ ಗ್ರಂಥಗಳನ್ನೂ ಓದಿದ್ದೇನೆ. ನಮ್ಮ ಅಸ್ತಿತ್ವದ ಅರ್ಥ ಮತ್ತು ಬ್ರಹ್ಮಾಂಡದಲ್ಲಿ ನಮ್ಮ ಪಯಣದ ಕುರಿತು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದೇನೆ. ಹೀಗಾಗಿ ವಿಜ್ಞಾನದ ಅಧ್ಯಯನದಲ್ಲಿ ಬಾಹ್ಯವಾಗಿ ತೊಡಗಿದ್ದು, ಅಂತರಂಗದ ನೆಮ್ಮದಿಗಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ಟಚ್‌ಡೌನ್ ಸ್ಪಾಟ್ ಅನ್ನು ಶಿವಶಕ್ತಿ ಪಾಯಿಂಟ್ ಎಂದು ಹೆಸರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದರು.  ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷರಾಗಿ ಚಂದ್ರಯಾನ-3 ಮಿಷನ್‌ನ ನಾಯಕರಾಗಿದ್ದಾರೆ.

ಜುಲೈನಲ್ಲಿ ಚಂದ್ರಯಾನ-3 ಮಿಷನ್‌ಗೆ ಮುನ್ನ ಇಸ್ರೋ ವಿಜ್ಞಾನಿಗಳ ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿತ್ತು, ಇದು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಬೆರೆಸುವ ಚರ್ಚೆಗೆ ಕಾರಣವಾಗಿತ್ತು.

‘ಶಿವಶಕ್ತಿ ಪಾಯಿಂಟ್’ ಹೆಸರಿನ ಬಗ್ಗೆ ಮಾತನಾಡಿದ ಸೋಮನಾಥ್, ಪ್ರಧಾನಿ ಅವರು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಅದರ ಅರ್ಥವನ್ನು ವಿವರಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯತೆಯನ್ನು ಧ್ವನಿಸುವ ಹೆಸರನ್ನು ನೀಡಿದ್ದಾರೆ. ದೇಶದ ಪ್ರಧಾನಿ ಆಗಿದ್ದರಿಂದ ಹೆಸರು ನೀಡುವ ವಿಶೇಷ ಅಧಿಕಾರವನ್ನು ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಚಂದ್ರಯಾನ-3 ಮಿಷನ್‌ನ ಇತ್ತೀಚಿನ ಅಪ್ಡೇಟ್ ಬಗ್ಗೆ ಮಾತನಾಡಿದ ಅವರು ರೋವರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ರೋವರ್‌ನಲ್ಲಿರುವ ಎಲ್ಲಾ ಐದು ಉಪಕರಣಗಳನ್ನು ಸ್ವಿಚ್ ಆನ್ ಮಾಡಲಾಗಿದೆ. ಸೆಪ್ಟೆಂಬರ್ 3 ರೊಳಗೆ ಎಲ್ಲಾ ಪ್ರಯೋಗಗಳನ್ನು ಪೂರ್ಣಗೊಳಿಸಲು ನಾವು ಆಶಿಸುತ್ತೇವೆ. ವಿವಿಧ ವಿಧಾನಗಳನ್ನು ಪರೀಕ್ಷಿಸಬೇಕಾಗಿದೆ. ಇದರಿಂದ ಚಂದ್ರನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬಹುದು ಎಂದು ಸೋಮನಾಥ್ ಹೇಳಿದ್ದಾರೆ.

ಇದನ್ನೂ ಓದಿ: Shiv Shakti Point: ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಪ್ರಧಾನಿ ಮೋದಿ ನಾಮಕರಣ

ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಟೆಲಿಮೆಟ್ರಿ ಟ್ರ್ಯಾಕಿಂಗ್‌ ಆ್ಯಂಡ್‌ ಕಮಾಂಡ್‌ ಸೆಂಟರ್‌ನಲ್ಲಿ ಶನಿವಾರ ಬೆಳಿಗ್ಗೆ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದ ಮೋದಿ, ‘ಚಂದ್ರಯಾನ-3ರ ಲ್ಯಾಂಡರ್‌ ವಿಕ್ರಮ್‌, ಚಂದ್ರನ ಮೇಲಿಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್‌’ ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಹೇಳಿದ್ದಾರೆ .ಶಿವ ಎಂದರೆ ಮನುಕುಲದ ಕಲ್ಯಾಣಕ್ಕಾಗಿ ನಿರ್ಣಯ ಕೈಗೊಳ್ಳುವುದು. ಶಕ್ತಿ ಎಂದರೆ ಆ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಬೇಕಾದ ಬಲ ಎಂದರ್ಥ. ಶಿವಶಕ್ತಿ ಪಾಯಿಂಟ್‌ ಹಿಮಾಲಯದಿಂದ ಕನ್ಯಾಕುಮಾರಿವರೆಗಿನ ಪ್ರದೇಶಗಳನ್ನು ಜೋಡಿಸಲಿದೆ ಎಂದು ಅವರು ಹೇಳಿದ್ದರು. ಅದೇ ವೇಳೆ ಚಂದ್ರಯಾನ-2  ಪತನವಾಗಿದ್ದ ಸ್ಥಳವನ್ನು ‘ತಿರಂಗಾ’ ಪಾಯಿಂಟ್ ಎಂದು ನಾಮಕರಣ ಮಾಡಿದ್ದಾರೆ. ಯಾವ ವೈಫಲ್ಯವೂ ಅಂತಿಮವಲ್ಲ, ಅಂತಃಶಕ್ತಿ ಇದ್ದರೆ ಗೆಲುವು ಸಾಧ್ಯ ಎಂಬುದನ್ನು ತಿರಂಗಾ ಪಾಯಿಂಟ್‌ ಸೂಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ