ಬೆಂಗಳೂರು: ಮೂರು ವರ್ಷಗಳ ಹಿಂದೆ ನನಗೆ ಆಹಾರದಲ್ಲಿ ವಿಷ ಬೆರೆಸಿ ನೀಡಲಾಗಿತ್ತು, ನನ್ನ ಹತ್ಯೆಗೆ ಯತ್ನ ನಡೆದಿತ್ತು ಎಂದು ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿರುವ ಇಸ್ರೊ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ತಪನ್ ಮಿಶ್ರಾ, ಮೇ 3, 2017ರಂದು ನನಗೆ ದೋಸೆ ಮತ್ತು ಚಟ್ನಿಯಲ್ಲಿ ಮಾರಕ ಪ್ರಮಾಣದ ವಿಷ ನೀಡಲಾಗಿತ್ತು ಎಂದು ಹೇಳಿದ್ದಾರೆ. ಪ್ರಸ್ತುತ ಮಿಶ್ರಾ ಅವರು ಇಸ್ರೋದಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಅಹಮದಾಬಾದ್ ಮೂಲದ ಅಪ್ಲಿಕೇಷನ್ ಸೆಂಟರ್ ಆಫ್ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
‘Long Kept Secret’ ಎಂಬ ಶೀರ್ಷಿಕೆ ನೀಡಿ ಫೇಸ್ಬುಕ್ನಲ್ಲಿ ಈ ಘಟನೆ ಬಗ್ಗೆ ಬರೆದಿರುವ ಮಿಶ್ರಾ ಜುಲೈ 2017ರಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಆರ್ಸೆನಿಕ್ ವಿಷದ ಕುರಿತು ಎಚ್ಚರಿಸಿದ್ದರು. ಇದಕ್ಕೆ ವೈದ್ಯರು ನಿಖರವಾದ ಪರಿಹಾರ ನೀಡಿದ್ದಾರೆ ಎಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ, ಚರ್ಮ ರೋಗ ಮತ್ತು ಫಂಗಸ್ ಸೋಂಕು ಮೊದಲಾದ ಆರೋಗ್ಯ ಸಮಸ್ಯೆಗಳಿಂದ ನಾನು ಬಳಲಿದ್ದೆ ಎಂದು ಹೇಳಿದ ಮಿಶ್ರಾ ಆರ್ಸೆನಿಕ್ ವಿಷ ಸೇವನೆಯಿಂದಾಗಿ ಉಂಟಾದ ಸಮಸ್ಯೆಗಳಿಗೆ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದಾಖಲೆಯನ್ನೂ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆ ಮಾಡಬೇಕು ಎಂದು ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಮಿಶ್ರಾ ಒತ್ತಾಯಿಸಿದ್ದಾರೆ. ಮಿಶ್ರಾ ಅವರ ಆರೋಪದ ಬಗ್ಗೆ ಇಸ್ರೊ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.