‘ಪೊಲೀಸರ ಗಡ್ಡದ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡೋಲ್ಲ, ಅದು ಸಾಂವಿಧಾನಿಕ ಹಕ್ಕಲ್ಲ‘- ಅಲಹಾಬಾದ್ ಹೈಕೋರ್ಟ್
ಗಡ್ಡ ಬಿಟ್ಟರೆ ತಪ್ಪೇನು? ನನಗೆ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಸ್ಲಾಂ ತತ್ವಗಳ ಆಧಾರದ ಮೇಲೆ ಗಡ್ಡ ಉಳಿಸಿಕೊಂಡಿದ್ದೇನೆ ಎಂದು ಕಾನ್ಸ್ಟೆಬಲ್ ವಾದಿಸಿದ್ದರು.
ಲಖನೌ: ಪೊಲೀಸ್ ಪಡೆ (Police Force)ಯಲ್ಲಿ ಕೆಲಸ ಮಾಡುವವರು ಗಡ್ಡವನ್ನು ಹೊಂದಲು ಸಂವಿಧಾನದಲ್ಲಿ ಹಕ್ಕು ನೀಡಿಲ್ಲ ಎಂದು ಅಲಹಬಾದ್ ಹೈಕೋರ್ಟ್(Allahabad High Court)ನ ಲಖನೌ ಪೀಠ ಆದೇಶ ನೀಡಿದೆ. ಈ ಮೂಲಕ, ಪೊಲೀಸ್ ಕೆಲಸದಲ್ಲಿ ಇದ್ದವರು ಗಡ್ಡ ತೆಗೆದಿರಬೇಕು ಎಂಬ ನಿಯಮವನ್ನು ನಿಷೇಧಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದ ಉತ್ತರ ಪ್ರದೇಶ ಪೊಲಿಸ್ ಕಾನ್ಸ್ಟೆಬಲ್ವೊಬ್ಬರ ಅರ್ಜಿಯನ್ನು ವಜಾಗೊಳಿಸಿದೆ. ಹಾಗೇ, ಈ ಗಡ್ಡದ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವುದೂ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಪ್ರಕರಣದ ವಿವರ ಹೀಗಿದೆ.. ಪೊಲೀಸ್ ಪಡೆಯಲ್ಲಿ ಇರುವವರೂ ಗಡ್ಡ ಬಿಡಲು ಅವಕಾಶ ಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದ ಕಾನ್ಸ್ಟೆಬಲ್ ಹೆಸರು ಮೊಹಮ್ಮದ್ ಫಾರ್ಮನ್. ಇವರು ಎರಡು ಅರ್ಜಿ ಸಲ್ಲಿಸಿದ್ದರು. ಒಂದು, 2020ರ ಅಕ್ಟೋಬರ್ನಲ್ಲಿ, ಉತ್ತರ ಪ್ರದೇಶದ ಡಿಜಿಪಿ ಹೊರಡಿಸಿದ್ದ ಮಾರ್ಗಸೂಚಿಗಳ ಸುತ್ತೋಲೆ ವಿರುದ್ಧ ಮತ್ತು ಇನ್ನೊಂದು, 2020ರ ನವೆಂಬರ್ನಲ್ಲಿ ಅಯೋಧ್ಯೆ ಡಿಐಜಿ ತಮ್ಮನ್ನು ಅಮಾನತು ಮಾಡಿದ್ದರ ವಿರುದ್ಧ. ಆದರೆ ಕೋರ್ಟ್ ಇದೀಗ ಎರಡೂ ಅರ್ಜಿಗಳನ್ನು ವಜಾಗೊಳಿಸಿ, ತಮಗೆ ಸಂಬಂಧವಿಲ್ಲ ಎಂದಿದೆ.
2020ರ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶ ಡಿಜಿಪಿ ಒಂದು ಸುತ್ತೋಲೆ ಹೊರಡಿಸಿದ್ದರು. ಅದರಲ್ಲಿ, ಉತ್ತರಪ್ರದೇಶ ಪೊಲೀಸ್ ಪಡೆಯಲ್ಲಿ ಕರ್ತವ್ಯದಲ್ಲಿರುವ ಪ್ರತಿಯೊಬ್ಬರೂ ಶಿಸ್ತು ಪಾಲನೆ ಮಾಡಬೇಕು. ಸಮವಸ್ತ್ರಗಳನ್ನು ಸರಿಯಾಗಿ ಧರಿಸಬೇಕು. ಸರಿಯಾಗಿ ಶೇವ್ ಮಾಡಿ, ಲಕ್ಷಣವಾಗಿ ಕಾಣಿಸಿಕೊಳ್ಳಬೇಕು ಎಂದು ಉಲ್ಲೇಖಿಸಲಾಗಿತ್ತು. ಆದರೆ ಹೊಸ ಮಾರ್ಗಸೂಚಿಯ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾನ್ಸ್ಟೆಬಲ್ ಮೊಹಮ್ಮದ್ ಫಾರ್ಮನ್ ಗಡ್ಡವನ್ನು ಬೆಳೆಸಿದ್ದರು. ಅದನ್ನು ತೆಗೆಯುವಂತೆ ಸೂಚಿಸಿದ್ದರು, ಶೇವ್ ಮಾಡಿರಲಿಲ್ಲ. ಶಿಸ್ತು ಪಾಲನೆ ಮಾಡದ ಹಿನ್ನೆಲೆಯಲ್ಲಿ, ಅಯೋಧ್ಯೆಯ ಡಿಐಜಿ, 2020ರ ನವೆಂಬರ್ 5ರಂದು ಮೊಹಮ್ಮದ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಆದರೆ ಗಡ್ಡ ಬಿಟ್ಟರೆ ತಪ್ಪೇನು? ನನಗೆ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಸ್ಲಾಂ ತತ್ವಗಳ ಆಧಾರದ ಮೇಲೆ ಗಡ್ಡ ಉಳಿಸಿಕೊಂಡಿದ್ದೇನೆ ಎಂದು ಕಾನ್ಸ್ಟೆಬಲ್ ವಾದಿಸಿದ್ದರು. ಇದಕ್ಕೆ ವಿರುದ್ಧವಾಗಿ ವಾದಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್, ಇಲಾಖೆಯ ನಿಯಮಗಳ ಪಾಲನೆ ಬಗ್ಗೆ ಕೋರ್ಟ್ನಲ್ಲಿ ಮಾತನಾಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಅಕ್ಟೋಬರ್ನಲ್ಲಿ ಪೊಲೀಸ್ ಇಲಾಖೆ ಹೊರಡಿಸಿದ ಮಾರ್ಗಸೂಚಿ, ಇಲಾಖೆಯಲ್ಲಿ ಶಿಸ್ತು ಕಾಯ್ದುಕೊಳ್ಳುವ ಸುತ್ತೋಲೆಯಾಗಿದ್ದು, ಅದರ ಪಾಲನೆ ಅಗತ್ಯ ಎಂದಿದೆ.
ಇದನ್ನೂ ಓದಿ: Covid Vaccine: 12 ವರ್ಷ ಮೇಲ್ಪಟ್ಟವರಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ; ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲ ಆದ್ಯತೆ
ರಾಗಿಣಿ ಹಾಗೂ ಸಂಜನಾ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ FSL ವರದಿ ನೋಡಿ ಸಮಾಧಾನವಾಗಿದೆ: ಇಂದ್ರಜಿತ್ ಲಂಕೇಶ್
Published On - 12:36 pm, Tue, 24 August 21