ಇದು ರೈತರ ಪ್ರತಿಭಟನೆಯಲ್ಲ, ಕಾಂಗ್ರೆಸ್ ಪ್ರತಿಭಟನೆ: ಸಿ.ಟಿ.ರವಿ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 20, 2021 | 2:27 PM

ಕಾಂಗ್ರೆಸ್ ಪಕ್ಷದ ಹೋರಾಟ ದಲ್ಲಾಳಿಗಳ ಪರವಾಗಿದೆ. ಹಿಂದೆ ದಲ್ಲಾಳಿಗಳ ಒತ್ತಡಕ್ಕೆ ಮಣಿದು ಅವರು ರೈತಪರ ಕಾನೂನು ಜಾರಿ ಮಾಡಿರಲಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಇದು ರೈತರ ಪ್ರತಿಭಟನೆಯಲ್ಲ, ಕಾಂಗ್ರೆಸ್ ಪ್ರತಿಭಟನೆ: ಸಿ.ಟಿ.ರವಿ ವಾಗ್ದಾಳಿ
ಸಿ.ಟಿ.ರವಿ
Follow us on

ದೆಹಲಿ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇದು ರೈತರ ಪ್ರತಿಭಟನೆಯಲ್ಲ, ಕಾಂಗ್ರೆಸ್ ಪ್ರತಿಭಟನೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಎಲ್ಲವನ್ನೂ ವಿರೋಧ ಮಾಡುತ್ತದೆ. ಸರ್ಜಿಕಲ್ ಸ್ಟೈಕ್ ಆದಾಗಲೂ ಅಪಸ್ವರ ಎತ್ತಿತ್ತು. ಎಪಿಎಂಸಿ ಕಾಯ್ದೆ ರದ್ದು ಮಾಡುವುದಾಗಿ ಈ ಹಿಂದೆ ಕಾಂಗ್ರೆಸ್ ಹೇಳಿತ್ತು. ಅದೇ ಪಕ್ಷ ಈಗ ಕಾಯ್ದೆಗಳಿಗೆ ವಿರೋಧ ಮಾಡುತ್ತಿದೆ. ವಿರೋಧಿಸುವುದಕ್ಕೆ ಕಾಂಗ್ರೆಸ್‌ಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ಹೋರಾಟ ದಲ್ಲಾಳಿಗಳ ಪರವಾಗಿದೆ. ಹಿಂದೆ ದಲ್ಲಾಳಿಗಳ ಒತ್ತಡಕ್ಕೆ ಮಣಿದು ಕಾನೂನು ಜಾರಿ ಮಾಡದೆ ಕೈ ಬಿಟ್ಟಿತ್ತು. ಈಗ ಮೋದಿ ಸರ್ಕಾರ ಅದನ್ನು ಜಾರಿ ತಂದಿದೆ. ರೈತರಿಗೆ ಸ್ವಾತಂತ್ರ್ಯ ಕೊಟ್ಟಿದೆ ಎಂದು ಹೇಳಿದ್ದಾರೆ.

ಕೃಷಿ ಕಾನೂನಿಂದ ರೈತನ ಆದಾಯ ದುಪ್ಪಟ್ಟು ಮಾಡಲು ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಈ ಕಾನೂನು ಕೃಷಿ ಕ್ಷೇತ್ರಕ್ಕೆ ಬಂಡವಾಳ‌ ಹರಿದು ಬರಲು ಸಹಕಾರಿ ಆಗಲಿದೆ. ಈ ಬಗ್ಗೆ ಮಂಥನ ನಡೆಯಲಿ. ದೆಹಲಿಯಲ್ಲಿ ನಡೆಯುತ್ತಿರುವುದು ಸಂಘಟಿತ ಹೋರಾಟ. ರೈತರ ಹೆಸರಿನಲ್ಲಿ ಕೆಲವರು ಪ್ರತಿಭಟನೆ ಮಾಡ್ತಿದ್ದಾರೆ. ಕೃಷಿ ಕಾನೂನಿಂದ ಯಾರಿಗೆ ನಷ್ಟ ಎಂದು ಚರ್ಚೆ ಆಗಲಿ. ಮಾತುಕತೆಗೆ ಸರ್ಕಾರ ಸಿದ್ದವಿದೆ ಮತ್ತು ಬದಲಾವಣೆಗೂ ಸಿದ್ದವಿದೆ. ಆದರೆ ಕೆಲವರು ಮೊಂಡು ವಾದ ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡಿದರೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನು ಮಾಡುವುದು ಸಂಸತ್ತು ಮತ್ತು ಸರ್ಕಾರ. ಬೀದಿಯಲ್ಲಿ ಕುಳಿತು ಕಾನೂನು ಮಾಡಲು ಆಗುವುದಿಲ್ಲ. ಜನರು ನಮಗೆ ಅಧಿಕಾರ ನೀಡಿದ್ದಾರೆ. ಜನ ವಿರೋಧಿ ಎನ್ನುವುದಾದರೆ ಚರ್ಚೆ ಮಾಡಲಿ. ಸುಪ್ರೀಂಕೋರ್ಟ್ ರಚಿಸಿದ ಸಮಿತಿಗೂ ಇವರು ಮಾನ್ಯತೆ ನೀಡಿಲ್ಲ. ಆದರೆ ಎಲ್ಲದಕ್ಕೂ ವಿರೋಧ ಮಾಡುವುದು, ಭಯ ಹುಟ್ಟಿಸುವುದು ಅರಾಜಕತೆ ಸೃಷಿಸುವುದು ಸರಿಯಲ್ಲ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ನಿಂದ ರಾಜಭವನ ಚಲೋ.. ಟ್ರಾಫಿಕ್ ಜಾಮ್ ಸಮಸ್ಯೆ, ಪೊಲೀಸರಿಂದ ಪರ್ಯಾಯ ಮಾರ್ಗ