ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ: ಶಾಂತಿ ಕಾಪಾಡಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮನವಿ
ಮಾಧ್ಯಮದವರೊಂದಿಗೆ ಮಾತನಾಡಿದ ಖಟ್ಟರ್, ಮೋನು ವಿರುದ್ಧ ರಾಜಸ್ಥಾನ ಸರ್ಕಾರ ಪ್ರಕರಣ ದಾಖಲಿಸಿದೆ.ಅವನನ್ನು ಪತ್ತೆಹಚ್ಚಲು ಸಹಾಯ ಬೇಕಾದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ನಾನು ರಾಜಸ್ಥಾನ ಸರ್ಕಾರಕ್ಕೆ ಹೇಳಿದ್ದೇನೆ. ಈಗ ರಾಜಸ್ಥಾನ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ ಎಂದು ಖಟ್ಟರ್ ಹೇಳಿದ್ದಾರೆ.
ದೆಹಲಿ ಆಗಸ್ಟ್ 02: ರಾಜ್ಯದಾದ್ಯಂತ ನಡೆದ ಕೋಮು ಘರ್ಷಣೆಯಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ. ಏತನ್ಮಧ್ಯೆ, ಸೋಮವಾರದಂದು ಆರಂಭವಾದ ಹಿಂಸಾಚಾರದ ಕೇಂದ್ರ ಬಿಂದುವಾಗಿರುವ ಮೋನು ಮಾನೇಸರ್ (Monu Manesar) ಬಗ್ಗೆ ರಾಜ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಹರ್ಯಾಣ (Haryana)ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar )ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಖಟ್ಟರ್, ಮೋನು ವಿರುದ್ಧ ರಾಜಸ್ಥಾನ ಸರ್ಕಾರ ಪ್ರಕರಣ ದಾಖಲಿಸಿದೆ.ಅವನನ್ನು ಪತ್ತೆಹಚ್ಚಲು ಸಹಾಯ ಬೇಕಾದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ನಾನು ರಾಜಸ್ಥಾನ ಸರ್ಕಾರಕ್ಕೆ ಹೇಳಿದ್ದೇನೆ. ಈಗ ರಾಜಸ್ಥಾನ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಅವನ ಇರುವಿಕೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆತ ಇದ್ದಾನೋ ಅಥವಾ ಇಲ್ಲವೋ ಎಂದು ಹೇಗೆ ನಾವು ಹೇಳುವುದು? ಎಂದಿದ್ದಾರೆ.
ಫೆಬ್ರವರಿಯಿಂದ ರಾಜಸ್ಥಾನದ ಜೋಧ್‌ಪುರದ ಇಬ್ಬರು ವ್ಯಕ್ತಿಗಳ ಕೊಲೆ ಪ್ರಕರಣದಲ್ಲಿ ವಾಂಟೆಂಡ್ ವ್ಯಕ್ತಿ ಆಗಿರು ಮೋನು ಮಾನೇಸರ್ ಪರಾರಿಯಾಗಿದ್ದಾನೆ. ಆದರೆ ಆತ ವಾಟ್ಸಾಪ್ನಲ್ಲಿ ವಿಡಿಯೊ ಪ್ರಸಾರ ಮಾಡಿದ್ದು, ಕೆಲವರನ್ನು ಕೆರಳಿಸಿತ್ತು ಎನ್ನಲಾಗಿದೆ.
ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಮೋನ್ ಮಾನೇಸರ್ ಭಾಗಿಯಾಗುತ್ತಾನೆ ಎಂಬ ವದಂತಿಗಳೇ ದಾಳಿಗೆ ಕಾರಣವಾಗಿದೆ. ಕೆಲವರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅಲ್ಲಿಂದ ಹಿಂಸಾಚಾರ ಶುರು ಆಗಿದೆ. ಮಧ್ಯರಾತ್ರಿಯ ನಂತರ ಮಸೀದಿಗೆ ಬೆಂಕಿ ಹಚ್ಚಲಾಯಿತು, ನೂರಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಯಿತು.
ಸೋಮವಾರದ ಘರ್ಷಣೆಯ ಪರಿಣಾಮ ದೆಹಲಿಯ ಪಕ್ಕದಲ್ಲಿರುವ ಗುರುಗ್ರಾಮ್‌ನಲ್ಲಿ ಪ್ರತಿಧ್ವನಿಸಿತ್ತು. ಗುರುಗ್ರಾಮ್ ಆರಂಭದಲ್ಲಿ ದೊಡ್ಡ ಕೂಟಗಳನ್ನು ನಿಷೇಧಿಸುವ ನಿಷೇಧಾಜ್ಞೆಗಳನ್ನು ವಿಧಿಸಿತ್ತು. ಆದರೆ ನಿನ್ನೆ 200 ಜನರ ಗುಂಪೊಂದು ನಿಯಮ ಉಲ್ಲಂಘಿಸಿ ರೆಸಿಡೆನ್ಶಿಯಲ್ ಸೊಸೈಟಿ ಬಳಿಯಿದ್ದ ಅಂಗಡಿ ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಿದೆ.
ಬೆಂಕಿ ಹಚ್ಚುವ ಘಟನೆಗಳನ್ನು ತಡೆಯಲು ಸಡಿಲವಾದ ಪೆಟ್ರೋಲ್ ಅಥವಾ ಡೀಸೆಲ್ ಮಾರಾಟವನ್ನು ನಿಷೇಧಿಸಲಾಗಿದೆ. ಇಂದು ಬಲಪಂಥೀಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ದೆಹಲಿಯಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುತ್ತಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ 116 ಜನರನ್ನು ಬಂಧಿಸಲಾಗಿದೆ ಮತ್ತು 190 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಖಟ್ಟರ್ ಹೇಳಿದರು.
ಹಿಂಸಾಚಾರಕ್ಕೆ ಕಾರಣರಾದವರನ್ನು ನಷ್ಟಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು. ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಫೋನ್ ಕರೆ ದಾಖಲೆಗಳನ್ನು ತನಿಖೆ ಮಾಡುತ್ತಿದ್ದಾರೆ. ಯಾವುದೇ ರಾಜ್ಯದಲ್ಲಿ ಪೊಲೀಸರಿಂದ ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಖಟ್ಟರ್, ಜನರು ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ