ಆದಿಯೋಗಿ ಸದ್ಗುರು ಜಗ್ಗಿ ವಾಸುದೇವ್ ಪ್ರಕಾರ ಜೀವನದಲ್ಲಿ ಮೂರು ಆಯಾಮಗಳು ಸೇರಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯವಿದೆ. ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವಕ್ಕೆ ಮುನ್ನ ಟಿವಿ9 ನೆಟ್ವರ್ಕ್ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಜಗ್ಗಿ ವಾಸುದೇವ್ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಜೀವನದ ಸಾಧನೆ ಮತ್ತು ಸಂತೋಷಕ್ಕೆ ಸುಲಭ ಸೂತ್ರ ಬಿಚ್ಚಿಟ್ಟಿದ್ದಾರೆ. ಉತ್ಸಾಹ, ನಿಶ್ಚಲ ಮತ್ತು ಅಮಲು (Exuberance, Stillness and Intoxication) ಇವು ಮೂರು ಆಯಾಮಗಳು ಸೇರಿದರೆ ಜೀವನದಲ್ಲಿ ಉನ್ನತಿ ಸಾಧ್ಯ ಎಂದರು.
ಈ ಮೂರು ಆಯಾಮಗಳ ವಿಶ್ಲೇಷಣೆ ಮಾಡಿದ ಸದ್ಗುರು, ಉತ್ಸಾಹ, ನಿಶ್ಚಲತೆ ಮತ್ತು ಅಮಲು, ಈ ಮೂರೂ ಕೂಡ ಬಹಳ ಮುಖ್ಯ. ಒಂದು ಬಿಟ್ಟರೆ ಪರಿಪೂರ್ಣತೆ ಆಗುವುದಿಲ್ಲ. ಮಕ್ಕಳಲ್ಲಿ ಉತ್ಸಾಹದ ಭುಗ್ಗೆಯೇ ಹರಿಯುತ್ತಿರುತ್ತದೆ. ನಿಶ್ಚಲತೆ ಇಲ್ಲದೇ ಹೋದರೆ ಈ ಉತ್ಸಾಹವನ್ನು ನಿಯಂತ್ರಿಸುವುದಕ್ಕೆ ಆಗುವುದಿಲ್ಲ. ಬಹಳ ಜನರು ಚಿಕ್ಕ ವಯಸ್ಸಿನಲ್ಲಿ ಭಾರೀ ಉತ್ಸಾಹ ಮತ್ತು ಲವಲವಿಕೆಯಿಂದ ಇರುತ್ತಾರೆ. ಆದರೆ, ನಂತರ ಅವರು ಖಿನ್ನತೆಗೆ ಹೋಗಿಬಿಡುವುದುಂಟು. ಆದ್ದರಿಂದ ಉತ್ಸಾಹದ ಜೊತೆಗೆ ನಿಶ್ಚಲತೆಯೂ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
“ಉತ್ಸಾಹ (Exuberance) ಎಂಬುದು ಹೆಚ್ಚು ಮಾನಸಿಕ ಮತ್ತು ಭಾವನಾತ್ಮಕವಾದುದು. ನಮ್ಮದೇ ವೈದ್ಯಕೀಯ ಶಾಲೆಯ ರಿಸರ್ಚ್ ಸೆಂಟರ್ನಲ್ಲಿ ಇದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಕೋಶಗಳ ಮಟ್ಟದಲ್ಲಿ ಮತ್ತು ಜೆನಿಟಿಕ್ ಮಟ್ಟದಲ್ಲಿ ಉತ್ಸಾಹ ವ್ಯಕ್ತವಾಗುತ್ತದೆ. ಬಿಡಿಎನ್ಎಫ್ ಫ್ಯಾಕ್ಟರ್ಗಳು ಶೇ. 70ರಷ್ಟು ಹೆಚ್ಚುತ್ತವೆ. ನಿಮ್ಮ ತಲೆಯಲ್ಲಿ ಏನೋ ಆಸಕ್ತಿಯದ್ದು ಇರುತ್ತೆ ಎಂದಲ್ಲ, ಆದರೂ ನೀವು ಪುಳಕ ಸ್ಥಿತಿಯಲ್ಲಿರುತ್ತೀರಿ. ನೀವು ಏನು ಬೇಕಾದರೂ ಮಾಡಬಹುದು. ನೀವು ಪ್ಯಾಷನೇಟ್ ಆಗಿದ್ದರೆ ಒಂದನ್ನೇ ಮಾತ್ರ ಮಾಡಬಹುದು. ಇದನ್ನು ಮಾಡಿದರೆ ಇನ್ನೊಂದು ಆಗಲ್ಲ. ಇದು ನಮ್ಮ ಜೀವನವನ್ನು ಕುಂಠಿತಗೊಳಿಸುತ್ತದೆ (Crippling life). ಆದ್ದರಿಂದ ಉತ್ಸಾಹ ಬಹಳ ಮುಖ್ಯ. ಆದರೆ, ನಿಶ್ಚಲತೆ ಇಲ್ಲದಿದ್ದರೆ ಈ ಉತ್ಸಾಹ ಎನ್ನುವುದು ನಿರರ್ಥಕ ಎನಿಸುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್ ವಿವರಣೆ ನೀಡಿದರು.
ಇದನ್ನೂ ಓದಿ: Sadhguru Interview: ಭಾರತದ ಭವಿಷ್ಯ, ಸಂಕೀರ್ಣತೆ, ಅಮಲು, ಸಂತೋಷ, ಯುವ ಶಕ್ತಿ ಬಗ್ಗೆ ಸದ್ಗುರು ವಿಚಾರ; ನ್ಯೂಸ್9 ಪ್ಲಸ್ ವಿಶೇಷ ಸಂದರ್ಶನಗಳು
ಇದೇ ವೇಳೆ ಸದ್ಗುರು ಮೂರನೇ ಆಯಾಮವಾದ ಅಮಲೇರುವಿಕೆ (Intoxication)ಬಗ್ಗೆಯೂ ಮಾತನಾಡಿ, ನೀವು ಅಮಲೇರದಿದ್ದರೆ ಏನಾದರೂ ಸಾಧಿಸುವುದು ಕಷ್ಟ ಎಂದರು.
“ಇನ್ಟಾಕ್ಸಿಕೇಶನ್ ಎಂದರೆ ಆಲ್ಕೋಹಾಲ್, ಡ್ರಗ್ ನೆನಪಾಗಬಹುದು. ಇವುಗಳ ಬಗ್ಗೆ ನನಗೇನು ನೈತಿಕ ಅಭ್ಯಂತರಗಳಿಲ್ಲ. ಇವು ಅಮಲೇರಿಸುತ್ತವಾದರೂ ನಾವು ಜಾಗೃತಾವಸ್ಥೆಯನ್ನು ಕಳೆದುಕೊಳ್ಳುತ್ತೇವೆ. ನಮಗೆ ಜಾಗೃತಾವಸ್ಥೆಯಲ್ಲಿರುವ ಅಮಲೇರಿಕೆ ಬೇಕು” ಎಂದು ಹೇಳಿದ ಅವರು ಸ್ವಿಟ್ಚರ್ಲೆಂಡ್ನಲ್ಲಿ ನಡೆದ ಒಂದು ಘಟನೆಯನ್ನು ಮೆಲುಕು ಹಾಕಿದರು.
“ನಮ್ಮ ಸೇವ್ ಸಾಯಿಲ್ ಅಭಿಯಾನಕ್ಕೆ ಸ್ವಿಸ್ ಟೂರಿಸಂ ಇಲಾಖೆ ಬೆಂಬಲ ನೀಡಿತು. ನಾವು ಕೆಲ ಸ್ಥಳಗಳ ಪ್ರಚಾರಕ್ಕೆ ವಿಡಿಯೋ ಮಾಡಿದೆವು. ಒಂದು ಸರೋವರದ ಪ್ರಚಾರದ ವಿಡಿಯೋ ಮಾಡುವ ಸಂದರ್ಭದಲ್ಲಿ ಅವರು ಕೇಳಿದರು, ಸದ್ಗುರು ನೀವು ಯಾವಾಗ ರಜೆ ತಗೋತೀರಿ? ನಾನು ಹೇಳಿದೆ, ಇದ್ಯಾವುದು ರಜೆ, ನಾನು ಯಾವಾಗಲೂ ಆನಂದವಾಗಿರುತ್ತೇನೆ. ನನಗೇಕೆ ರಜೆ ಅಂದೆ” ಎಂದು ನೆನಪಿಸಿಕೊಂಡರು.
“ನಮ್ಮ ಈ ದೇಹವು ಈ ಭೂಮಿಯ ಅತಿದೊಡ್ಡ ಕೆಮಿಕಲ್ ಫ್ಯಾಕ್ಟರಿ ಅಲ್ಲವೇ? ಈಗ ಪ್ರಶ್ನೆ ಇರುವುದು ಈ ಫ್ಯಾಕ್ಟರಿಗೆ ನೀವು ಉತ್ತಮ ಮ್ಯಾನೇಜರಾ ಅಥವಾ ಕೆಟ್ಟ ಮ್ಯಾನೇಜರಾ ಎಂಬುದು. ನೀವು ಉತ್ತಮ ಮ್ಯಾನೇಜರ್ ಆದರೆ ಒಳ್ಳೆಯ ಕೆಮಿಕಲ್ ಸೃಷ್ಟಿಸುತ್ತೀರಿ” ಎಂದು ಸದ್ಗುರು ಈ ವಿಶೇಷ ಸಂದರ್ಶನದಲ್ಲಿ ಹೇಳೀದರು.
ನ್ಯೂಸ್9 ಪ್ಲಸ್ ಒಟಿಟಿಯಲ್ಲಿ ಸದ್ಗುರು ಸಂದರ್ಶನದ ಎಲ್ಲಾ ಎಪಿಸೋಡ್ಗಳು ಲಭ್ಯ ಇವೆ. ಈ ಆ್ಯಪ್ ಡೌನ್ಲೋಡ್ ಮಾಡಿ
Published On - 10:40 am, Sun, 19 February 23