Jahangirpuri violence: ಜಹಾಂಗೀರ್‌ಪುರಿ ಹಿಂಸಾಚಾರ ಆರೋಪಿಗಳಾದ ಅನ್ಸಾರ್ ಮತ್ತು ಅಸ್ಲಾಂ 1 ದಿನದ ಪೊಲೀಸ್ ಕಸ್ಟಡಿಗೆ

| Updated By: ರಶ್ಮಿ ಕಲ್ಲಕಟ್ಟ

Updated on: Apr 17, 2022 | 10:14 PM

ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ನ್ಯಾಯಾಲಯ ಇಬ್ಬರು ಪ್ರಮುಖ ಆರೋಪಿಗಳಾದ ಅನ್ಸಾರ್ ಮತ್ತು ಅಸ್ಲಾಂ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

Jahangirpuri violence: ಜಹಾಂಗೀರ್‌ಪುರಿ ಹಿಂಸಾಚಾರ ಆರೋಪಿಗಳಾದ ಅನ್ಸಾರ್ ಮತ್ತು ಅಸ್ಲಾಂ 1 ದಿನದ ಪೊಲೀಸ್ ಕಸ್ಟಡಿಗೆ
ಜಹಾಂಗೀರ್‌ಪುರಿಯಲ್ಲಿ ಪೊಲೀಸ್ ಭದ್ರತೆ
Follow us on

ದೆಹಲಿ: ಜಹಾಂಗೀರ್‌ಪುರಿ ಹಿಂಸಾಚಾರ (Jahangirpuri violence) ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಅನ್ಸಾರ್ ಮತ್ತು ಅಸ್ಲಾಂ ಅವರನ್ನು ದೆಹಲಿಯ ರೋಹಿಣಿ ನ್ಯಾಯಾಲಯವು (Rohini court) ಭಾನುವಾರ 1 ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ದೆಹಲಿಯ ವಾಯುವ್ಯ ಪ್ರದೇಶದಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ 12 ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ನ್ಯಾಯಾಲಯ ಇಬ್ಬರು ಪ್ರಮುಖ ಆರೋಪಿಗಳಾದ ಅನ್ಸಾರ್ ಮತ್ತು ಅಸ್ಲಾಂ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಉಳಿದ 12 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ (14 ದಿನಗಳ ಕಾಲ) ಕಳುಹಿಸಲಾಗಿದೆ ಎಂದು ವಕೀಲ ವಿಕಾಸ್ ವರ್ಮಾ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ನ್ಯಾಯಾಲಯದಲ್ಲಿ ವಾದದ ವೇಳೆ, ದೆಹಲಿ ಪೊಲೀಸರು ಹನುಮ ಜಯಂತಿ (Hanuman Jayanti) ಮೆರವಣಿಗೆ ಪ್ರದೇಶದ ಮೂಲಕ ಹಾದುಹೋಗುವ ಬಗ್ಗೆ ಅಸ್ಲಾಂ ಮತ್ತು ಅನ್ಸಾರ್ ಅವರಿಗೆ ಮೊದಲೇ ತಿಳಿದಿತ್ತು ಎಂದು ಪ್ರತಿಪಾದಿಸಿದರು. “ಏಪ್ರಿಲ್ 15 ರಂದು ಶೋಭಾ ಯಾತ್ರೆಯ ಬಗ್ಗೆ ಅವರು ತಿಳಿದುಕೊಂಡರು ಮತ್ತು ಈ ಪಿತೂರಿಯನ್ನು ನಡೆಸಿದರು. ನಾವು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಬೇಕಾಗಿದೆ, ”ಎಂದು ಪೊಲೀಸರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


ಇಬ್ಬರು ಪ್ರಮುಖ ಆರೋಪಿಗಳಲ್ಲಿ ಅನ್ಸಾರ್ ‘ಮಾಸ್ಟರ್ ಮೈಂಡ್’ ಎಂದು ನಂಬಲಾಗಿದೆ, ಆದರೆ ಆ ಸಮಯದಲ್ಲಿ ಅಸ್ಲಾಂ ತನ್ನ ಪಿಸ್ತೂಲ್‌ನಿಂದ ಗುಂಡು ಹಾರಿಸಿದನು. ಪೊಲೀಸರ ಪ್ರಕಾರ, ಅನ್ಸಾರ್ ಈ ಹಿಂದೆ ಎರಡು ಹಲ್ಲೆ ಪ್ರಕರಣಗಳಲ್ಲಿ ಬಂಧಿತನಾಗಿದ್ದನು.

ಏತನ್ಮಧ್ಯೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಹೊಸ ಬಂಧನಗಳನ್ನು ಮಾಡಿದ್ದು ಒಟ್ಟು ಬಂಧಿತರ ಸಂಖ್ಯೆ 20 ಕ್ಕೆ ಏರಿದೆ. ಇಬ್ಬರು ಅಪ್ರಾಪ್ತರನ್ನು ಸಹ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ವಾಯುವ್ಯ ಡಿಸಿಪಿ ಉಷಾ ರಂಗನಿ ಹೇಳಿದ್ದಾರೆ. ಆರೋಪಿಯಿಂದ ಮೂರು ಬಂದೂಕುಗಳು ಮತ್ತು ಐದು ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆಎಂದು ಅಧಿಕಾರಿ ಹೇಳಿದರು.

ಘರ್ಷಣೆಯ ಪರಿಣಾಮವಾಗಿ ಒಟ್ಟು ಒಂಬತ್ತು ಜನರಿಗೆ ಗಾಯಗಳಾಗಿದ್ದು, ಅವರಲ್ಲಿ ಎಂಟು ಮಂದಿ ಪೊಲೀಸರು ಮತ್ತು ಒಬ್ಬರು ಸ್ಥಳೀಯರಾಗಿದ್ದಾರೆ. ಭಾನುವಾರ ಯಾವುದೇ ಹೊಸ ಘರ್ಷಣೆಗಳಿಲ್ಲದಿದ್ದರೂ, ಭದ್ರತೆಯನ್ನು ಹೆಚ್ಚಿಸಲಾಯಿತು. ದೆಹಲಿಯ ನಾಗರಿಕರು ತಮ್ಮ ಪ್ರದೇಶಗಳಲ್ಲಿನ ‘ಸಂಶಯಾಸ್ಪದ ಚಟುವಟಿಕೆಗಳ’ ಮೇಲೆ ಕಣ್ಣಿಡಲು ಪೊಲೀಸರು ಒತ್ತಾಯಿಸಿದರು.

ಇದನ್ನೂ ಓದಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿಯಂದು ನಡೆದ ಕೋಮು ಘರ್ಷಣೆ ಪ್ರಕರಣ; 14 ಮಂದಿ ಬಂಧನ

Published On - 10:09 pm, Sun, 17 April 22