ಜೈ ಹಿಂದ್, ಜಸ್ಟೀಸ್ ಸರ್ವ್ಡ್: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಭಾರತೀಯ ಸೇನೆ ಪೋಸ್ಟ್

ಜೈ ಹಿಂದ್, ನ್ಯಾಯ ಒದಗಿಸಲಾಯಿತು: ಭಯೋತ್ಪಾದಕ ಪೋಷಕ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ, ನೆರೆಯ ದೇಶದ 9 ಭಯೋತ್ಪಾದಕ ಅಡಗುದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಯ ನಂತರ ಭಾರತೀಯ ಸೇನೆಯು, ‘‘ಜೈ ಹಿಂದ್, ನ್ಯಾಯ ಸಿಕ್ಕಿದೆ’’ ಎಂದು ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಪೋಸ್ಟ್ ಮಾಡಿದೆ.

ಜೈ ಹಿಂದ್, ಜಸ್ಟೀಸ್ ಸರ್ವ್ಡ್: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಭಾರತೀಯ ಸೇನೆ ಪೋಸ್ಟ್
ಭಾರತೀಯ ಸೇನೆಯು ಇನ್‌ಸ್ಟಾಗ್ರಾಮ್‌ ಪೋಸ್ಟ್

Updated on: May 07, 2025 | 8:14 AM

ನವದೆಹಲಿ, ಮೇ 7: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Attack) ನಂತರ ಇದೀಗ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡಿದೆ. ಮಂಗಳವಾರ ತಡರಾತ್ರಿ 1.30 ರ ಸುಮಾರಿಗೆ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಕ್ಷಿಪಣಿ ದಾಳಿ ಮಾಡಿದೆ. ಪಾಕಿಸ್ತಾನದ 9 ಸ್ಥಳಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಅನೇಕ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದಾಳಿಯ ನಂತರ, ಭಾರತೀಯ ಸೇನೆಯು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ‘‘ಜೈ ಹಿಂದ್, ನ್ಯಾಯ ಸಿಕ್ಕಿದೆ (Justice is Served. Jai Hind!)’’ ಎಂದು ಉಲ್ಲೇಖಿಸಿದೆ. ಈ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ‘‘ಸೈನ್ಯವು ದಾಳಿ ಮಾಡಲು ಸಿದ್ಧವಾಗಿದೆ, ಗೆಲ್ಲಲು ತರಬೇತಿ ಪಡೆದಿದೆ’’ ಎಂದು ಪೋಸ್ಟ್ ಮಾಡಿತ್ತು.

ರಕ್ಷಣಾ ಸಚಿವಾಲಯವು ಈ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಈ ಕ್ರಮಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಸಲಾಗಿದೆ. ‘‘ನೇಪಾಳಿ ಪ್ರಜೆ ಸೇರಿದಂತೆ 26 ಜನರ ಪ್ರಾಣವನ್ನು ಬಲಿ ಪಡೆದ ಬರ್ಬರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಿಖರ ಮತ್ತು ಸಂಯಮದ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂಧೂರ್ ಪ್ರಾರಂಭಿಸಿದೆ’’ ಎಂದು ರಕ್ಷಣಾ ಸಚಿವಾಲಯ ಪೋಸ್ಟ್ ಮಾಡಿದೆ.

ಉಗ್ರರಷ್ಟೇ ಟಾರ್ಗೆಟ್, ಪಾಕ್ ಸೇನೆ ಅಲ್ಲ: ಅನಗತ್ಯ ಪ್ರಚೋದನೆ ಇಲ್ಲ ಎಂದ ರಕ್ಷಣಾ ಸಚಿವಾಲಯ

ಕಾರ್ಯಾಚರಣೆಯ ವಿವರಗಳನ್ನು ನೀಡಿದ ರಕ್ಷಣಾ ಸಚಿವಾಲಯವು, ಗಡಿಯಾಚೆಗಿನ ಭಯೋತ್ಪಾದನಾ ಪೋಷಣೆಯ ಬೇರುಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ಕೇಂದ್ರೀಕರಿಸಿ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ. ಮುಖ್ಯವಾಗಿ, ಯಾವುದೇ ಪಾಕಿಸ್ತಾನಿ ಸೇನಾ ಸೌಲಭ್ಯದ ಮೇಲೆ ದಾಳಿ ನಡೆದಿಲ್ಲ. ಅನಗತ್ಯ ಪ್ರಚೋದನೆಯನ್ನು ತಪ್ಪಿಸಿ, ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಭಾರತದ ಸಂಕಲ್ಪವನ್ನು ಈ ಕಾರ್ಯಾಚರಣೆ ಪ್ರತಿಬಿಂಬಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಇದನ್ನೂ ಓದಿ
ಆಪರೇಷನ್ ಸಿಂಧೂರ್: ಪ್ರಧಾನಿ ಮೋದಿ ನಿರಂತರ ಮೇಲ್ವಿಚಾರಣೆ
ಆಪರೇಷನ್ ಸಿಂಧೂರ್ ಎಂದರೇನು? ಈ ದಾಳಿಗೆ ಭಾರತ ಇದೇ ಹೆಸರಿಟ್ಟಿದ್ದೇಕೆ?
ಆಪರೇಷನ್ ಸಿಂಧೂರ್, ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ
ಮಾಕ್ ಡ್ರಿಲ್​ಗೆ ಭಾರತ ಸಜ್ಜು, ಇಸ್ರೇಲ್​ನಂತೆ ದಾಳಿ ನಡೆಯಲಿದೆ ಎಂದ ಪಾಕ್

ಇದನ್ನೂ ಓದಿ: ಆಪರೇಷನ್ ಸಿಂಧೂರ್, ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ

ಭಯೋತ್ಪಾದನೆ ವಿರುದ್ಧ ಭಾರತದ ಕಾರ್ಯಾಚರಣೆಯ ನಂತರ, ಪಾಕಿಸ್ತಾನ ಮತ್ತೊಮ್ಮೆ ಬೆದರಿಕೆ ಹಾಕಿದೆ. ಈ ದಾಳಿಗೆ ಭಾರತವು ದೊಡ್ಡ ಮತ್ತು ನಿರ್ಣಾಯಕ ತಿರುಗೇಟನ್ನು ಪಡೆಯಬೇಕಾಗುತ್ತದೆ ಎಂದು ಪಾಕಿಸ್ತಾನ ಘೋಷಿಸಿದೆ. ಮತ್ತೊಂದೆಡೆ, ಆಪರೇಷನ್ ಸಿಂಧೂರ್ ಮಧ್ಯೆ, ಭಾರತದ ವಿರುದ್ಧ ಪ್ರತೀಕಾರದ ಕ್ರಮವನ್ನು ಪಾಕಿಸ್ತಾನ ಪ್ರಾರಂಭಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ತನ್ನ ವಾಯುಪ್ರದೇಶದಲ್ಲಿ ಭಾರತ ಕ್ಷಿಪಣಿ ದಾಳಿ ನಡೆಸಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಹೇಳಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 am, Wed, 7 May 25