ನಾಪತ್ತೆಯಾಗಿದ್ದ ಕಾಶ್ಮೀರದ ಬಿಜೆಪಿ ನಾಯಕ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

| Updated By: ಸುಷ್ಮಾ ಚಕ್ರೆ

Updated on: Aug 24, 2022 | 9:52 AM

ಹೀರಾನಗರ ಪಟ್ಟಣದಲ್ಲಿರುವ ಮನೆಯಿಂದ ಸ್ವಲ್ಪ ದೂರದಲ್ಲಿ ಬಿಜೆಪಿ ಮುಖಂಡ ಸೋಮಿ ರಾಜ್ ಅವರ ಶವ ಮರಕ್ಕೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ಬೆಳಿಗ್ಗೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಾಪತ್ತೆಯಾಗಿದ್ದ ಕಾಶ್ಮೀರದ ಬಿಜೆಪಿ ನಾಯಕ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Image Credit source: India Today
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಾಪತ್ತೆಯಾಗಿದ್ದ ಬಿಜೆಪಿ (BJP) ನಾಯಕನ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು (Shocking News) ನಡೆದಿದೆ. ಬಿಜೆಪಿ ನಾಯಕ ಸೋಮಿ ರಾಜ್ ಕೆಲವು ಸಮಯದ ಹಿಂದೆ ನಾಪತ್ತೆಯಾಗಿದ್ದರು. ಕಥುವಾ ಹೀರಾನಗರ ಟೌನ್ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರನ್ನು ಕೊಲೆ ಮಾಡಿರುವುದರ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ANI ವರದಿಗಳ ಪ್ರಕಾರ, ಬಿಜೆಪಿ ನಾಯಕನ ಸಾವಿನ ನಿಖರವಾದ ಕಾರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಹೀರಾನಗರ ಪಟ್ಟಣದಲ್ಲಿರುವ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಬಿಜೆಪಿ ಮುಖಂಡ ಸೋಮಿ ರಾಜ್ ಅವರ ಶವ ಮರಕ್ಕೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ಬೆಳಿಗ್ಗೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹದ ಮೇಲೆ ರಕ್ತದ ಗುರುತುಗಳಿದ್ದು, ಸಮೀಪದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯನ್ನೇ ಕೊಲೆಗೈದ ಪತಿಯ ಬಂಧನ

ಮೂಲಗಳ ಪ್ರಕಾರ, ಬಿಜೆಪಿ ನಾಯಕ ಸೋಮಿ ರಾಜ್ ನಿನ್ನೆ ನಾಪತ್ತೆಯಾಗಿದ್ದು, ಬಳಿಕ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಹೀರಾನಗರ ಪೊಲೀಸರು ಸೆಕ್ಷನ್ 174 ಸಿಆರ್‌ಪಿಸಿ ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದರು. ಅವರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಹಾಗೂ ಬಿಜೆಪಿಯ ಹಲವು ಮುಖಂಡರು ಆಗ್ರಹಿಸಿದ್ದಾರೆ. ವೈದ್ಯಕೀಯ ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಮೃತರ ದೇಹವನ್ನು ಅಂತಿಮ ವಿಧಿಗಳಿಗಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: ಐಟಿಬಿಪಿ ಯೋಧರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆಗೆ ಹೆಗಲು ನೀಡಿದ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್

ಈ ಬಗ್ಗೆ ತನಿಖೆ ನಡೆಸಲು ಎಸ್‌ಡಿಪಿಒ ಬಾರ್ಡರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಥುವಾ ಆರ್‌ಸಿ ಕೊತ್ವಾಲ್ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕರೊಬ್ಬರನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ 2 ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ 23ಕ್ಕೂ ಹೆಚ್ಚು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ