ಶ್ರೀನಗರ್, ಅಕ್ಟೋಬರ್ 28: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಯೋಧರಿಗೆ ಸಾವು ನೋವು ಸಂಭವಿಸಿದೆಯಾ ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ. ಮಾಧ್ಯಮಗಳಿಗೆ ಸಿಕ್ಕಿರುವ ಪ್ರಾಥಮಿಕ ವರದಿ ಪ್ರಕಾರ ಅಖ್ನೂರ್ ನಗರದ ಜೋಗವಾನ್ ಎಂಬಲ್ಲಿ ಉಗ್ರಗಾಮಿಗಳು ಸೈನಿಕರ ವಾಹನಗಳ ಮೇಲೆ ಹಲವು ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಭದ್ರತಾ ಪಡೆಗಳು ಉಗ್ರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಕೈಗೊಂಡಿವೆ ಎನ್ನುವ ಮಾಹಿತಿ ಸಿಕ್ಕಿದೆ.
ಮತ್ತೊಂದು ವರದಿ ಪ್ರಕಾರ ಅಖ್ನೂರ್ ಸೆಕ್ಟರ್ನ ಬಟ್ಟಲ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಮಧ್ಯೆ ಗುಂಡಿನ ಗಾಳಗ ನಡೆದಿದೆ. ಭದ್ರತಾ ಪಡೆಗಳ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದೇ ಉಗ್ರರ ಗುಂಪಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಐರನ್ ಮ್ಯಾನ್ ಸ್ಪರ್ಧೆ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ: ಪ್ರಧಾನಿ ಮೋದಿ ಶ್ಲಾಘನೆ
ಮೂರರಿಂದ ನಾಲ್ಕು ಉಗ್ರಗಾಮಿಗಳು 15ರಿಂದ 20 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಅಖ್ನೂರ್ ಸೆಕ್ಟರ್ ಪ್ರದೇಶವು ಉಗ್ರರ ದಾಳಿಗೆ ಕುಖ್ಯಾವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರದೇಶಗಳಲ್ಲಿ ಹರಿದು ಹೋಗುವ ಮನಾವರ್ ತಾವಿ ನದಿ ಮೂಲಕ ಉಗ್ರರು ಭಾರತದ ಗಡಿಯೊಳಗೆ ನುಸುಳಿ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ ಹಲವು ಘಟನೆಗಳು ಹಿಂದೆ ನಡೆದಿದ್ದಿದೆ.
ಇದೇ ಜೋಗವಾನ್ನಲ್ಲಿರುವ ಹಾಸನ್ ದೇವಸ್ಥಾನಕ್ಕೆ ನುಗ್ಗಿರುವ ಉಗ್ರರು, ಮಂದಿರದಲ್ಲಿನ ವಿಗ್ರಹಗಳಿಗೆ ಹಾನಿ ಮಾಡಿದ್ದಾರೆನ್ನಲಾಗಿದೆ.
ಕೆಲ ದಿನಗಳ ಹಿಂದೆ ಅಖ್ನೂರ್ ಸೆಕ್ಟರ್ನ ಖ್ಯಾತ ಪ್ರವಾಸಿ ಸ್ಥಳವಾದ ಗುಲ್ಮಾರ್ಗ್ನ ಬೋಟಾ ಪತ್ರಿ ಎಂಬಲ್ಲಿ ಸೇನಾ ವಾಹನವೊಂದರ ಮೇಲೆ ಉಗ್ರರು ದಾಳಿ ಎಸಗಿದ್ದರು. ಆ ಘಟನೆಯಲ್ಲಿ ಇಬ್ಬರು ಸೈನಿಕರು ಸೇರಿದಂತೆ ನಾಲ್ವರು ಬಲಿಯಾಗಿದ್ದರು. ಇಬ್ಬರಿಗೆ ಗಾಯವಾಗಿತ್ತು. ಇಲ್ಲಿ ಮೂರರಿಂದ ನಾಲ್ವರು ಉಗ್ರರು ಈ ದಾಳಿಯಲ್ಲಿದ್ದರು.
ಇದನ್ನೂ ಓದಿ: ರವಿಶಂಕರ್ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭ್ಯ
ಇತ್ತೀಚಿನ ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳಷ್ಟು ಭಯೋತ್ಪಾದಕ ದಾಳಿ ಘಟನೆಗಳು ಸಂಭವಿಸುತ್ತಿವೆ. ಕಾಶ್ಮೀರೇತರ ಸಮುದಾಯದ ಜನರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿರುವುದು ಸದ್ಯಕ್ಕೆ ತಿಳಿದುಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ