ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್​ಕೌಂಟರ್: ನಾಲ್ವರು ಉಗ್ರರ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 12, 2022 | 8:11 AM

ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಚಾಲ್ತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂದ್ವಾರಾದ ನೆಚಮ ಪ್ರದೇಶದಲ್ಲಿ ಮತ್ತೋರ್ವ ಎಲ್​ಇಟಿ ಉಗ್ರ ಹತನಾಗಿದ್ದಾನೆ.

ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್​ಕೌಂಟರ್: ನಾಲ್ವರು ಉಗ್ರರ ಸಾವು
ಸಾಂಕೇತಿಕ ಚಿತ್ರ
Follow us on

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಳೆದ ಮಧ್ಯರಾತ್ರಿಯಿಂದೀಚೆಗೆ ನಡೆದ ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಕೊಂದಿವೆ. ಈ ಪೈಕಿ ಇಬ್ಬರು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮದ್​ಗೆ (Jaish-E-Mohammed – JEM) ಸೇರಿದವರು. ಪುಲ್ವಾಮಾದ ಚೆವ್​ಕ್ಲಾನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ. ಭದ್ರತಾ ಪಡೆಗಳು ಗಂಡೆರ್​ಬಾಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುವಾಗ ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಯಾಬಾ (Lashkar E Taiba – LeT) ಸಂಘಟನೆಯ ಮತ್ತೋರ್ವ ಉಗ್ರನನ್ನು ಹತ್ಯೆ ಮಾಡಿವೆ. ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಚಾಲ್ತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂದ್ವಾರಾದ ನೆಚಮ ಪ್ರದೇಶದಲ್ಲಿ ಮತ್ತೋರ್ವ ಎಲ್​ಇಟಿ ಉಗ್ರ ಹತನಾಗಿದ್ದಾನೆ.

‘ಹಂದ್ವಾರದ ನೆಚಮ, ರಾಜ್ವಾರ್ ಪ್ರದೇಶದಲ್ಲಿ ಎನ್​ಕೌಂಟರ್ ಆರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಶೀಘ್ರ ಲಭ್ಯವಾಗಲಿದೆ’ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಭದ್ರತಾ ಪಡೆಗಳು ಕಾಶ್ಮೀರದ ಐದು ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿವೆ. ಕಾರ್ಯಾಚರಣೆಯಲ್ಲಿ ಇಬ್ಬರು ಜೈಶ್-ಎ-ಮೊಹಮದ್ ಉಗ್ರರು ಹಾಗೂ ಇಬ್ಬರು ಎಲ್​ಇಟಿ ಉಗ್ರರನ್ನು ಕೊಲ್ಲಲಾಗಿದೆ. ಒಬ್ಬ ಉಗ್ರನನ್ನು ಬಂಧಿಸಲಾಗಿದೆ. ಹಂದ್ವಾರ ಮತ್ತು ಪುಲ್ವಾಮಾದ ಎನ್​ಕೌಂಟರ್​ಗಳು ಮುಕ್ತಾಯವಾಗಿವೆ ಎಂದು ಕಾಶ್ಮೀರದ ಐಜಿಪಿ ವಿಜಯ್​ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಣಿವೆ ರಾಜ್ಯದಲ್ಲಿ ನಾಗರಿಕರ ಹತ್ಯೆಯ ನಂತರ ಉಗ್ರನಿಗ್ರಹ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಚುರುಕುಗೊಳಿಸಿವೆ. ಹಿಂದೂ ಮತ್ತು ಸಿಖ್ಖ್ ಸಮುದಾಯಕ್ಕೆ ಸೇರಿದ ನಾಗರಿಕರ ಹತ್ಯೆಯಲ್ಲಿ ಉಗ್ರರು ತೊಡಗಿಸಿಕೊಂಡ ನಂತರ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು.

ಇಬ್ಬರು ಭಯೋತ್ಪಾದಕರ ಹತ್ಯೆ
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನೈನಾ ಬಟ್ಪೋರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಎನ್​ಕೌಂಟರ್​​ನಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಇಬ್ಬರೂ ಭಯೋತ್ಪಾದಕ ಸಂಘಟನೆ ಎಲ್ಇಟಿ (ಲಷ್ಕರ್-ಎ-ತೊಯ್ಬಾ)ಯವರಾಗಿದ್ದರು ಎಂದು ತಿಳಿಸಲಾಗಿದೆ. ಇನ್ನೂ ಉಳಿದ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸೇನಾಪಡೆಯವರು ಮೃತ ಉಗ್ರರಿ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರು ಮಸೀದಿಯ ಕಟ್ಟಡದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಭದ್ರತಾ ಪಡೆಯ ಸಿಬ್ಬಂದಿ ಹಾಗೂ ಪೊಲೀಸರು ಆ ಸ್ಥಳಕ್ಕೆ ತೆರಳಿದ್ದರು. ಮಸೀದಿಗೆ ಯಾವುದೇ ಹಾನಿಯಾಗದಂತೆ ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Prakash Belawadi: ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿದ ಪ್ರಕಾಶ್ ಬೆಳವಾಡಿ; ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ನಟ ಹೇಳಿದ್ದೇನು?

ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಚೀತಾ ಸೇನಾ ಹೆಲಿಕಾಪ್ಟರ್​ ಪತನ; ಒಬ್ಬ ಪೈಲಟ್ ಸಾವು, ಇನ್ನೊಬ್ಬರ ಸ್ಥಿತಿ ಗಂಭೀರ