ಪೂಂಚ್ ಉಗ್ರ ದಾಳಿ ಹುತಾತ್ಮರ ಸಂಖ್ಯೆ ಐದಕ್ಕೆ ಏರಿಕೆ: ಹೊಣೆ ಹೊತ್ತುಕೊಂಡ ಪಿಎಫ್ಎಫ್
ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಪಾಕಿಸ್ತಾನ ಮೂಲದ ಸಂಘಟನೆ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಹೊಂಚುದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಶ್ರೀನಗರ, ಡಿಸೆಂಬರ್ 22: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ಗುರುವಾರ ಸಂಜೆ ಸೇನಾ ಟ್ರಕ್ ಮೇಲೆ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ ಹುತಾತ್ಮರಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಲಷ್ಕರ್-ಎ-ತೊಯ್ಬಾದ (LET) ಪಾಕಿಸ್ತಾನ ಮೂಲದ ಶಾಖೆಯಾದ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (PFF) ಹೊಂಚುದಾಳಿಯ ಹೊಣೆ ಹೊತ್ತುಕೊಂಡಿದೆ.
ದಾಳಿಯಲ್ಲಿ ಹುತಾತ್ಮರಾದ ಯೋಧರ ಶಸ್ತ್ರಾಸ್ತ್ರಗಳನ್ನು ಉಗ್ರರು ತೆಗೆದುಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪ್ರದೇಶದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈ ದಾಳಿಗೆ ಕೆಲವೇ ವಾರಗಳ ಮೊದಲು, ಸಮೀಪದ ರಾಜೌರಿ ಜಿಲ್ಲೆಯ ಬಾಜಿಮಲ್ ಅರಣ್ಯ ಪ್ರದೇಶದ ಧರ್ಮಸಾಲ್ ಬೆಲ್ಟ್‌ನಲ್ಲಿ ಗುಂಡಿನ ದಾಳಿಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
ನವೆಂಬರ್‌ನಲ್ಲಿ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಅಫ್ಘಾನಿಸ್ತಾನದ ಉನ್ನತ ತರಬೇತಿ ಪಡೆದ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಕ್ವಾರಿ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು.
ಗುರುವಾರ ನಡೆದಿದ್ದೇನು?
ಗುರುವಾರ ಸಂಜೆ 3.45ಕ್ಕೆ ರಾಜೌರಿಯ ಪೂಂಚ್ ಪ್ರದೇಶದಲ್ಲಿ ಡೇರಾ ಕಿ ಗಲಿ ಮೂಲಕ ಹಾದು ಹೋಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಹೊಂಚುದಾಳಿ ನಡೆಸಿದ ನಂತರ ಎನ್‌ಕೌಂಟರ್ ಆರಂಭವಾಯಿತು. ನಂತರ ಡೇರಾ ಕಿ ಗಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭವಾಗಿದೆ. ಗುಪ್ತಚರ ಮಾಹಿತಿಯ ಮೇರೆಗೆ ರಾತ್ರಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
ಇದನ್ನೂ ಓದಿ: ಪೂಂಚ್ ಜಿಲ್ಲೆಯಲ್ಲಿ ಸೇನಾ ಟ್ರಕ್ ಮೇಲೆ ಉಗ್ರರ ಹೊಂಚು ದಾಳಿ; 3 ಯೋಧರು ಹುತಾತ್ಮ, ಮೂವರಿಗೆ ಗಾಯ
ಈ ವರ್ಷ 19 ಸೇನಾ ಸಿಬ್ಬಂದಿ ಹುತಾತ್ಮ
ಮೇ ತಿಂಗಳಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ, ಚಮ್ರೆರ್ ಅರಣ್ಯದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಈ ಕಾರ್ಯಾಚರಣೆಯಲ್ಲಿ ವಿದೇಶಿ ಭಯೋತ್ಪಾದಕನೂ ಹತನಾಗಿದ್ದ. ರಜೌರಿ, ಪೂಂಚ್ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಈ ವರ್ಷ ನಡೆದ ಎನ್‌ಕೌಂಟರ್‌ಗಳಲ್ಲಿ ಇದುವರೆಗೆ 19 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, 28 ಭಯೋತ್ಪಾದಕರು ಹತರಾಗಿದ್ದಾರೆ. ಈ ಎನ್‌ಕೌಂಟರ್‌ಗಳಲ್ಲಿ ಒಟ್ಟು 54 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಅಕ್ಟೋಬರ್ 2021 ರಲ್ಲಿ, ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಂಬತ್ತು ಸೈನಿಕರು ಹುತಾತ್ಮರಾಗಿದ್ದರು. ಅಕ್ಟೋಬರ್ 11 ರಂದು, ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ಐದು ಸೇನಾ ಸಿಬ್ಬಂದಿಗಳು ಚಮ್ರೆರ್‌ನಲ್ಲಿ ಹುತಾತ್ಮರಾಗಿದ್ದರು, ಅಕ್ಟೋಬರ್ 14 ರಂದು, ಜೆಸಿಒ ಮತ್ತು ಮೂವರು ಸೈನಿಕರು ಹುತಾತ್ಮರಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ