ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಇಂದು ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಕಿಶಿದಾ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಂಡರು. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಭೇಟಿ ಬಳಿಕ ಇದೀಗ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಶಿದಾ ಭೇಟಿ ಮಾಡಲಿದ್ದು, ಜಪಾನ್- ಇಂಡಿಯಾ ಫೆಸಿಪಿಕ್ ಕಾರ್ಯತಂತ್ರ ಮತ್ತು ಅದರ ಹೊಸ ರಕ್ಷಣಾ ನಿಲುವು ಕುರಿತು ಮಾತನಾಡಲಿದ್ದಾರೆ. 15 ವರ್ಷಗಳ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಜಪಾನ್ ಪ್ರಧಾನಿ ಶಿಂಜೋ ಅಬೆ ಮೊದಲ ಬಾರಿಗೆ ಇಂಡೋ-ಫೆಸಿಪಿಕ್ ಸಹಕಾರ ಕುರಿತಂತೆ ಮಾತನಾಡಿದ್ದರು.
ಈ ವೇಳೆ ಹಲವು ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಉಭಯ ರಾಷ್ಟ್ರಗಳು 2006ರಿಂದಲೂ ಪ್ರತಿ ವರ್ಷ ಶೃಂಗಸಭೆ ನಡೆಸುತ್ತಿದ್ದು, ಕಳೆದ ವರ್ಷ ಮಾರ್ಚ್ ನಲ್ಲಿ ನವದೆಹಲಿಯಲ್ಲಿ ವಾರ್ಷಿಕ ಶೃಂಗ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸುವುದಾಗಿ ಕಿಶಿದಾ ಟ್ವೀಟರ್ ನಲ್ಲಿ ತಿಳಿಸಿದ್ದು, ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಶಿಂಜೋ ಅಬೆ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಬಹುಮತ ಉಳಿಸಿಕೊಂಡ ಎಲ್ಡಿಪಿ
ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಫ್ಯೂಮಿಯೊ ಇಲ್ಲಿ ನಡೆಯಲಿರುವ ಉಭಯ ದೇಶಗಳ ವಾರ್ಷಿಕ ಸಭೆಯಲ್ಲಿ ತಾವು ಹಾಕಿಕೊಂಡಿರುವ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಪ್ರಸ್ತಾಪವಾಗಲಿರುವ ಇಂಡೊ-ಪೆಸಿಫಿಕ್ ಯೋಜನೆಯಲ್ಲಿ ಭಾರತವು ಮಹತ್ವದ ಪಾತ್ರವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಾಂಧವ್ಯ ಉತ್ತಮವಾಗಿತ್ತು, ಅದೇ ಸ್ನೇಹವನ್ನು ಕಿಶಿದಾ ಅವರು ಮುಂದುವರೆಸಲಿದ್ದಾರೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ವಾರ್ಷಿಕ ಸಭೆಯ ಸಮಯದಲ್ಲಿ ಉಕ್ರೇನ್-ರಷ್ಯಾ ಯುದ್ಧದ ಕುರಿತಂತೆ ಕೂಡ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ