Big News: ನಾನೇನೂ ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧ; ಜಯಲಲಿತಾ ಸಾವಿನಲ್ಲಿ ತಮ್ಮ ಕೈವಾಡದ ಬಗ್ಗೆ ಶಶಿಕಲಾ ಸ್ಪಷ್ಟನೆ

Jayalalithaa Death: ಆರ್ಮುಗಸ್ವಾಮಿ ವರದಿಯಲ್ಲಿ ತನ್ನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ವಿ.ಕೆ ಶಶಿಕಲಾ ನಿರಾಕರಿಸಿದ್ದಾರೆ. ಅಲ್ಲದೆ, ಎಲ್ಲ ರೀತಿಯ ಕಾನೂನು ತನಿಖೆಗಳನ್ನೂ ಎದುರಿಸಲು ತಾನು ಸಿದ್ಧವಿರುವುದಾಗಿ ಘೋಷಿಸಿದ್ದಾರೆ.

Big News: ನಾನೇನೂ ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧ; ಜಯಲಲಿತಾ ಸಾವಿನಲ್ಲಿ ತಮ್ಮ ಕೈವಾಡದ ಬಗ್ಗೆ ಶಶಿಕಲಾ ಸ್ಪಷ್ಟನೆ
ಶಶಿಕಲಾ- ಜಯಲಲಿತಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 19, 2022 | 12:26 PM

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ (J Jayalalithaa) ಅವರ ಸಾವಿನ ಕುರಿತು ತನಿಖೆ ನಡೆಸಿದ ಆರ್ಮುಗಸ್ವಾಮಿ ವಿಚಾರಣಾ ಸಮಿತಿ ಆರೋಪಿಗಳಾದ ಶಶಿಕಲಾ (VK Sasikala), ತಮಿಳುನಾಡಿನ ಮಾಜಿ ಆರೋಗ್ಯ ಸಚಿವ, ವೈದ್ಯರ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾ, ಆರ್ಮುಗಸ್ವಾಮಿ ವರದಿಯಲ್ಲಿ ತನ್ನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಅಲ್ಲದೆ, ಎಲ್ಲ ರೀತಿಯ ಕಾನೂನು ತನಿಖೆಗಳನ್ನೂ ಎದುರಿಸಲು ತಾನು ಸಿದ್ಧವಿರುವುದಾಗಿ ಘೋಷಿಸಿದ್ದಾರೆ.

ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಅವರು ಆರ್ಮುಗಸ್ವಾಮಿ ವಿಚಾರಣಾ ಸಮಿತಿಯ ವರದಿಗೆ ಪ್ರತಿಕ್ರಿಯಿಸಿದ್ದು, “ವರದಿಯಲ್ಲಿ ನನ್ನ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಜೆ. ಜಯಲಲಿತಾ ಅವರ ವೈದ್ಯಕೀಯ ಚಿಕಿತ್ಸೆಯಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ನಾನು ತನಿಖೆಯನ್ನು ಎದುರಿಸಲು ಸಿದ್ಧಳಿದ್ದೇನೆ” ಎಂದಿದ್ದಾರೆ.

2016ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ತನಿಖಾ ಆಯೋಗವು ಜಯಲಲಿತಾ ಅವರ ಗೆಳತಿ ವಿ.ಕೆ ಶಶಿಕಲಾ, ವೈದ್ಯ ಕೆಎಸ್ ಶಿವಕುಮಾರ್, ಮಾಜಿ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಮತ್ತು ಆಗಿನ ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಅವರ ವಿರುದ್ಧ ತನಿಖೆಗೆ ಶಿಫಾರಸು ಮಾಡಿದ್ದರು.

ಇದನ್ನೂ ಓದಿ: 2017ರಲ್ಲಿ ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ ನಡೆದ ಕೊಲೆ ಪ್ರಕರಣ: ಜಯಲಲಿತಾ ಮಾಜಿ ಸಹಾಯಕಿ ವಿಕೆ ಶಶಿಕಲಾ ವಿಚಾರಣೆ

ಶಶಿಕಲಾ, ಜಯಲಲಿತಾ ಅವರ ಆಪ್ತ ವೈದ್ಯ ಕೆಎಸ್ ಶಿವಕುಮಾರ್, ಆಗಿನ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ಆಗ ಆರೋಗ್ಯ ಸಚಿವರಾಗಿದ್ದ ಸಿ ವಿಜಯಭಾಸ್ಕರ್ ಅವರ ತಪ್ಪು ಕಂಡು ಬಂದಿದ್ದು, ತನಿಖೆಗೆ ಆದೇಶಿಸಬೇಕಿದೆ ಎಂದು ಆರ್ಮುಗಸ್ವಾಮಿ ತನಿಖಾ ಆಯೋಗ ತಿಳಿಸಿತ್ತು.

ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್ಮುಗಸ್ವಾಮಿ ಅವರ ಏಕಸದಸ್ಯ ಆಯೋಗವು 5 ವರ್ಷಗಳ ನಂತರ ತನ್ನ ವರದಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. ಡಿಸೆಂಬರ್ 2016ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ಪೂರ್ಣ ಪ್ರಮಾಣದ ರಾಜಕೀಯ ನಡೆದಿರುವುದು ಇದರಿಂದ ಬೆಳಕಿಗೆ ಬಂದಿತ್ತು.

ತಮಿಳುನಾಡು ಮಾಜಿ ಸಿಎಂ ಓ ಪನ್ನರ್‌ಸೆಲ್ವಂ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದು, ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು 2016ರ ಸೆಪ್ಟೆಂಬರ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರ ಆರೋಗ್ಯ ಸ್ಥಿತಿ, ಚಿಕಿತ್ಸೆ ಕುರಿತು ತನಿಖೆ ನಡೆಸಲು ಆರ್ಮುಗಸ್ವಾಮಿ ಆಯೋಗವನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿ: Breaking News: ಜಯಲಲಿತಾ ಸಾವು ಪ್ರಕರಣ; ಶಶಿಕಲಾ, ಮಾಜಿ ಸಚಿವರ ವಿರುದ್ಧ ತನಿಖೆಗೆ ಆರ್ಮುಗಸ್ವಾಮಿ ಆಯೋಗ ಆದೇಶ

ಆರ್ಮುಗಸ್ವಾಮಿ ಸಮಿತಿಯ ವರದಿಯ ಅನುಸಾರ, ವಿಕೆ ಶಶಿಕಲಾ, ಶಿವಕುಮಾರ್, ಆಗಿನ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮತ್ತು ಆಗಿನ ಮುಖ್ಯ ಕಾರ್ಯದರ್ಶಿ ರಾಮಮೋಹನ ರಾವ್ ಅವರ ವಿರುದ್ಧ ಸರ್ಕಾರಿ ತನಿಖೆಗೆ ಆದೇಶಿಸುವ (ಆಯೋಗ) ವರದಿಯ ಕುರಿತು ಕಾನೂನು ತಜ್ಞರ ಅಭಿಪ್ರಾಯವನ್ನು ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಎಂಕೆ ಸ್ಟಾಲಿನ್ ಅವರ ಸಂಪುಟ ನಿರ್ಧರಿಸಿದೆ.

2017ರಲ್ಲಿ ಜಯಲಲಿತಾ ಅವರ ಪಕ್ಷವಾದ ಎಐಡಿಎಂಕೆ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದ್ದಾಗ ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎ. ಆರ್ಮುಗಸ್ವಾಮಿ ನೇತೃತ್ವದ ಆಯೋಗವನ್ನು ಸ್ಥಾಪಿಸಲಾಗಿತ್ತು. ಬಳಿಕ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಾಗ, ಜಯಲಲತಾ ಅವರ ಸಾವಿನ ಬಗ್ಗೆ ವಿವರವಾದ ತನಿಖೆಯನ್ನು ನಡೆಸುವುದಾಗಿ ಭರವಸೆ ನೀಡಿತ್ತು. ನ್ಯಾಯಮೂರ್ತಿ ಎ ಆರ್ಮುಗಸ್ವಾಮಿ ಅವರ ವರದಿಯನ್ನು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ