ತಮಿಳುನಾಡಿನ ಜನರ ಪಾಲಿಗೆ ಅಮ್ಮನೇ ಆಗಿ ಹೋಗಿದ್ದ, ಅಲ್ಲಿನ ಮಾಜಿ ಸಿಎಂ ಜಯಲಲಿತಾ ( Jayalalithaa Death) ಮೃತಪಟ್ಟು ಐದುವರ್ಷದ ಮೇಲಾಯಿತು. ಅನಾರೋಗ್ಯದಿಂದ ಮೃತಪಟ್ಟಿದ್ದರೂ ಕೂಡ ಅವರ ಸಾವು ಇಂದಿಗೂ ಹಲವು ಪ್ರಶ್ನೆಗಳನ್ನು ಉಳಿಸಿಯೇ ಹೋಗಿದೆ. ಜಯಲಲಿತಾ ಸಾವಿನ ಬಗ್ಗೆ ಆರ್ಮುಗಂ ಸ್ವಾಮಿ ಆಯೋಗ (ಏಕಸದಸ್ಯ ಆಯೋಗ) ತನಿಖೆ ನಡೆಸುತ್ತಿದೆ. ಜಯಲಲಿತಾ ಅನಾರೋಗ್ಯಕ್ಕೀಡಾದ ಕಾಲದಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದ ಅಪೊಲೋ ಆಸ್ಪತ್ರೆ ವೈದ್ಯ ಬಾಬು ಮನೋಹರ್ ಅವರು ಇದೀಗ ಆಯೋಗಕ್ಕೆ ಒಂದು ವರದಿ ನೀಡಿದ್ದಾರೆ. ಜಯಲಲಿತಾ ಅವರು 2016ರ ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನವೇ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇತ್ತು. ತಲೆನೋವು ಮಿತಿಮೀರಿತ್ತು ಎಂದು ಬಾಬು ಮನೋಹರ್ ತನಿಖಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಜಯಲಲಿತಾ ಅವರ ಆಪ್ತೆಯಾಗಿದ್ದ ಶಶಿಕಲಾ ಅವರ ಪರ ವಕೀಲರಾದ ರಾಜಾ ಷಣ್ಮುಗಂ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಪೋಲೋ ವೈದ್ಯರು, 2016ರ ವೇಳೆಗೇ ಅವರ ಆರೋಗ್ಯ ಹದಗೆಟ್ಟಿತ್ತು. ವಿಶ್ರಾಂತಿ ತೆಗೆದುಕೊಳ್ಳುವಂತೆ ನಾವು ಸೂಚಿಸಿದ್ದೆವು. ಆದರೆ ಅವರು, ತಾವು ದಿನಕ್ಕೆ 16 ಗಂಟೆ ಕೆಲಸ ಮಾಡಲೇಬೇಕು. ಹೀಗಾಗಿ ವಿಶ್ರಾಂತಿ ಪಡೆಯುವುದು ತುಂಬ ಕಷ್ಟ ಎಂದು ಹೇಳಿದ್ದರು ಎಂಬುದಾಗಿ ತಿಳಿಸಿದ್ದಾರೆ. ಜಯಲಲಿತಾ ಅನಾರೋಗ್ಯಕ್ಕೀಡಾಗಿ ಸುಮಾರು 75 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು. ಅವರು ಮೃತಪಟ್ಟ ಬಳಿಕ ಸಾವಿಗೆ ಕಾರಣದ ಬಗ್ಗೆ ಅನೇಕ ಅನುಮಾನಗಳು ಹುಟ್ಟಿವೆ. ಹೀಗಾಗಿ ಅವರ ಸಾವಿನ ತನಿಖೆಗಾಗಿ ತಮಿಳುನಾಡು ಸರ್ಕಾರ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ನೇತೃತ್ವದ ಆಯೋಗವನ್ನು ರಚಿಸಿದೆ. ಜಸ್ಟೀಸ್ ಎ.ಆರ್ಮುಗಂ ಸ್ವಾಮಿ ಆಯೋಗಕ್ಕೆ ಸಹಾಯ ಮಾಡಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಬೆಳಗಾವಿಯಲ್ಲಿ ಧರ್ಮ ಗಾರ್ಡಿಯನ್ 2022; ಭಾರತ- ಜಪಾನ್ ಜಂಟಿ ಮಿಲಿಟರಿ ಸಮರಾಭ್ಯಾಸದ ಅಣಕು ಪ್ರದರ್ಶನ
Published On - 9:27 am, Tue, 8 March 22