
ಅಹಮದಾಬಾದ್: ಭಾರತದ ಬಿಲಿಯನೇರ್, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಕಿರಿಯ ಮಗ ಜೀತ್ ಅದಾನಿ ಇಂದು ಗುಜರಾತ್ನ ಅಹಮದಾಬಾದ್‌ನಲ್ಲಿ ನಡೆದ ಅತ್ಯಂತ ಖಾಸಗಿ ಸಮಾರಂಭದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಭಾರತದ ಶ್ರೀಮಂತ ಉದ್ಯಮಿಯಾಗಿದ್ದರೂ ಹೆಚ್ಚು ವೈಭವವಿಲ್ಲದೆ, ಸೆಲೆಬ್ರಿಟಿಗಳಿಗೆ ಆಹ್ವಾನ ನೀಡದೆ ಎರಡೂ ಕುಟುಂಬಸ್ಥರ ಮುಂದೆ ಗೌತಮ್ ಅದಾನಿ ತಮ್ಮ ಮಗ ಜೀತ್ ಅದಾನಿಯ ಮದುವೆ ಮಾಡಿದ್ದಾರೆ. ಜೀತ್ ಅದಾನಿ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿಯಾದ ದಿವಾ ಜೈಮಿನ್ ಶಾ ಅವರನ್ನು ವಿವಾಹವಾಗಿದ್ದಾರೆ. ತಮ್ಮ ಮಗನ ಮದುವೆಯ ಮೊದಲ ಫೋಟೋವನ್ನು ಖುದ್ದು ಗೌತಮ್ ಅದಾನಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ, ಗೌತಮ್ ಅದಾನಿ ತಮ್ಮ ಮಗನ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಸರ್ವಶಕ್ತನಾದ ದೇವರ ಆಶೀರ್ವಾದದೊಂದಿಗೆ, ಜೀತ್ ಮತ್ತು ದಿವಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹವು ಇಂದು ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ಆಚರಣೆಗಳು ಮತ್ತು ಶುಭ ಮಂಗಲ್ ಭಾವದೊಂದಿಗೆ ಪ್ರೀತಿಪಾತ್ರರ ನಡುವೆ ನಡೆಯಿತು. ಇದು ಒಂದು ಸಣ್ಣ ಮತ್ತು ಅತ್ಯಂತ ಖಾಸಗಿ ಕಾರ್ಯಕ್ರಮವಾಗಿತ್ತು. ಆದ್ದರಿಂದ ನಾವು ಬಯಸಿದ್ದರೂ ಸಹ ಎಲ್ಲಾ ಹಿತೈಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ನನ್ನ ಮಗ ಜೀತ್ ಮತ್ತು ಸೊಸೆ ದಿವಾಗಾಗಿ ನಾನು ನಿಮ್ಮೆಲ್ಲರಿಂದ ಆಶೀರ್ವಾದ ಮತ್ತು ಪ್ರೀತಿಯನ್ನು ಬಯಸುತ್ತೇನೆ” ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
Chairman of Adani Group, Gautam Adani tweets, “With the blessings of Almighty God, Jeet and Diva tied the sacred knot of marriage today. The wedding took place today in Ahmedabad with traditional rituals and Shubh Mangal Bhaav among loved ones. It was a small and extremely… pic.twitter.com/Cqkd1wtwRq
— ANI (@ANI) February 7, 2025
ಇದನ್ನೂ ಓದಿ: ಉದ್ಯಮಗಳು ಕುಂಭಮೇಳದಿಂದ ಕಲಿಯಬಹುದಾದ ಪಾಠಗಳು ಹಲವು: ಗೌತಮ್ ಅದಾನಿ
ವಿವಾಹ ಮಹೋತ್ಸವಗಳು ಇಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದವು ಮತ್ತು ಅಹಮದಾಬಾದ್‌ನ ಶಾಂತಿಗ್ರಾಮ ಎಂಬ ಅದಾನಿ ಪಟ್ಟಣದಲ್ಲಿ ಸಾಂಪ್ರದಾಯಿಕ ಜೈನ ಮತ್ತು ಗುಜರಾತಿ ಸಂಸ್ಕೃತಿಯ ಪ್ರಕಾರ ಆಚರಣೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗೌತಮ್ ಅದಾನಿ ಅವರು 10,000 ಕೋಟಿ ರೂ.ಗಳನ್ನು ವಿವಿಧ ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸಲು ದೇಣಿಗೆ ನೀಡಿದ್ದಾರೆ. ಅವರ ದೇಣಿಗೆಯ ಬಹುಪಾಲು ಭಾಗವು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಬೃಹತ್ ಮೂಲಸೌಕರ್ಯ ಉಪಕ್ರಮಗಳಿಗೆ ಹಣಕಾಸು ಒದಗಿಸಲು ವಿನಿಯೋಗವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಫೆ. 7ರಂದು ಸರಳವಾಗಿ ಅದಾನಿ ಮಗ ಜೀತ್ ಮದುವೆ; ಯಾವ ಸೆಲೆಬ್ರಿಟಿಗಳಿಗೂ ಆಹ್ವಾನವಿಲ್ಲ!
ಗೌತಮ್ ಅದಾನಿ ದಂಪತಿಗಳು ಪ್ರತಿ ವರ್ಷ 500 ಅಂಗವಿಕಲ ಮಹಿಳೆಯರ ಮದುವೆಗೆ ತಲಾ 10 ಲಕ್ಷ ರೂ.ಗಳನ್ನು ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಅದರಂತೆ ತಮ್ಮ ಮದುವೆಗೂ ಕೆಲವು ದಿನಗಳ ಮೊದಲು ಜೀತ್ ಅದಾನಿ ತಂದೆ ಘೋಷಿಸಿದ ಈ ಉಪಕ್ರಮವನ್ನು ಪ್ರಾರಂಭಿಸಲು 21 ನವವಿವಾಹಿತ ಅಂಗವಿಕಲ ಮಹಿಳೆಯರು ಮತ್ತು ಅವರ ಗಂಡಂದಿರನ್ನು ಭೇಟಿಯಾಗಿದ್ದರು.
ಈ ಮೂಲಕ ಬಿಲಿಯನೇರ್ ಗೌತಮ್ ಅದಾನಿಯವರ ಕಿರಿಯ ಪುತ್ರ ಜೀತ್ ಇಂದು ಯಾವುದೇ ಪ್ರದರ್ಶನ ಮತ್ತು ಸೆಲೆಬ್ರಿಟಿ ತಾರೆಯರಿಲ್ಲದೆ ಸರಳ ಮತ್ತು ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಅದಾನಿ ಮಗನ ಮದುವೆ ಕೂಡ ಅವರ ಪ್ರತಿಸ್ಪರ್ಧಿ ಬಿಲಿಯನೇರ್ ಆಗಿರುವ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅವರ ವಿವಾಹದಂತೆ ಮತ್ತೊಂದು ಅದ್ದೂರಿ ವಿವಾಹವಾಗಿರಲಿದೆ ಎಂದು ಊಹಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ