ರಾಂಚಿ ಆಗಸ್ಟ್ 21: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ (Champai Soren) ಹೊಸ ಪಕ್ಷ ರಚಿಸುವ ಯೋಜನೆ ಬಗ್ಗೆ ಹೇಳಿದ್ದಾರೆ. ತಮ್ಮ ರಾಜಕೀಯ ಜೀವನದ ಬಹುಪಾಲು ಸಮಯವನ್ನು ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಜತೆ ಕಳೆದಿದ್ದರು. ಇದೀಗ ಪಕ್ಷದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆಯೇ ಹೊಸ ರಾಜಕೀಯ ಪಕ್ಷ ರಚನೆಯ ನಿರ್ಧಾರವನ್ನು ಬುಧವಾರ ಪ್ರಕಟಿಸಿದ್ದಾರೆ. “ನಾನು ನಿವೃತ್ತಿ, ಸಂಘಟನೆ ಅಥವಾ ಸ್ನೇಹಿತ ಎಂಬ ಮೂರು ಆಯ್ಕೆಗಳನ್ನು ಹೇಳಿದ್ದೇನೆ. ನಾನು ನಿವೃತ್ತಿಯಾಗುವುದಿಲ್ಲ; ನಾನು ಪಕ್ಷವನ್ನು ಬಲಪಡಿಸುತ್ತೇನೆ. ಅದು ಹೊಸ ಪಕ್ಷ. ದಾರಿಯಲ್ಲಿ ನಾನು ಉತ್ತಮ ಸ್ನೇಹಿತನನ್ನು ಭೇಟಿಯಾದರೆ, ನಂತರ ಅವರೊಂದಿಗೆ ಮುಂದುವರಿಯುತ್ತೇನೆ ಚಂಪೈ ಸೊರೇನ್ ಭವಿಷ್ಯದ ಮೈತ್ರಿಗಳ ಸಾಧ್ಯತೆ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ರಾಜ್ಯ ಚುನಾವಣೆಗೆ ಹೋಗುವ ಮೊದಲು ಹೊಸ ಪಕ್ಷ ರಚನೆಗೆ ಹೆಚ್ಚು ಸಮಯ ಉಳಿದಿಲ್ಲ ಎಂದು ನೆನಪಿಸಿದಾಗ, “ಅದು ನಿಮ್ಮ ಸಮಸ್ಯೆ ಅಲ್ಲ” ಎಂದು ಸೋರೆನ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.
ಒಂದು ದಿನದೊಳಗೆ 30,000-40,000 ಕಾರ್ಯಕರ್ತರು ಆಗಮಿಸಬಹುದು, ಆಗ ಹೊಸ (ರಾಜಕೀಯ ಪಕ್ಷ) ರಚನೆಯಲ್ಲಿ ನನಗೆ ಯಾವ ಸಮಸ್ಯೆ ಇರಲ್ಲ.ಒಂದು ವಾರದೊಳಗೆ ಪಕ್ಷವನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
VIDEO | Former Jharkhand chief minister Champai Soren (@ChampaiSoren) announces to float a new political party, and also keeps doors open for alliance.
“I had mentioned three options – retirement, organisation or friend. I will not retire; I will strengthen the party, a new… pic.twitter.com/LfQABpo6Lh
— Press Trust of India (@PTI_News) August 21, 2024
ಚಂಪೈ ಸೊರೆನ್ ಅವರು ಹೊಸ ರಾಜಕೀಯ ಸಂಘಟನೆಯನ್ನು ರಚಿಸುವ ನಿರ್ಧಾರವು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿಯಲ್ಲಿ ಅನುಭವಿಸಿದ “ಕಹಿ ಅವಮಾನ”ದ ಬೆನ್ನಲ್ಲೇ ಬಂದಿದೆ. ಈ ಘೋಷಣೆಗೆ ಕೆಲವೇ ದಿನಗಳ ಮೊದಲು, ಸೋರೆನ್ ಅವರು ಜೆಎಂಎಂ ನಾಯಕತ್ವದ ಬಗ್ಗೆ ತಮ್ಮ ಅತೃಪ್ತಿಯನ್ನು ಸೂಚಿಸಿದ್ದರು.
ಅಧಿಕಾರದ ದುರಾಸೆಯಿಲ್ಲದಿದ್ದರೂ ಆತ್ಮಗೌರವಕ್ಕೆ ಧಕ್ಕೆಯಾಗಿರುವುದರಿಂದ ತಾನು ಸುಮ್ಮನಿದ್ದೇನೆ. ತುಂಬಾ ಅವಮಾನದ ನಂತರ, ನಾನು ಪರ್ಯಾಯ ಮಾರ್ಗವನ್ನು ಹುಡುಕಬೇಕಾಯಿತು ಎಂದು ಚಂಪೈ ಸೊರೆನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದಿನಿಂದ ನನ್ನ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
“ನನಗೆ ಮೂರು ಆಯ್ಕೆಗಳಿದ್ದವು. ಮೊದಲು ರಾಜಕೀಯದಿಂದ ನಿವೃತ್ತಿ, ಎರಡನೆಯದಾಗಿ ಪ್ರತ್ಯೇಕ ಪಕ್ಷವನ್ನು ರಚಿಸುವುದು. ಮೂರನೆಯದಾಗಿ, ನಾನು ಯಾವುದೇ ಮಿತ್ರರನ್ನು ಕಂಡುಕೊಂಡರೆ, ಅವರೊಂದಿಗೆ ಮುಂದುವರಿಯುವುದು. ಆ ದಿನದಿಂದ ಇಂದಿನವರೆಗೆ ಮತ್ತು ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯವರೆಗೆ, ಎಲ್ಲಾ ಆಯ್ಕೆಗಳು ಈ ಪ್ರಯಾಣದಲ್ಲಿ ನನಗೆ ಮುಕ್ತವಾಗಿದೆ” ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆಗಿನ ಸಿಎಂ ಹೇಮಂತ್ ಸೊರೆನ್ ಅವರ ರಾಜೀನಾಮೆ ಮತ್ತು ನಂತರದ ಬಂಧನದ ನಂತರ ಚಂಪೈ ಫೆಬ್ರವರಿ 2 ರಂದು ಅಧಿಕಾರ ವಹಿಸಿಕೊಂಡರು. ಆದಾಗ್ಯೂ, ಹೇಮಂತ್ ಸೊರೆನ್ ಜೈಲಿನಿಂದ ಬಿಡುಗಡೆಯಾದಾಗ ಮತ್ತು ಜುಲೈ 3 ರಂದು JMM ನ ಶಾಸಕಾಂಗ ಪಕ್ಷದ ನಾಯಕರಾಗಿ ಮರು ಆಯ್ಕೆಯಾದಾಗ ಚಂಪೈ ಸೊರೆನ್ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರು.
ಬಿಜೆಪಿ ಸೇರುವ ಊಹಾಪೋಹಗಳ ನಡುವೆಯೇ ಚಂಪೈ ಸೊರೆನ್ ಭಾನುವಾರ ದೆಹಲಿಗೆ ಭೇಟಿ ನೀಡಿದ್ದರು. ಆದರೆ, ಸೋಮವಾರ ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರು ಚಂಪೈ ಸೊರೆನ್ ಅವರೊಂದಿಗೆ ಬಿಜೆಪಿಗೆ ಬದಲಾಗುವ ಸಂಭಾವ್ಯತೆಯ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.
“ಚಂಪೈ ಸೊರೆನ್ ಅವರೊಂದಿಗೆ ಇನ್ನೂ ಯಾವುದೇ ಮಾತುಕತೆ ನಡೆದಿಲ್ಲ. ಅವರು ಅನುಭವಿ ರಾಜಕಾರಣಿ ಮತ್ತು ಪ್ರತ್ಯೇಕ ಜಾರ್ಖಂಡ್ ಚಳವಳಿಯ ಭಾಗವಾಗಿದ್ದಾರೆ. ಅವರೇ ತಮ್ಮ ಮಾರ್ಗವನ್ನು ನಿರ್ಧರಿಸುತ್ತಾರೆ” ಎಂದು ಮರಾಂಡಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Wed, 21 August 24