ಮುಂಬೈ: ಮಹಾರಾಷ್ಟ್ರ ವಿಪಕ್ಷ ನಾಯಕರಾಗಿದ್ದ ಅಜಿತ್ ಪವಾರ್ (Ajit Pawar) ಅವರು ಏಕನಾಥ್ ಶಿಂಧೆ ಸರ್ಕಾರದ ಜೊತೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿದ್ದು, ಇತ್ತ ಎನ್ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ವಿಪಕ್ಷ ನಾಯಕನನ್ನಾಗಿ ಜಿತೇಂದ್ರ ಅವಾದ್ (Jitendra Awhad) ಅವರನ್ನು ನೇಮಕ ಮಾಡಿದ್ದಾರೆ. ಈ ಬಗ್ಗೆ ಸಭಾಪತಿ ಅವರಿಗೆ ಶರದ್ ಪವಾರ್ ಪತ್ರ ಬರೆದಿದ್ದಾರೆ.
ಪಕ್ಷದ ಬೆಳವಣಿಗೆಗಳ ಬಗ್ಗೆ ಮುಂಬೈನಲ್ಲಿ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ನಾಳೆ ಎನ್ಸಿಪಿ ನಾಯಕರ ಸಭೆ ಕರೆದಿದ್ದೇವೆ ಎಂದರು. ಈ ಹಿಂದೆಯೂ ಪಕ್ಷದಲ್ಲಿ ವಿಶ್ವಾಸಘಾತಕ ಘಟನೆಗಳು ನಡೆದಿದೆ. ಆಗ ಪಕ್ಷ ಬಿಟ್ಟು ಹೋದವರು ಚುನಾವಣೆಯಲ್ಲಿ ಸೋತಿದ್ದಾರೆ. ನಾನು ಮತ್ತೊಮ್ಮೆ ಪಕ್ಷವನ್ನು ಸಂಘಟಿಸಿ ತೋರಿಸುತ್ತೇನೆ. ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ನನ್ನ ಜೊತೆಗಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಅಂತಾ ನಾಯಕರು ನನಗೆ ಹೇಳಿದ್ದಾರೆ ಎಂದರು.
ಎನ್ಸಿಪಿ ಯಾರದ್ದು ಎಂಬುದನ್ನು ಜನರ ಸಾಬೀತುಪಡಿಸುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮಕೈಗೊಳ್ಳುತ್ಥೇನೆ. ಕೆಲ ದಿನಗಳಲ್ಲಿ ಎಲ್ಲ ಸತ್ಯವೂ ಹೊರ ಬರಲಿದೆ. ಮಹಾರಾಷ್ಟ್ರದ ಜನರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಶರದ್ ಪವಾರ್ ಹೇಳಿದರು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿನಾಗಿರುವ ಅಜಿತ್ ಪವಾರ್, ಪಕ್ಷದೊಳಗಿನ ಆಂತರಿಕ ಬೆಳವಣಿಗೆಯಿಂದಲೇ ಅಸಮಾಧಾನಗೊಂಡು ಇಂದು ಆಡಳಿತ ಪಕ್ಷ ಬಿಜೆಪಿ ಮತ್ತು ಸಿಎಂ ಏಕನಾಥ್ ಶಿಂಧೆ ಬಣದ ಜೊತೆ ಕೈ ಜೋಡಿಸಿದ್ದಾರೆ. ಅದರಂತೆ ಇಂದೇ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಜಿತ್ ಪವಾರ್ 9 ನಾಯಕರೊಂದಿಗೆ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, 53 ಎನ್ಸಿಪಿ ಶಾಸಕರ ಪೈಕಿ 43 ಶಾಸಕರ ಬೆಂಬಲವನ್ನು ಅಜಿತ್ ಪವಾರ್ ಹೊಂದಿದ್ದಾರೆ.
Published On - 6:01 pm, Sun, 2 July 23