Johnson & Johnson: ಜಾನ್ಸನ್ ಬೇಬಿ ಪೌಡರ್ ಉತ್ಪಾದನೆಗೆ ಕೋರ್ಟ್​ ಅನುಮತಿ; ಮಾರಾಟಕ್ಕೆ ನಿಷೇಧ

| Updated By: ಸುಷ್ಮಾ ಚಕ್ರೆ

Updated on: Nov 16, 2022 | 3:58 PM

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯು ಮಹಾರಾಷ್ಟ್ರ ಸರ್ಕಾರದ 2 ಆದೇಶಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಸೆಪ್ಟೆಂಬರ್ 15ರಂದು ಒಂದು ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು.

Johnson & Johnson: ಜಾನ್ಸನ್ ಬೇಬಿ ಪೌಡರ್ ಉತ್ಪಾದನೆಗೆ ಕೋರ್ಟ್​ ಅನುಮತಿ; ಮಾರಾಟಕ್ಕೆ ನಿಷೇಧ
ಜಾನ್ಸನ್ ಬೇಬಿ ಪೌಡರ್
Follow us on

ಮುಂಬೈ: ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಜಾನ್ಸನ್ ಬೇಬಿ ಪೌಡರ್​ನ ಉತ್ಪಾದನಾ ಲೈಸೆನ್ಸ್​ ಅನ್ನು ಮಹಾರಾಷ್ಟ್ರ ಎಫ್​ಡಿಎ ರದ್ದುಗೊಳಿಸಿತ್ತು. ಇದೀಗ ಮಹಾರಾಷ್ಟ್ರ ಸರ್ಕಾರದ ಆದೇಶದಂತೆ ಜಾನ್ಸನ್ ಆ್ಯಂಡ್ ಜಾನ್ಸನ್ (Johnson & Johnson) ಬೇಬಿ ಪೌಡರ್ ಮಾದರಿಗಳನ್ನು ಹೊಸದಾಗಿ ಪರೀಕ್ಷಿಸಲು ಬಾಂಬೆ ಹೈಕೋರ್ಟ್ ಇಂದು ಆದೇಶಿಸಿದೆ. ಹಾಗೇ, ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನವನ್ನು ತಯಾರಿಸಬಹುದು, ಆದರೆ, ಮಾರಾಟ ಮಾಡುವಂತಿಲ್ಲ ಎಂದು ಕಂಪನಿಗೆ ಅನುಮತಿ ನೀಡಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯು ಮಹಾರಾಷ್ಟ್ರ ಸರ್ಕಾರದ 2 ಆದೇಶಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಸೆಪ್ಟೆಂಬರ್ 15ರಂದು ಒಂದು ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಸೆಪ್ಟೆಂಬರ್ 20ರಂದು ಜಾನ್ಸನ್ ಬೇಬಿ ಪೌಡರ್ ಉತ್ಪನ್ನದ ಉತ್ಪಾದನೆ ಮತ್ತು ಮಾರಾಟವನ್ನು ತಕ್ಷಣವೇ ನಿಲ್ಲಿಸಲು ಆದೇಶ ನೀಡಲಾಗಿತ್ತು.

ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಜಂಟಿ ಆಯುಕ್ತರು ಮತ್ತು ಪರವಾನಗಿ ಪ್ರಾಧಿಕಾರವು ಈ ಆದೇಶಗಳನ್ನು ಜಾರಿಗೊಳಿಸಿದೆ. ಕೊಲ್ಕತ್ತಾದ ಕೇಂದ್ರೀಯ ಔಷಧ ಪ್ರಯೋಗಾಲಯದ ವರದಿಯನ್ನು ಆಧರಿಸಿ ಸರ್ಕಾರವು ತನ್ನ ಆದೇಶಗಳನ್ನು ನೀಡಿದೆ. ಜಾನ್ಸನ್ ಬೇಬಿ ಪೌಡರ್​​ನಲ್ಲಿ ನಿಗದಿತಕ್ಕಿಂತ ಹೆಚ್ಚಿನ pH ಮಟ್ಟ ಹೆಚ್ಚಿದೆ ಎಂಬುದು ಪರೀಕ್ಷೆ ವೇಳೆ ದೃಢಪಟ್ಟಿತ್ತು.

ಇದನ್ನೂ ಓದಿ: Johnson & Johnson: ಮಹಾರಾಷ್ಟ್ರದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಲೈಸೆನ್ಸ್​ ರದ್ದು

ನ್ಯಾಯಮೂರ್ತಿಗಳಾದ ಎಸ್ ವಿ ಗಂಗಾಪುರವಾಲಾ ಮತ್ತು ಎಸ್ ಜಿ ಡಿಗೆ ಅವರ ವಿಭಾಗೀಯ ಪೀಠವು ಇಂದು ಮುಂಬೈನ ಮುಲುಂಡ್ ಪ್ರದೇಶದಲ್ಲಿನ ಕಂಪನಿಯ ಕಾರ್ಖಾನೆಯಿಂದ ಹೊಸ ಮಾದರಿಗಳನ್ನು 3 ದಿನಗಳಲ್ಲಿ ಸಂಗ್ರಹಿಸುವಂತೆ ಎಫ್‌ಡಿಎಗೆ ಸೂಚಿಸಿದೆ. ಈ ಮಾದರಿಯನ್ನು ನಂತರ 3 ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ.

“ಈ ಮಾದರಿಗಳನ್ನು ಸೆಂಟ್ರಲ್ ಡ್ರಗ್ ಟೆಸ್ಟಿಂಗ್ ಲ್ಯಾಬೊರೇಟರಿ, ಎಫ್‌ಡಿಎ ಲ್ಯಾಬ್ ಮತ್ತು ಇಂಟರ್‌ಟೆಕ್ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಲ್ಯಾಬ್‌ಗಳು ಅದರ ನಂತರ 1 ವಾರದೊಳಗೆ ವರದಿಯನ್ನು ಸಲ್ಲಿಸುತ್ತವೆ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: 2023ರಲ್ಲಿ ಜಾಗತಿಕ ಮಟ್ಟದಲ್ಲಿ ಬೇಬಿ ಪೌಡರ್ ಮಾರಾಟ ನಿಲ್ಲಿಸಲಿದೆ ಜಾನ್ಸನ್ ಆಂಡ್ ಜಾನ್ಸನ್

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿ ಕದಂ, ಅಲ್ಲಿಯವರೆಗೂ ಕನಿಷ್ಠ ಉತ್ಪನ್ನ ಉತ್ಪಾದನೆ ಆರಂಭಿಸಲು ಕಂಪನಿಗೆ ಅನುಮತಿ ನೀಡಬೇಕು ಎಂದು ಕೋರಿದರು. ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ಹೈಕೋರ್ಟ್ ಮುಂದೂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ