ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಕೊಂಚ ಇಳಿಮುಖವಾಗುತ್ತಿದೆ. ಆದರೆ, ಸಂಭವನೀಯ ಮೂರನೇ ಅಲೆ ಬಗ್ಗೆ ತಜ್ಞರು ಮೇಲಿಂದ ಮೇಲೆ ಎಚ್ಚರಿಕೆ ನೀಡಿರುವುದರಿಂದ ಲಸಿಕೆ ವಿತರಣೆಯನ್ನು ಮತ್ತಷ್ಟು ಚುರುಕುಗೊಳಿಸುವ ಪ್ರಯತ್ನಗಳಾಗುತ್ತಿವೆ. ಏತನ್ಮಧ್ಯೆ, ಭಾರತೀಯ ಮಾರುಕಟ್ಟೆಗೆ ಹೊಸ ಕೊರೊನಾ ಲಸಿಕೆಯೊಂದನ್ನು ಪರಿಚಯಿಸಲು ಪ್ರಯತ್ನಗಳಾಗುತ್ತಿವೆ. ಅಮೇರಿಕಾದ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಕೊರೊನಾ ಲಸಿಕೆಯನ್ನು ಇಲ್ಲಿಗೆ ತರಲು ಭಾರತದ ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಸಂಘಟನೆ ಪ್ರಯತ್ನ ಮಾಡುತ್ತಿದೆ.
ಈಗಾಗಲೇ ಯೂರೋಪಿಯನ್ ಕೌನ್ಸಿಲ್ ಕೊವಿಡ್ ಟಾಸ್ಕ್ ಫೋರ್ಸ್ ಮೂಲಕ ಭಾರತಕ್ಕೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ 10 ಲಕ್ಷ ಡೋಸ್ ಕೊರೊನಾ ಲಸಿಕೆ ಆಮದು ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದ್ದು, ಭಾರತದ ಖಾಸಗಿ ಕಂಪನಿಯೊಂದು ಲಸಿಕೆ ಆಮದು ಪರವಾನಗಿಗೆ ಅರ್ಜಿ ಸಲ್ಲಿಸಲಿದೆ ಎಂದು ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಸಂಘಟನೆಯ ಡೈರೆಕ್ಟರ್ ಜನರಲ್ ಗಿರಿಧರ್ ಜ್ಞಾನಿ ತಿಳಿಸಿದ್ದಾರೆ. ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತಯಾರಿಸಿರುವ ಕೊರೊನಾ ಲಸಿಕೆ ಸ್ಪುಟ್ನಿಕ್ನಂತೆಯೇ ಸಿಂಗಲ್ ಡೋಸ್ ಲಸಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.
ಭಾರತದಲ್ಲಿ ಡೆಲ್ಟಾ ಪ್ಲಸ್ ಕೊರೊನಾ ವೈರಾಣು ಪತ್ತೆ
ಇದರ ನಡುವೆ ಭಾರತದಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ಮೊದಲ ಪ್ರಕರಣ ಪತ್ತೆಯಾಗಿದೆ. ಮಧ್ಯಪ್ರದೇಶದ ಭೋಪಾಲ್‌ನ 65 ವರ್ಷದ ವೃದ್ಧೆಯಲ್ಲಿ ಹೊಸ ರೂಪಾಂತರಿ ವೈರಾಣು ಪತ್ತೆಯಾಗಿದ್ದು, ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಯಲ್ಲಿ ವೈರಸ್ ಕಂಡುಬಂದಿದೆ. ಈ ಬಗ್ಗೆ ಜೂನ್ 16ರಂದು ವೃದ್ಧೆಯ ಕುಟುಂಬಸ್ಥರಿಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಸದ್ಯ 65 ವರ್ಷದ ವೃದ್ಧೆ ಕೊವಿಡ್‌ನಿಂದ ಗುಣಮುಖ ಆಗಿದ್ದಾರೆ ಎಂದು ತಿಳಿದುಬಂದಿದೆ.
ಡೆಲ್ಟಾ ಪ್ಲಸ್ ಪ್ರಭೇದದ ಬಗ್ಗೆ ಮಾತನಾಡಿರುವ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್, ಸದ್ಯದ ಅಧ್ಯಯನಗಳ ಪ್ರಕಾರ ಡೆಲ್ಟಾ ಪ್ಲಸ್ ಕಳವಳಕಾರಿ ಅಲ್ಲ ಎಂದಿದ್ದಾರೆ. ಆದರೂ ಈ ಪ್ರಭೇದದ ಬಗ್ಗೆ ನಿಗಾ ವಹಿಸಲಾಗಿದೆ ಎನ್ನುವುದನ್ನೂ ತಿಳಿಸಿದ್ದಾರೆ. ಭಾರತದಲ್ಲಿ B.1.617.2 ಡೆಲ್ಟಾ ಪ್ರಭೇದದಿಂದ ಕೊರೊನಾದ ಎರಡನೇ ಅಲೆ ಆಗಮನವಾಗಿದ್ದು, ಬಹಳ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ ವೈರಸ್ ಇದು ಎನ್ನುವುದನ್ನು ತಜ್ಞರು ಆರಂಭದಲ್ಲೇ ತಿಳಿಸಿದ್ದರು. ಇದೀಗ ಡೆಲ್ಟಾ ಪ್ರಭೇದದ ವೈರಸ್ ರೂಪಾಂತರಗೊಂಡು ಡೆಲ್ಟಾ ಪ್ಲಸ್ ಪ್ರಭೇದ ಸೃಷ್ಟಿಯಾಗಿರುವುದು ಕೊರೊನಾದ 3ನೇ ಅಲೆಗೆ ಕಾರಣ ಆಗಲಿದೆಯಾ ಎನ್ನುವ ಆತಂಕ ಮೂಡಿದೆ.
ಇದನ್ನೂ ಓದಿ:
ಮಧ್ಯಪ್ರದೇಶದ ಸೋಂಕಿತನೊಬ್ಬನಲ್ಲಿ ಕೊರೋನಾ ವೈರಸ್ನ ಹೊಸ ರೂಪಾಂತರಿ ಪತ್ತೆ, ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸ ಆರಂಭ
ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂದರೆ ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಜನ; ಆರೋಗ್ಯ ಇಲಾಖೆಗೆ ಸವಾಲು