ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್​ ತೇಜ್​ಪಾಲ್ ನಿರ್ದೋಷಿ: ಅತ್ಯಾಚಾರ ಆರೋಪದಿಂದ ಮುಕ್ತಿ

|

Updated on: May 21, 2021 | 2:51 PM

2013ರಲ್ಲಿ ಗೋವಾದ ಐಷಾರಾಮಿ ಹೊಟೇಲೊಂದರ ಲಿಫ್ಟ್​ನಲ್ಲಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಗೋವಾ ಸೆಷನ್ಸ್​ ಕೋರ್ಟ್​ ತರುಣ್​ ತೇಜ್​ಪಾಲ್ ನಿರ್ದೋಷಿ ಎಂಬುದಾಗಿ ಇಂದು (ಮೇ 21) ತೀರ್ಪು ನೀಡಿದೆ.

ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್​ ತೇಜ್​ಪಾಲ್ ನಿರ್ದೋಷಿ: ಅತ್ಯಾಚಾರ ಆರೋಪದಿಂದ ಮುಕ್ತಿ
ತರುಣ್​ ತೇಜ್​ಪಾಲ್​
Follow us on

ಪಣಜಿ: ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್​ಪಾಲ್​ಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥಗೊಂಡಿದೆ. 2013ರಲ್ಲಿ ಗೋವಾದ ಐಷಾರಾಮಿ ಹೊಟೇಲೊಂದರ ಲಿಫ್ಟ್​ನಲ್ಲಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಗೋವಾ ಸೆಷನ್ಸ್​ ಕೋರ್ಟ್​ ತರುಣ್​ ತೇಜ್​ಪಾಲ್ ನಿರ್ದೋಷಿ ಎಂಬುದಾಗಿ ಇಂದು (ಮೇ 21) ತೀರ್ಪು ನೀಡಿದೆ. ಆ ಮೂಲಕ ಅನೇಕ ವರ್ಷಗಳಿಂದ ವಿವಾದದ ಸುಳಿಯಲ್ಲಿದ್ದ ಹಿರಿಯ ಪತ್ರಕರ್ತನಿಗೆ ಆರೋಪದಿಂದ ಮುಕ್ತಿ ಸಿಕ್ಕಂತಾಗಿದೆ.

ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಧೀಶೆ ಕ್ಷಮಾ ಜೋಶಿ, ತಾಂತ್ರಿಕ ಕಾರಣಗಳಿಂದಾಗಿ ತೀರ್ಪನ್ನು ಇವತ್ತಿಗೆ (ಮೇ 21) ಕಾಯ್ದಿರಿಸಿದ್ದರು. ಈ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ ಎಂದು ಗೋವಾದ ಸೆಷನ್ಸ್ ನ್ಯಾಯಾಲಯ ಮೇ 12ರಂದು ತಿಳಿಸಿತ್ತು. ಆ ಪ್ರಕಾರವಾಗಿ ಇಂದು ತೀರ್ಪು ಪ್ರಕಟವಾಗಿದ್ದು, ತರುಣ್​ ತೇಜ್​ಪಾಲ್ ನಿರ್ದೋಷಿ ಎಂದು ನ್ಯಾಯಾಲಯ ಘೋಷಿಸಿದೆ.

ಮೂರನೇ ಬಾರಿಗೆ ಮುಂದೂಡಲ್ಪಟ್ಟಿದ್ದ ತೀರ್ಪು
ಸದರಿ ಪ್ರಕರಣದ ಕುರಿತು ಏಪ್ರಿಲ್ 27ರಂದೇ ತೀರ್ಪು ಪ್ರಕಟವಾಗಬೇಕಿತ್ತು. ಆದರೆ ನ್ಯಾಯಾಧೀಶರು ತೀರ್ಪು ನೀಡುವ ದಿನಾಂಕವನ್ನು ಮೇ 12ಕ್ಕೆ ಮುಂದೂಡಿದ್ದರು. ನಂತರ ಮತ್ತೆ ಮೇ 19ಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಸತತ ಮೂರನೇ ಬಾರಿಗೂ ನ್ಯಾಯಾಲಯ ತೀರ್ಪನ್ನು ಮಂದೂಡಿತ್ತು. ಅಂತಿಮವಾಗಿ ಇಂದು ತೀರ್ಪು ಹೊರಬಿದ್ದಿದೆ.

2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನಲ್ಲಿ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತರುಣ್ ತೇಜ್ ಪಾಲ್ ಎದುರಿಸುತ್ತಿದ್ದ ಕಾರಣ 2013ರ ನವೆಂಬರ್ 30ರಂದು ಬಂಧನಕ್ಕೊಳಗಾಗಿದ್ದರು. ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅದಾದ ನಂತರ 2017ರ ಸೆಪ್ಟೆಂಬರ್ 29ರಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಗೋವಾ ಸೆಷನ್ ಕೋರ್ಟ್​ನಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ವಿರುದ್ಧ ತರುಣ್​ ತೇಜ್​ಪಾಲ್ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರಾದರೂ ಪ್ರಕರಣರಣದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿ, ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು. ಅಲ್ಲದೆ ಆರು ತಿಂಗಳೊಳಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಗೋವಾ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

ಇದನ್ನೂ ಓದಿ:
ತೆಹಲ್ಕಾ ಹಗರಣ: ಫರ್ನಾಂಡಿಸ್‌ ಗೆಳತಿ ಜಯಾ ಜೇಟ್ಲಿಗೆ ಜೈಲು ಶಿಕ್ಷೆ ಕಾಯಂ ಆಯ್ತು 

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು