ಈ 3 ವಿಧಾನಗಳನ್ನು ಅನುಸರಿಸಿದರೆ ಬ್ಲ್ಯಾಕ್ ಫಂಗಸ್ ಕಾಯಿಲೆಯನ್ನು ತಡೆಗಟ್ಟಬಹುದು: ಡಾ.ರಣ್ದೀಪ್ ಗುಲೇರಿಯಾ
ಏಮ್ಸ್ ನಿರ್ದೇಶಕರು ಹೇಳುವಂತೆ 2002ನೇ ಇಸವಿ ಸಂದರ್ಭದಲ್ಲಿ ಸಾರ್ಸ್ ಉಲ್ಬಣಿಸಿದ್ದಾಗಲೂ ಬ್ಲ್ಯಾಕ್ ಫಂಗಸ್ ಕಂಡುಬಂದಿತ್ತು. ಈಗ ಕೊರೊನಾ ಸೋಂಕಿಗೆ ತುತ್ತಾದ ಯಾರಲ್ಲಿ ಅನಿಯಂತ್ರಿತ ಮಧುಮೇಹ ಸಮಸ್ಯೆ ಇದೆಯೋ ಅವರಿಗೆ ತುಸು ವೇಗವಾಗಿ ತಗುಲುತ್ತಿದೆ ಎಂದು ಹೇಳಿದ್ದಾರೆ.
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸುವುದರ ಜತೆಯಲ್ಲೇ ಬ್ಲ್ಯಾಕ್ ಫಂಗಸ್ ಸೋಂಕಿತರ ಪ್ರಮಾಣವೂ ಹೆಚ್ಚುತ್ತಿದೆ. ಈಗಾಗಲೇ ಬ್ಲ್ಯಾಕ್ಫಂಗಸ್ಗೆ ತುತ್ತಾದವರ ಸಂಖ್ಯೆ ಸುಮಾರು 7,200ಕ್ಕೂ ಅಧಿಕ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೆಲವು ರಾಜ್ಯಗಳು ಈ ಕಾಯಿಲೆಯನ್ನು ಸಾಂಕ್ರಾಮಿಕ ಎಂದು ಘೋಷಿಸಿವೆ ಕೂಡಾ. ಇಂತಹ ಸಂದರ್ಭದಲ್ಲಿ ದೇಶದ ಅತ್ಯುನ್ನತ ಆರೋಗ್ಯ ಸಂಸ್ಥೆಯಾದ ಏಮ್ಸ್ ನಿರ್ದೇಶಕ ಡಾ. ರಣ್ದೀಪ್ ಗುಲೇರಿಯಾ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಕಾಯಿಲೆಯನ್ನು ತಡೆಗಟ್ಟಬಲ್ಲ ಪ್ರಮುಖ ಮೂರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ರಕ್ತದಲ್ಲಿನ ಮಧುಮೇಹ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಿಸುವುದು, ಸ್ಟೀರಾಯ್ಡ್ ಪಡೆಯುತ್ತಿರುವವರು ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಅಂಶ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸುವುದು ಹಾಗೂ ಸ್ಟೀರಾಯ್ಡ್ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಗಮನವಿಡುವುದು. ಈ ಮೂರು ಅಂಶಗಳು ಬ್ಲ್ಯಾಕ್ ಫಂಗಸ್ ತಡೆಯುವಲ್ಲಿ ಅತ್ಯಂತ ಸಹಕಾರಿಯಾಗಲಿದ್ದು, ಜನರು ಈ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದ್ದಾರೆ.
ಏಮ್ಸ್ ನಿರ್ದೇಶಕರು ಹೇಳುವಂತೆ 2002ನೇ ಇಸವಿ ಸಂದರ್ಭದಲ್ಲಿ ಸಾರ್ಸ್ ಉಲ್ಬಣಿಸಿದ್ದಾಗಲೂ ಬ್ಲ್ಯಾಕ್ ಫಂಗಸ್ ಕಂಡುಬಂದಿತ್ತು. ಈಗ ಕೊರೊನಾ ಸೋಂಕಿಗೆ ತುತ್ತಾದ ಯಾರಲ್ಲಿ ಅನಿಯಂತ್ರಿತ ಮಧುಮೇಹ ಸಮಸ್ಯೆ ಇದೆಯೋ ಅವರಿಗೆ ತುಸು ವೇಗವಾಗಿ ತಗುಲುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ, ಕೊರೊನಾದಿಂದ ಗುಣಮುಖರಾಗುತ್ತಿರುವವರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ಜೀವಕ್ಕೆ ಹೆಚ್ಚು ಅಪಾಯಕಾರಿಯೂ ಆಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ಸ್ಟೀರಾಯ್ಡ್ ನೀಡುವ ಪ್ರಮಾಣವೂ ಎರಡನೇ ಅಲೆ ಸಂದರ್ಭದಲ್ಲಿ ಹೆಚ್ಚಾಗಿದ್ದು, ಮಧುಮೇಹ ಸಮಸ್ಯೆ ಇದ್ದವರಿಗೆ ಅದು ಸಮಸ್ಯೆ ಉಂಟುಮಾಡುತ್ತಿದೆ. ಸ್ಟೀರಾಯ್ಡ್ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಅಂಶ ಏರಿಕೆಯಾಗಿದ್ದಲ್ಲಿ ಮ್ಯೂಕೋರ್ಮೈಕೋಸಿಸ್ ಬಹಳ ವೇಗವಾಗಿ ಅಂಟಿಕೊಳ್ಳುತ್ತದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಸ್ಟೀರಾಯ್ಡ್ ಬಳಸಬೇಕೆಂದು ಗುಲೇರಿಯಾ ಸೂಚನೆ ನೀಡಿದ್ದಾರೆ.
ಯಾರಿಗೆ ಬ್ಲ್ಯಾಕ್ ಫಂಗಸ್ ಹೆಚ್ಚು ಅಪಾಯಕಾರಿ 1. ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು 2. ಅತಿ ಹೆಚ್ಚು ಸ್ಟೀರಾಯ್ಟ್ ಬಳಕೆಯಲ್ಲಿರುವವರು 3. ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಸೇವಿಸುತ್ತಿರುವವರು 4. ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು 5. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯುಳ್ಳವರು 6. ಅತಿಯಾದ ಶೀತ, ಥಂಡಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಉಸಿರಾಟದ ಸಮಸ್ಯೆಯಿದ್ದು ಮಡಿಕಲ್ ಆಕ್ಸಿಜನ್ ಸಹಾಯ ಪಡೆಯುವವರು ಇವರೆಲ್ಲರೂ ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ ಎಂದು ಗುರುತಿಸುವುದು ಹೇಗೆ? 1. ಮೂಗಿನಿಂದ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು 2. ಮೂಗಿನಲ್ಲಿ ಕಿರಿಕಿರಿ, ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಎರಡೆರಡು ದೃಷ್ಟಿ, ಕಣ್ಣು ಕೆಂಪಾಗುವುದು, ಕಾಣದಿರುವುದು, ಅಸ್ಪಷ್ಟತೆ, ಕಣ್ಣು ತೆರೆಯುವುದಕ್ಕೆ ಹಾಗೂ ಮುಚ್ಚುದಕ್ಕೆ ಕಷ್ಟವಾಗುವುದು 3. ಮುಖ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಅನುಭವ 4. ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು 5. ಮುಖದಲ್ಲಿ ಊತ, ಕಪ್ಪುಗಟ್ಟುವಿಕೆ, ಗಟ್ಟಿಯಾಗುವಿಕೆ, ನೋವು ಕಾಣಿಸಿಕೊಳ್ಳುವುದು 6. ಹಲ್ಲು ಉದರುವುದು, ಬಾಯಿ ಒಳಗೂ ಕಪ್ಪು ಬಣ್ಣ ಹಾಗೂ ಊತ ಕಾಣಿಸಿಕೊಳ್ಳುವುದು ಇವು ಬ್ಲ್ಯಾಕ್ ಫಂಗಸ್ ಸೋಂಕಿನ ಕೆಲ ಪ್ರಮುಖ ಲಕ್ಷಣಗಳು
ಸೋಂಕು ಕಾಣಿಸಿಕೊಂಡಾಗ ಏನು ಮಾಡಬೇಕು? 1. ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ENT ವೈದ್ಯರು, ಕಣ್ಣಿನ ವೈದ್ಯರು ಅಥವಾ ಸೂಕ್ತ ತಜ್ಞರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು 2. ರಕ್ತದಲ್ಲಿನ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಅನುಸರಿಸಬೇಕು 3. ಇತರ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಬಾರದು 4. ವೈದ್ಯರನ್ನು ಕೇಳದೆ ಯಾವ ಕಾರಣಕ್ಕೂ ಸ್ಟಿರಾಯ್ಡ್ ಹಾಗೂ ಆ್ಯಂಟಿ ವೈರಲ್ ಡ್ರಗ್ ಪಡೆಯಬಾರದು 5. ವೈದ್ಯರ ಸಲಹೆ ಮೇರೆಗೆ MRI, ಸಿಟಿ ಸ್ಕ್ಯಾನ್ ಮಾಡಿಸಬೇಕು
ಇದನ್ನೂ ಓದಿ: ನಿಮಗೆ ಬ್ಲ್ಯಾಕ್ ಫಂಗಸ್ ಇದೆಯೋ, ಇಲ್ಲವೋ ಗುರುತಿಸುವುದು ಹೇಗೆ? ಏನು ಕ್ರಮ ತೆಗೆದುಕೊಳ್ಳಬೇಕು? ಚಿಕಿತ್ಸಾ ವಿಧಾನವೇನು?
ದೇಶದಲ್ಲಿ 7,200ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ; ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್
Published On - 3:31 pm, Fri, 21 May 21