ಕೇರಳ ರಾಜ್ಯಪಾಲರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗದಂತೆ 2 ಸುದ್ದಿ ವಾಹಿನಿಗಳಿಗೆ ತಡೆ; ಪತ್ರಕರ್ತರಿಂದ ಪ್ರತಿಭಟನೆ
ಮಲಯಾಳಂ ಪ್ರಮುಖ ಸುದ್ದಿವಾಹಿನಿಗಳಾದ ಮೀಡಿಯಾ ಒನ್ ಮತ್ತು ಕೈರಳಿ, ಪಿಣರಾಯಿ ವಿಜಯನ್ ಸರ್ಕಾರದ ಪರವಾಗಿದ್ದು ತನ್ನ ವಿರುದ್ಧ ನಿರಂತರವಾಗಿ ಸುದ್ದಿ ಬಿತ್ತರಿಸುತ್ತಿವೆ ಎಂದು ಖಾನ್ ಆರೋಪಿಸಿದ್ದಾರೆ
ತಿರುವನಂತಪುರಂ: ಕೇರಳ(Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammad Khan) ಅವರು ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಕರೆದಿದ್ದು ಅಲ್ಲಿ ಎರಡು ವಾಹಿನಿಯ ಪತ್ರಕರ್ತರ ವಿರುದ್ಧ ಗುಡುಗಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಇಲ್ಲಿ ಕೈರಳಿ ಮತ್ತು ಮೀಡಿಯಾ ಒನ್ ವಾಹಿನಿಯ ಪತ್ರಕರ್ತರು ಇದ್ದಾರಾ? ಅವರು ಇಲ್ಲಿದ್ದರೆ ದಯವಿಟ್ಟು ಹೊರ ನಡೆಯಿರಿ. ನಾನು ಅವರ ಜತೆ ಮಾತನಾಡಲು ಬಯಸುವುದಿಲ್ಲ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದರು. ಎರಡು ವಾಹಿನಿಯ ಪತ್ರಕರ್ತರನ್ನು ಸುದ್ದಿಗೋಷ್ಠಿಯಿಂದ ಹೊರಹಾಕಿದ ರಾಜ್ಯಪಾಲರ ಕ್ರಮ ಖಂಡಿಸಿ ಕೇರಳದ ಪತ್ರಕರ್ತರು ಇಂದು(ಮಂಗಳವಾರ) ತಿರುವನಂತಪುರಂನ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಲಯಾಳಂನ ಪ್ರಮುಖ ಸುದ್ದಿವಾಹಿನಿಗಳಾದ ಮೀಡಿಯಾ ಒನ್ ಮತ್ತು ಕೈರಳಿ, ಪಿಣರಾಯಿ ವಿಜಯನ್ ಸರ್ಕಾರದ ಪರವಾಗಿದ್ದು ತನ್ನ ವಿರುದ್ಧ ನಿರಂತರವಾಗಿ ಸುದ್ದಿ ಬಿತ್ತರಿಸುತ್ತಿವೆ ಎಂದು ಖಾನ್ ಆರೋಪಿಸಿದ್ದಾರೆ. ಖಾನ್ ಪತ್ರಕರ್ತರ ವಿರುದ್ಧ ಗುಡುಗುತ್ತಿರುವ ವಿಡಿಯೊವನ್ನು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
#WATCH | "If anybody from Kairali TV and Media One TV channels is here, I won't talk to you. I there is anybody from these two channels please get out," said Kerala Governor Arif Mohammed Khan during a press briefing in Kochi, earlier today pic.twitter.com/aZap8BJRLv
— ANI (@ANI) November 7, 2022
ರಾಜ್ಯಪಾಲರು ಪತ್ರಕರ್ತರೊಂದಿಗೆ ಈ ರೀತಿ ವರ್ತಿಸಿದ್ದು ಇದೇ ಮೊದಲಲ್ಲ ಎಂಬ ಕಾರಣಕ್ಕೆ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಮ್ಯೂಸಿಯಂನಿಂದ ರಾಜ್ಯಪಾಲರ ಭವನದವರೆಗೆ ಮೆರವಣಿಗೆಗೆ ಕರೆ ನೀಡಿದೆ.
ಖಾನ್ ಬಿಜೆಪಿಯ ಆಜ್ಞೆಯ ಮೇರೆಗೆ ವರ್ತಿಸುತ್ತಿದ್ದಾರೆ ಎಂದು ಸಿಪಿಎಂ ಸರ್ಕಾರ ಆರೋಪಿಸಿದೆ. ಕೆಲವು ಪತ್ರಕರ್ತರು ಮತ್ತು ಸುದ್ದಿವಾಹಿನಿಗಳನ್ನು “ಕೇಡರ್ ಮೀಡಿಯಾ” ಎಂದು ಕರೆದ ಖಾನ್, ತಮ್ಮ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಅವಕಾಶ ನೀಡದಂತೆ ಕಳೆದ ತಿಂಗಳು ಆದೇಶಿಸಿದ್ದರು.
ಸೋಮವಾರ ಖಾನ್ ಅವರು “ನನ್ನ ಕಚೇರಿಗೆ ನುಗ್ಗಿ” ಅಥವಾ “ರಸ್ತೆಯಲ್ಲಿ ನನ್ನ ಮೇಲೆ ದಾಳಿ ಮಾಡಿ” ಎಂದು ರಾಜ್ಯ ಸರ್ಕಾರಕ್ಕೆ “ಸವಾಲು” ಹಾಕಿದರು. ನವೆಂಬರ್ 15 ರಂದು ರಾಜಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಘೋಷಿಸಿರುವ ಕುರಿತು ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಪ್ರಮುಖ ಶಾಸನಗಳನ್ನು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಇದನ್ನೂ ಓದಿ: ಕೈರಳಿ ಮತ್ತು ಮೀಡಿಯಾ ಒನ್‌ನ ಪತ್ರಕರ್ತರು ಪತ್ರಿಕಾಗೋಷ್ಠಿಯಿಂದ ಹೊರನಡೆಯಿರಿ ಎಂದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
Published On - 2:49 pm, Tue, 8 November 22