ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಸರ್ಕಾರ (Narendra Modi Govt) 8 ವರ್ಷ ಪೂರೈಸಿದ ಹಿನ್ನೆಲೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ನಿನ್ನೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜೊತೆಗೆ ವರುಷ ಎಂಟು ಅವಾಂತರ ನೂರೆಂಟು ಎಂಬ ಪುಸ್ತಕ ಬಿಡುಗಡೆ ಮಾಡಿದರು. ಈ ವಿಚಾರವಾಗಿ ಹೈದರಾಬಾದ್ನಲ್ಲಿ ಟಿವಿ9 ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯನವರಿಗೆ ಅವಾಂತರ ಎಂಬ ಪದಗಳೆಲ್ಲಾ ಚೆನ್ನಾಗಿ ಗೊತ್ತು. ಯಾಕೆಂದರೆ ಅವಾಂತರದ ವ್ಯಕ್ತಿಯೇ ಸಿದ್ದರಾಮಯ್ಯ. ಕಾಂಗ್ರೆಸ್ ಪಕ್ಷದ ಮೇಲೆಯೇ ಸಿದ್ದರಾಮಯ್ಯನವರಿಗೆ ವಿಶ್ವಾಸವಿಲ್ಲ. ಅದಕ್ಕೆ ವೈಯಕ್ತಿಕವಾಗಿ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಪಕ್ಷದ ಕಾರ್ಯಕ್ರಮ ಮಾಡಲು ಅವರು ತಯಾರಿಲ್ಲ. ಯಾಕೆಂದರೆ ತಾನು ಬೆಳೆಯಬೇಕು ಎಂಬ ಅವಾಂತರದ ವ್ಯಕ್ತಿ ಆತ. ಅವಾಂತರಗಳ ಕೇಂದ್ರವೇ ಸಿದ್ದರಾಮಯ್ಯ. ಬಿಜೆಪಿ ಬಗ್ಗೆ ಹುಡುಕಿ ಹುಡುಕಿ ಯಾರೋ ಅವರಿಗೆ ಹೇಳಿ ಕೊಟ್ಟಿದ್ದಾರೆ ಎಂದು ಹೇಳಿದರು.
ಅವರ ಪಕ್ಷದ ಐದು ಜನರ ಅವಾಂತರಗಳನ್ನು ನಾವು ನೋಡುವವರಿದ್ದೇವೆ. ಸಿದ್ದರಾಮೋತ್ಸವ ಮಾಡುತ್ತಿರೋದು ನಾನಲ್ಲ ಬೆಂಬಲಿಗರು ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಯಾರಾದರೂ ನಾನೇ ಮಾಡಿಕೊಳ್ಳುತ್ತಿದ್ದೇನೆ ಅಂತಾ ಹೇಳಿಕೊಳ್ಳುತ್ತಾರಾ ಎಂದರು. ಬೆಂಬಲಿಗರನ್ನು ಎಷ್ಟರ ಮಟ್ಟಿಗೆ ರಾಜ್ಯದಲ್ಲಿ ದೇಶದಲ್ಲಿ ಬೆಳೆಸಿದ್ದಾರೆ ನೋಡುತ್ತಿದ್ದೇವೆ. ಸಿದ್ದರಾಮಯ್ಯ ಜೊತೆಗೆ ಇದ್ದ ರೇವಣ್ಣ, ಇಬ್ರಾಹಿಂ ಬೈಯುತ್ತಾ ಇದ್ದಾರೆ. ತಾನು ಮಾತ್ರ ಬೆಳೆಯಬೇಕು ಎನ್ನುವ ವ್ಯಕ್ತಿ ಸಿದ್ದರಾಮಯ್ಯ. ಅವರ ಜೊತೆಗಿರುವ ಒಬ್ಬರನ್ನೂ ಬೆಳೆಸುವುದಿಲ್ಲ. ಇದೇ ಸಿದ್ದರಾಮಯ್ಯನವರ ಅವಾಂತರದ ವ್ಯವಸ್ಥೆ ಎಂದು ಹೇಳಿದರು.
ಮಹಾರಾಷ್ಟ್ರ ಬೆಳವಣಿಗೆಯಿಂದ ದೇಶದ ಜನರಿಗೆ ಸಂತೋಷ ಆಗಿದೆ
ಮಹಾರಾಷ್ಟ್ರ ಬೆಳವಣಿಗೆಯಿಂದ ದೇಶದ ಜನರಿಗೆ ಸಂತೋಷ ಆಗಿದೆ. ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿ ಸಿಕ್ಕಿದೆ. ಬಿಜೆಪಿಯ ಎಲ್ಲಾ ಕಾರ್ಯಕರ್ತರು ಶ್ರಮ ಹಾಕಿದರೆ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡುವ ಎಲ್ಲಾ ರಾಜ್ಯದಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶ ಜಾಸ್ತಿ ಇದೆ ಅಂತಾ ನಿನ್ನೆ ಕಾರ್ಯಕಾರಿಣಿ ಉದ್ಘಾಟನಾ ಭಾಷಣದಲ್ಲಿ ಜೆ.ಪಿ. ನಡ್ಡಾ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಂಘಟನೆ ಎಷ್ಟು ಬೆಳೆಸಬೇಕು ಅಂತಾ ರಾಷ್ಟ್ರೀಯ ಅಧ್ಯಕ್ಷರು ಪ್ರಸ್ತಾಪ ಮಾಡಿದ್ದಾರೆ. ಹಿಮಾಚಲ ಪ್ರದೇಶ, ಗುಜರಾತ್, ತೆಲಂಗಾಣ ಚುನಾವಣೆಗಳ ಬಗ್ಗೆಯೂ ಚರ್ಚೆ ಆಗಿದೆ. ಬಿಜೆಪಿ ಎಲ್ಲಾ ಪ್ರಯತ್ನ ಲೋಕಸಭಾ ಚುನಾವಣಾ ದೃಷ್ಟಿಯಿಂದ ಮಾಡಬೇಕು ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದು ಹೇಳಿದರು.
ಎಂಟು ವರ್ಷ ಪಾರದರ್ಶಕ ಸರ್ಕಾರವನ್ನು ನರೇಂದ್ರ ಮೋದಿ ಕೊಟ್ಟಿದ್ದಾರೆ: ಜಗದೀಶ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ನವರಿಗೆ ಟೀಕಿಸಲು ಯಾವುದೇ ವಿಷಯ ಇಲ್ಲ. ಹಿಂದೆ ಯುಪಿಎ-೨ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಷ್ಟೊಂದು ಹಗರಣಗಳು ಹೊರಗೆ ಬಂದವು ಗೊತ್ತಿದೆ. ಹಾಗೆ ಹಗರಣವನ್ನೂ ಹೇಳುವ ಶಕ್ತಿಯೂ ಕಾಂಗ್ರೆಸ್ಗೆ ಇಲ್ಲದಂತೆ ಮೋದಿ ಆಡಳಿತ ಮಾಡುತ್ತಿದ್ದಾರೆ. ವಿಪಕ್ಷದ ನಾಯಕರಾಗಿ ಸಿದ್ದರಾಮಯ್ಯ ರಚನಾತ್ಮಕ ಸಲಹೆ ಕೊಡಬೇಕು. ಆದರೆ ಬೆಳಗ್ಗಿನಿಂದ ಸಂಜೆಯವರೇ ಟೀಕೆ ಮಾಡುವುದಾದರೆ ಅದಕ್ಕೆ ಅರ್ಥವೇ ಇಲ್ಲ. ಟೀಕೆ ಮಾಡುವುದಕ್ಕೋಸ್ಕರವಾಗಿಯೇ ಕಾಂಗ್ರೆಸ್ ಪಕ್ಷ ಇದೆ. ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ನಲ್ಲಿಯೇ ಚರ್ಚೆ ಆಗುತ್ತಿದೆ. ಅಂತಹ ದೊಡ್ಡ ಕಾರ್ಯಕ್ರಮ ಸರಿಯೋ ತಪ್ಪೋ ಅಂತಾ ಅವರ ಪಕ್ಷದಲ್ಲೇ ಚರ್ಚೆ ನಡೆಯುತ್ತಿದೆ. ಅದು ಯಾವ ರೀತಿ ಇಂಪ್ಯಾಕ್ಟ್ ಆಗುತ್ತದೆ ಅಂತ ನಂತರ ನೋಡೋಣ ಎಂದು ಹೇಳಿದರು.
ಕಾಂಗ್ರೆಸ್ ಮೋದಿ ಆಡಳಿತದ ಬಗ್ಗೆ ಜನರಿಗೆ ಮಿಸ್ ಗೈಡ್ ಮಾಡುವುದು ಸರಿ ಅಲ್ಲ: ಸಚಿವ ಗೋವಿಂದ ಕಾರಜೋಳ
60 ವರ್ಷ ಕಾಲ ಆಡಳಿತ ಮಾಡಿದ ಕಾಂಗ್ರೆಸ್, ಮೋದಿ ಆಡಳಿತದ ಬಗ್ಗೆ ಜನರಿಗೆ ಮಿಸ್ ಗೈಡ್ ಮಾಡುವುದು ಸರಿಯಲ್ಲ. ಕಾಂಗ್ರೆಸ್, ಸಿದ್ಧರಾಮಯ್ಯ ಅವರ ಸಾಧನೆ ಹೇಳಿಕೊಳ್ಳಲಿ. ಹತಾಶ ಮನೋಭಾವನೆಯಿಂದ ಈ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ 2024ರಲ್ಲಿ ಮೋದಿ ನೇತೃತ್ವದ ಕೇಂದ್ರದಲ್ಲಿ ಸರ್ಕಾರ ಬರುತ್ತದೆ ಅಂತಾ ಗೊತ್ತಾಗಿದೆ. ಅದಕ್ಕಾಗಿ ಹತಾಶ ಮನಸ್ಸಿನಿಂದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದರು.
Published On - 11:30 am, Sun, 3 July 22