ಕಾಳಿ ಮಾತೆ ಸಿಗರೇಟ್ ಸೇದುತ್ತಿರುವ ಸಿನಿಮಾದ ಪೋಸ್ಟರ್ (Kaali Film Poster) ಭಾರೀ ವಿವಾದ ಸೃಷ್ಟಿಸಿದೆ. ಈ ವಿವಾದಿತ ಪೋಸ್ಟರ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra), ನನ್ನ ದೃಷ್ಟಿಯಲ್ಲಿ ಕಾಳಿಯೆಂದರೆ ಮಾಂಸ ತಿನ್ನುವ, ಆಲ್ಕೋಹಾಲ್ ಸ್ವೀಕರಿಸುವ ದೇವತೆ. ನಿಮ್ಮ ದೇವತೆಯನ್ನು ನಿಮಗೆ ಹೇಗೆ ಬೇಕೋ ಹಾಗೆ ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಇನ್ನೂ ಕೆಲವು ಸ್ಥಳಗಳಲ್ಲಿ ಅದನ್ನೇ ಧರ್ಮನಿಂದನೆ ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.
ನೀವು ಸಿಕ್ಕಿಂಗೆ ಹೋದರೆ ಅಲ್ಲಿ ಭಕ್ತರು ಕಾಳಿ ದೇವಿಗೆ ವಿಸ್ಕಿಯನ್ನು ನೀಡುವುದನ್ನು ನೋಡಬಹುದು. ಆದರೆ, ನೀವು ಉತ್ತರ ಪ್ರದೇಶಕ್ಕೆ ಹೋಗಿ ಅಲ್ಲಿನ ಕಾಳಿ ದೇವಾಲಯದಲ್ಲಿ ದೇವಿಗೆ ವಿಸ್ಕಿಯನ್ನು ‘ನೈವೇದ್ಯ’ ಎಂದು ಹೇಳಿದರೆ ಅದನ್ನು ಧರ್ಮನಿಂದನೆ ಎಂದು ಕರೆಯುತ್ತಾರೆ ಎಂದು ಸಂಸದೆ ಮೊಯಿತ್ರಾ ಹೇಳಿದ್ದಾರೆ.
ಇದನ್ನೂ ಓದಿ: ಕಾಳಿ ದೇವತೆ ಸಿಗರೇಟ್ ಸೇದುತ್ತಿರುವ ಪೋಸ್ಟರ್: ನಿರ್ದೇಶಕಿಯ ವಿರುದ್ಧ ದಾಖಲಾಯ್ತು ದೂರು
ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವ ಇತ್ತೀಚಿನ ಚಲನಚಿತ್ರದ ಪೋಸ್ಟರ್‌ನ ವಿವಾದದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಈ ಬಗ್ಗೆ ಮಾತನಾಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆ ಸಿನಿಮಾದ ಪೋಸ್ಟರ್ ಮೂಲಕ ಹಿಂದೂ ದೇವತೆಗೆ ಅವಮಾನ ಮಾಡಲಾಗಿದೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹಲವರು ಹೇಳಿದ್ದರು.
ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿತ್ತು. ಕಾಳಿ ದೇವಿಯ ವೇಷಭೂಷಣವನ್ನು ಧರಿಸಿರುವ ಮಹಿಳೆಯನ್ನು ಪೋಸ್ಟರ್ನಲ್ಲಿ ನೋಡಬಹುದು. ಆ ಪೋಸ್ಟರ್ನಲ್ಲಿ ಕಾಳಿಯ ವೇಷ ಧರಿಸಿ ಆಕೆ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ಈ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಚಿತ್ರ ನಿರ್ಮಾಪಕರ ಬಂಧನಕ್ಕೆ ಒತ್ತಾಯಿಸಿದ್ದಾರೆ.
Published On - 3:22 pm, Tue, 5 July 22