ನಾಥೂರಾಂ ಗೋಡ್ಸೆಯನ್ನು ಹೊಗಳಿ ಜೈಲು ಸೇರಿದ್ದ ಕಾಳಿಚರಣ್ ಮಹಾರಾಜ್ಗೆ ಜಾಮೀನು; 3 ತಿಂಗಳ ನಂತರ ಬಿಡುಗಡೆ ಭಾಗ್ಯ
ಕಾಳಿ ಚರಣ್ ವಿರುದ್ಧ ಹಲವರು ದೂರು ನೀಡಿದ್ದರು. ಆದರೆ ಅವರನ್ನು ಬಂಧಿಸಿದ ರೀತಿಯನ್ನು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದರು. ಛತ್ತೀಸ್ಗಢ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಯ್ಪುರದಲ್ಲಿ ನಡೆದಿದ್ದ ಧರ್ಮ ಸಂಸದ್ನಲ್ಲಿ ಮಹಾತ್ಮಗಾಂಧಿಯನ್ನು ಅವಹೇಳನ ಮಾಡಿ, ನಾಥೂರಾಂ ಗೋಡ್ಸೆಯನ್ನು ಹೊಗಳಿ ಜೈಲು ಸೇರಿದ್ದ ಧರ್ಮಗುರು ಕಾಳಿಚರಣ್ ಮಹಾರಾಜ್ (Kalicharan) ರಿಗೆ ಬಿಲಾಸ್ಪುರ ಹೈಕೋರ್ಟ್ ಜಾಮೀನು ನೀಡಿದೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೂಡ ದ್ವೇಷ ಭಾಷಣ ಮಾಡಿದ್ದ ಕಾಳಿ ಚರಣ್ರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಬಳಿಕ ಪುಣೆಯ ನ್ಯಾಯಾಲಯವೊಂದು ಈ ಪ್ರಕರಣದಲ್ಲಿ ಜಾಮೀನು ನೀಡಿತ್ತು. ಆದರೆ ರಾಯ್ಪುರದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯವೊಂದು ಕಾಳಿ ಚರಣ್ರಿಗೆ ಬೇಲ್ ನೀಡಲು ನಿರಾಕರಿಸಿತ್ತು. ಹಾಗಾಗಿ ಕಳೆದ 3 ತಿಂಗಳುಗಳಿಂದಲೂ ಅವರು ಜೈಲಿನಲ್ಲಿಯೇ ಇದ್ದರು.
ರಾಯ್ಪುರ ಧರ್ಮ ಸಂಸದ್ನಲ್ಲಿ ಇವರು ಮಹಾತ್ಮ ಗಾಂಧಿ ಬಗ್ಗೆ ಅವಹೇಳನ ಮಾಡಿ, ದ್ವೇಷ ಭಾಷಣ ಮಾಡಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು. ಅದಾದ ಬಳಿಕ ಮಧ್ಯಪ್ರದೇಶದ ಖುಜರಾಹೋದಿಂದ 2021ರ ಡಿಸೆಂಬರ್ 30ರಂದು ರಾಯ್ಪುರ ಪೊಲೀಸರು ಬಂಧಿಸಿದ್ದರು. ಅಲ್ಪಸಂಖ್ಯಾತರು (ಇಸ್ಲಾಂ) ರಾಜಕೀಯದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪರಮಗುರಿ ಇದೇ ಆಗಿದೆ. ದೇಶದಲ್ಲಿ ಇಂಥದ್ದೊಂದು ಸನ್ನಿವೇಶ ಸೃಷ್ಟಿಸಿ, ದುರಂತಕ್ಕೆ ಕಾರಣವಾಗಿದ್ದು ಎಲ್ಲರೂ ಮಹಾತ್ಮ ಎಂದು ಹೇಳುವ ಮೋಹನದಾಸ್ ಕರಮಚಂದ್ ಗಾಂಧಿ. ಅವರನ್ನು ಕೊಂದ ನಾಥೂರಾಂ ಗೋಡ್ಸೆಗೆ ನಮನಗಳು ಎಂದು ಕಾಳಿಚರಣ್ ಹೇಳಿದ್ದು ವಿಡಿಯೊದಲ್ಲಿ ಕೇಳಿಸುತ್ತದೆ.
ಕಾಳಿ ಚರಣ್ ವಿರುದ್ಧ ಹಲವರು ದೂರು ನೀಡಿದ್ದರು. ಆದರೆ ಅವರನ್ನು ಬಂಧಿಸಿದ ರೀತಿಯನ್ನು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದರು. ಛತ್ತೀಸ್ಗಢ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಛತ್ತೀಸ್ಗಢ್ ಹೈಕೋರ್ಟ್ ಕಾಳಿಚರಣ್ರಿಗೆ ಷರತ್ತುಬದ್ಧ ಜಾಮೀನು ನೀಡಿದೆ. 1 ಲಕ್ಷ ರೂ.ಶ್ಯೂರಿಟಿ ಬಾಂಡ್ ಜತೆಗೆ 50 ಸಾವಿರ ರೂಪಾಯಿ ತುಂಬಬೇಕು ಎಂದು ಹೇಳಿದೆ. ವಿದೇಶಗಳಿಗೆ ಪ್ರಯಾಣ ಮಾಡುವಂತಿಲ್ಲ, ವಿಚಾರಣೆಗಾಗಿ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು ಎಂದೂ ಸೂಚಿಸಿದೆ.
ಇದನ್ನೂ ಓದಿ: ಸಾಲದ ಸುಳಿಯಲ್ಲಿ ಸಿಲುಕಿ ರೈತ ಕಂಗಾಲು: ಕೃಷಿ ಜಮೀನು ಹರಾಜ್ ಹಾಕಲು ಬ್ಯಾಂಕ್ ಮುಂದು; ಸಿಧನೂರು ರೈತರ ಗೋಳು ಕೇಳೊರ್ಯಾರು?