ಕಂಗನಾ-ಉದ್ಧವ್ ಠಾಕ್ರೆ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗಿದೆ!
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಒಂದೆರಡು ತಿಂಗಳುಗಳಿಂದ ಜಾರಿಯಲ್ಲಿರುವ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ನಟ ಸುಶಾಂತಸಿಂಗ್ ರಜಪೂತ ಅವರ ಅಕಾಲಿಕ ಮರಣ ಹಲವಾರು ವಿವಾದಗಳಿಗೆ ಎಡೆಮಾಡಿಕೊಟ್ಟಿದ್ದು ಅದರಲ್ಲಿ ಕಂಗನಾ–ಠಾಕ್ರೆ ನಡುವಿನ ಮಾತಿನ ಚಕಮಕಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಕಳೆದ ತಿಂಗಳು ಕಂಗನಾ, ತಮ್ಮ ಹುಟ್ಟೂರು ಮನಾಲಿಯಿಂದ ಮುಂಬೈಗೆ ಬಂದು ಠಾಕ್ರೆ ಮತ್ತು ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ ಒಂದು ವಿಡಿಯೊವನ್ನು ಬಿಡುಗಡೆ ಮಾಡಿ ಅದರಲ್ಲಿ ವೈಯಕ್ತಿಕವಾಗಿ […]
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಒಂದೆರಡು ತಿಂಗಳುಗಳಿಂದ ಜಾರಿಯಲ್ಲಿರುವ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ನಟ ಸುಶಾಂತಸಿಂಗ್ ರಜಪೂತ ಅವರ ಅಕಾಲಿಕ ಮರಣ ಹಲವಾರು ವಿವಾದಗಳಿಗೆ ಎಡೆಮಾಡಿಕೊಟ್ಟಿದ್ದು ಅದರಲ್ಲಿ ಕಂಗನಾ–ಠಾಕ್ರೆ ನಡುವಿನ ಮಾತಿನ ಚಕಮಕಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ.
ಕಳೆದ ತಿಂಗಳು ಕಂಗನಾ, ತಮ್ಮ ಹುಟ್ಟೂರು ಮನಾಲಿಯಿಂದ ಮುಂಬೈಗೆ ಬಂದು ಠಾಕ್ರೆ ಮತ್ತು ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ ಒಂದು ವಿಡಿಯೊವನ್ನು ಬಿಡುಗಡೆ ಮಾಡಿ ಅದರಲ್ಲಿ ವೈಯಕ್ತಿಕವಾಗಿ ಠಾಕ್ರೆಯವರನ್ನು ವಾಚಾಮಗೋಚರವಾಗಿ ಜರಿದಿದ್ದರು. ನಂತರ ಆಕೆ ಮನಿಲಾಗೆ ವಾಪಸ್ಸಾಗಿ ತಮ್ಮ ಕುಟುಂಬದೊಂದಿಗೆ ಮದುವೆ–ಹಬ್ಬ ಮುಂತಾದವುಗಳಲ್ಲಿ ವ್ಯಸ್ತರಾಗಿದ್ದಾರೆ.
ಆದರೆ, ರವಿವಾರದಂದು ವಿನಾಕಾರಣ ಕಂಗನಾ ಅವರನ್ನು ಕೆಣಕಿರುವ ಠಾಕ್ರೆ ಮತ್ತೊಂದು ಸುತ್ತಿನ ಕದನಕ್ಕೆ ನಾಂದಿ ಹಾಡಿದ್ದಾರೆ. ಮುಂಬೈಯಲ್ಲಿ ಸುದ್ದಿಗಾರರರೊಂದಿಗೆ ಮಾತಾಡಿದ ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಕಂಗನಾ ಅವರ ಹೆಸರನ್ನು ಉಲ್ಲೇಖಿಸದೆ, ಅನ್ನ ಅರಸಿಕೊಂಡು ಮುಂಬೈಗೆ ಬರುವ ಜನ, ನಂತರ ಇದೇ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುತ್ತಾರೆ ಎಂದಿದ್ದರು.
‘‘ಕೆಲವು ಜನ ಹೊಟ್ಟೆಪಾಡಿಗಾಗಿ, ಕೆಲಸ ಹುಡುಕಿಕೊಂಡು ಮುಂಬೈಗೆ ಬರುತ್ತಾರೆ. ಕೆಲಸ ಸಿಕ್ಕು ಹೊಟ್ಟೆ ತುಂಬಿದ ನಂತರ ಇದೇ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ್ಗೆ ಹೋಲಿಸುತ್ತಾರೆ. ಅಂಥವರನ್ನು ದ್ರೋಹಿಗಳನ್ನದೆ (ನಮಕ್ ಹರಾಮ್) ಮತ್ತೇನನ್ನಬೇಕು?. ಅವರು ಹಾಗೆ ಮಾಡಲು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವೈಫಲ್ಯವೇ ಕಾರಣ. ಅವರು ಅಧಿಕಾರಕ್ಕೆ ಬಂದಾಗ ಪಿಓಕೆಯನ್ನು ಭಾರತಕ್ಕೆ ಸೇರಿಸುತ್ತೇನೆ ಅಂತ ಘೋಷಿಸಿದ್ದರು. ಕೆಲವರು ಮಹಾರಾಷ್ಟ್ರದ ಅವಹೇಳನ ಮಾಡಲು ಯಾವ ಮಟ್ಟಕ್ಕಾದರೂ ಹೋಗುತ್ತಾರೆ; ಮುಂಬೈಯನ್ನು ಪಿಓಕೆ ಅನ್ನುತ್ತಾರೆ, ಇದನ್ನು ಡ್ರಗ್ ವ್ಯಸನಿಗಳ ತಾಣವೆಂದು ಬಣ್ಣಿಸುತ್ತಾರೆ. ನಾವು ಮನೆಗಳಲ್ಲಿ ತುಳಸಿ ಮರವನ್ನು ನೆಡುತ್ತೇವೆಯೇ ಹೊರತು ಗಾಂಜಾದ ಸಸಿಗಳನ್ನಲ್ಲ. ಗಾಂಜಾ ಅವರ ರಾಜ್ಯಗಳಲ್ಲಿ ಹೇರಳವಾಗಿ ಬೆಳೆಯುತ್ತಾರೆ,’’ ಅಂತ ಠಾಕ್ರೆ ಹೇಳಿದ್ದರು.
ಠಾಕ್ರೆಯವರ ಮಾತುಗಳಿಗೆ ಕೂಡಲೇ ಪ್ರತಿಕ್ರಿಯಿಸಿರುವ ಕಂಗನಾ ಉದ್ಧವ್ ಠಾಕ್ರೆಯವರನ್ನು ಸ್ವಜನ ಪಕ್ಷಪಾತದ ಅತಿಕೆಟ್ಟ ಸ್ವರೂಪ ಎಂದು ಹೇಳಿದ್ದಾರೆ.
‘‘ಶಿವಸೇನೆಯ ಸಂಜಯ ರಾವತ್ ನನ್ನನ್ನ್ನು ಹರಾಮ್ಖೋರ್ ಅಂತ ಕರೆದರು. ಈಗ ಉದ್ಧವ್ ಠಾಕ್ರೆ ನಮಕ್ ಹರಾಮ್ ಅನ್ನುತ್ತಿದ್ದಾರೆ. ಮುಂಬೈನಲ್ಲಿ ಆಶ್ರಯ ಸಿಗದೆ ಹೋದರೆ ನನ್ನ ರಾಜ್ಯದಲ್ಲಿ ನನಗೆ ಊಟ ಸಿಗಲಾರದು ಅಂತ ಠಾಕ್ರೆ ಹೇಳಿದ್ದಾರೆ. ತನ್ನ ಸ್ವಂತ ಬಲದಲ್ಲಿ, ಶ್ರಮಪಟ್ಟು ಈ ಮಟ್ಟಕ್ಕೆ ಬೆಳೆದಿರುವ ಅವರ ಮಗನ ವಯಸ್ಸಿನ ಒಬ್ಬ ಮಹಿಳೆಯ ಬಗ್ಗೆ ಹಾಗೆ ಮಾತಾಡಲು ಠಾಕ್ರೆಗೆ ನಾಚಿಕೆಯಾಗಬೇಕು. ಅವರು ಸ್ವಜನ ಪಕ್ಷಪಾತದ ಅತಿ ಕೆಟ್ಟ ಸ್ವರೂಪ,’’ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಕಂಗನಾ, ಠಾಕ್ರೆ ಅವರೇನು ಮುಂಬೈ ನಗರದ ಪಾಳೆಗಾರರೆ ಅಂತ ಕೇಳಿದ್ದಾರೆ.
‘‘ದೇಶವನ್ನು ಇಬ್ಭಾಗ ಮಾಡಲು ಪ್ರಯತ್ನಿಸುತ್ತಿರುವ ಈ ಕಾರ್ಯನಿರತ ಮುಖ್ಯಮಂತ್ರಿಯ ಧೈರ್ಯವನ್ನು ನೋಡಿ. ಅವರನ್ನು ಮಹಾರಾಷ್ಟ್ರದ ಪಾಳೆಗಾರ ಅಂತ ಯಾರಾದರೂ ನೇಮಕ ಮಾಡಿದ್ದಾರೆಯೆ? ಅವರೊಬ್ಬ ಯಕಶ್ವಿತ್ ಸಾರ್ವಜನಿಕ ಸೇವಕ. ಅವರಿಗಿಂತ ಮೊದಲು ಬೇರೆಯವರು ಆ ಸ್ಥಾನದಲ್ಲಿದ್ದರು ಮತ್ತು ಅವರ ನಂತರ ಇನ್ನೊಬ್ಬರು ಬರುತ್ತಾರೆ. ಮಹಾರಾಷ್ಟ್ರ ತನಗೆ ಮಾತ್ರ ಸೇರಿದ್ದು ಅಂತ ಅವರು ವರ್ತಿಸುವ ರೀತಿ ಆಶ್ಚರ್ಯ ಹುಟ್ಟಿಸುತ್ತದೆ,’’ ಎಂದು ಕಂಗನಾ ಟ್ವೀಟ್ನಲ್ಲಿ ಹೇಳಿದ್ದಾರೆ.