
ಚೆನ್ನೈ, ಸೆಪ್ಟೆಂಬರ್ 29: ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ (Tamil Nadu Stampede) ನಡೆದ ನಟ-ರಾಜಕಾರಣಿ ವಿಜಯ್ ನೇತೃತ್ವದ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಇಂದು (ಸೋಮವಾರ) ಸಾವನ್ನಪ್ಪಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಬೆಂಬಲದಲ್ಲಿದ್ದ ಕರೂರ್ ಜಿಲ್ಲೆಯ ನಿವಾಸಿ 65 ವರ್ಷದ ಸುಗುಣ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಮೃತರಾದ 41 ಜನರಲ್ಲಿ 18 ಮಹಿಳೆಯರು, 13 ಪುರುಷರು, 5 ಹುಡುಗಿಯರು ಮತ್ತು 5 ಹುಡುಗರು ಸೇರಿದ್ದಾರೆ. ಒಟ್ಟು ಸಾವುನೋವುಗಳಲ್ಲಿ 34 ಜನರು ಕರೂರ್ ಜಿಲ್ಲೆಯವರು, ತಲಾ ಇಬ್ಬರು ಈರೋಡ್, ತಿರುಪ್ಪೂರು ಮತ್ತು ದಿಂಡಿಗಲ್ ಜಿಲ್ಲೆಗಳವರು ಮತ್ತು ಓರ್ವ ಸೇಲಂನವರು. ಬಲಿಯಾದ ಕಿರಿಯ ವ್ಯಕ್ತಿ 2 ವರ್ಷದ ಬಾಲಕ.
ಇದನ್ನೂ ಓದಿ: Vijay Rally Stampede: ಕರೂರ್ ಕಾಲ್ತುಳಿತದ ಬೆನ್ನಲ್ಲೇ ನಟ ವಿಜಯ್‌ಗೆ ಬಾಂಬ್ ಬೆದರಿಕೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಸಿಎಂ ಸ್ಟಾಲಿನ್ ಅವರ ಬಳಿ ಕರೂರ್ ಕಾಲ್ತುಳಿತದ ಬಗ್ಗೆ ವಿಚಾರಿಸಿದ್ದಾರೆ. ಹಾಗೇ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಅವರಿಗೆ ಕೂಡ ರಾಹುಲ್ ಗಾಂಧಿ ಕರೆ ಮಾಡಿದ್ದಾರೆ.
“ನನ್ನ ಪ್ರೀತಿಯ ಸಹೋದರ ರಾಹುಲ್ ಗಾಂಧಿ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದ್ದಕ್ಕಾಗಿ, ಕರೂರ್‌ನಲ್ಲಿ ನಡೆದ ದುರಂತ ಘಟನೆಯ ಬಗ್ಗೆ ನಿಮ್ಮ ಹೃತ್ಪೂರ್ವಕ ಕಳವಳವನ್ನು ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ಚಿಕಿತ್ಸೆಯಲ್ಲಿರುವವರ ಅಮೂಲ್ಯ ಜೀವಗಳನ್ನು ಉಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಾಮಾಣಿಕವಾಗಿ ವಿಚಾರಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಶನಿವಾರ ಸಂಜೆ 7.30 ರ ಸುಮಾರಿಗೆ ವಿಜಯ್ ಚೆನ್ನೈನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಕರೂರಿನ ಸ್ಥಳದಲ್ಲಿ ಮಧ್ಯಾಹ್ನದಿಂದ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಮಾತನಾಡುತ್ತಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟ 39 ಜನರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ದುರಂತ ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50,000 ರೂ.ಗಳನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತದಿಂದ ಮೃತಪಟ್ಟ ಪುಟ್ಟ ಕಂದನನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿಬಂದ ಅಪ್ಪ; ಹೃದಯ ವಿದ್ರಾವಕ ವಿಡಿಯೋ ಇಲ್ಲಿದೆ
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಮತ್ತು ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ತಲಾ 1 ಲಕ್ಷ ರೂ.ಗಳ ಪರಿಹಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಘೋಷಿಸಿದರು.
ಮೃತರ ಕುಟುಂಬಗಳಿಗೆ ತಮಿಳುನಾಡು ಕಾಂಗ್ರೆಸ್ ಸಮಿತಿ 1 ಕೋಟಿ ರೂಪಾಯಿ ಮತ್ತು ಮೃತರ ಕುಟುಂಬಕ್ಕೆ ಬಿಜೆಪಿ ತಲಾ 1 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ