ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಿಂಕ್ ಪವರ್ ರನ್; ಲಿಯಾಂಡರ್ ಪೇಸ್, ಜೂಲಿಯಾ ಮಾರ್ಲೀ, ಸುಧಾರೆಡ್ಡಿಯಿಂದ ಚಾಲನೆ
Pink Power Run 2.0: ತೆಲಂಗಾಣ ರಾಜಧಾನಿಯ ನೆಕ್ಲೇಸ್ ರೋಡ್ನಲ್ಲಿ ಭಾನುವಾರ ಪಿಂಕ್ ಪವರ್ ರನ್ 2.0 ಓಟ ಆಯೋಜಿತವಾಗಿತ್ತು. ಸ್ತನ ಕ್ಯಾನ್ಸರ್ ವಿರುದ್ಧ ಜನಜಾಗೃತಿ ಮೂಡಿಸಲು ಸುಧಾರೆಡ್ಡಿ ಫೌಂಡೇಶನ್ ಈ ಪಿಂಕ್ ಪವರ್ ರನ್ ಅನ್ನು ಆಯೋಜಿಸಿತ್ತು. ಸುಧಾ ರೆಡ್ಡಿ, ಲಿಯಾಂಡರ್ ಪೇಸ್, ಮಿಸ್ ವರ್ಲ್ಡ್ ಆರ್ಗನೈಸೇಶನ್ನ ಮಾರ್ಲೀ, ಉದ್ಯಮಿ ಕೃಷ್ಣ ರೆಡ್ಡಿ ಅವರು ಈ ಮ್ಯಾರಥಾನ್ಗೆ ಚಾಲನೆ ನೀಡಿದರು.

ಹೈದರಾಬಾದ್, ಸೆಪ್ಟೆಂಬರ್ 28: ಸುಧಾರೆಡ್ಡಿ ಫೌಂಡೇಶನ್ (Sudha Reddy Foundation) ವತಿಯಿಂದ ಎರಡನೇ ಆವೃತ್ತಿಯ ಪಿಂಕ್ ಪವರ್ ರನ್ 2025 (Pink Power Run 2.0) ಮ್ಯಾರಥಾನ್ ಓಟ ನಡೆಯಿತು. ಹೈದರಾಬಾದ್ನ ನೆಕ್ಲೇಸ್ ರೋಡ್ನಲ್ಲಿ 20,000 ಮಂದಿ ಪಾಲ್ಗೊಂಡಿದ್ದ ಈ ಓಟವನ್ನು ಬ್ರೆಸ್ಟ್ ಕ್ಯಾನ್ಸರ್ ಜಾಗೃತಿಗಾಗಿ ನಡೆಸಲಾಗಿತ್ತು. ಖ್ಯಾತ ಸಮಾಜಸೇವಕಿ ಸುಧಾರೆಡ್ಡಿ, ಮೇಘ ಎಂಜಿನಿಯರಿಂಗ್ ಸಂಸ್ಥೆಯ (ಎಂಇಐಎಲ್) ಎಂಡಿ ಕೃಷ್ಣ ರೆಡ್ಡಿ, ಮಿಸ್ ವರ್ಲ್ಡ್ ಆರ್ಗನೈಸೇಶನ್ ಮುಖ್ಯಸ್ಥೆ ಜೂಲಿಯಾ ಮಾರ್ಲೀ, ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರು ಭಾನುವಾರ ಬೆಳಗ್ಗೆ ಈ ಜಾಗೃತಿ ಓಟಕ್ಕೆ ಚಾಲನೆ ಕೊಟ್ಟರು.
ಸ್ತನ ಕ್ಯಾನ್ಸರ್ ಅನ್ನು ಬೇಗ ಪತ್ತೆ ಮಾಡಿದರೆ ಗುಣಪಡಿಸಲು ಸಾಧ್ಯ ಎಂಬ ವಿಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವತಃ ಕ್ಯಾನ್ಸರ್ ಬಾಧಿತವಾದ ಹಾಲಿ ಮಿಸ್ ವರ್ಲ್ಡ್ ಕೂಡ ಆಗಿರುವ ಓಪಾಲ್ ಸುಚಾತಾ ಚುವಾಂಗಸ್ರಿ ಹಾಗೂ ವಿವಿಧ ಪ್ರದೇಶಗಳ ವಿಶ್ವ ಸುಂದರಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿಶ್ವ ಸುಂದರಿ ಜೊತೆಗೆ, ಮಿಸ್ ವರ್ಲ್ಡ್ ಕೆರಿಬಿಯನ್, ಮಿಸ್ ನಮೀಬಿಯಾ, ಮಿಸ್ ವರ್ಲ್ಡ್ ಓಷಾನಿಯಾ, ಮಿಸ್ ವರ್ಲ್ಡ್ ಅಮೇರಿಕಾಸ್, ಮಿಸ್ ವರ್ಲ್ಡ್ ಯೂರೋಪ್, ಮಿಸ್ ವರ್ಲ್ಡ್ ಏಷ್ಯಾ ಅವರೂ ಇದ್ದರು. ಮಿಸ್ ಇಂಡಿಯಾ ವರ್ಲ್ಡ್ ನಂದಿನಿ ಗುಪ್ತ ಮತ್ತ ನಿಕಿತಾ ಪೊರವಾಲ್ ಕೂಡ ಭಾಗವಹಿಸಿದ್ದರು.
ಇದನ್ನೂ ಓದಿ: ಶಂಕರ್ ಮಹದೇವನ್ ಹಾಡಿದ ದೇಶಭಕ್ತಿ ಗೀತೆಗಳ ಆಲ್ಬಂ ‘ಸಂಘ್ ಗೀತ್’ ಲೋಕಾರ್ಪಣೆ
ಈ ಪಿಂಕ್ ರನ್ 2.0 ಮ್ಯಾರಥಾನ್ನಲ್ಲಿ 10 ಕಿಮೀ, 5 ಕಿಮೀ ಹಾಗೂ 3 ಕಿಮೀ ರೇಸ್ಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ರೇಸ್ಗಳಲ್ಲೂ ಸಾಕಷ್ಟು ಜನರು ಭಾಗವಹಿಸಿದ್ದರು. 10 ಕಿಮೀ ರೇಸ್ನಲ್ಲಿ ಪುರುಷರ ವಿಭಾಗದಲ್ಲಿ ಅಂಕಿತ್ ಗುಪ್ತಾ ಮೊದಲ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಸೀಮಾ ಗೆದ್ದರು.

ಪಿಂಕ್ ಪವರ್ ರನ್ನಲ್ಲಿ ಸುಧಾ ರೆಡ್ಡಿ ಮತ್ತಿತರರು
2026ರಲ್ಲಿ 140 ದೇಶಗಳಲ್ಲಿ ಪಿಂಕ್ ಪವರ್ ರನ್
ಪಿಂಕ್ ಪವರ್ ರನ್ನ ಎರಡನೇ ಆವೃತ್ತಿಗೆ ಸಿಕ್ಕ ಭರ್ಜರಿ ಸ್ಪಂದನೆಯು ಈಗ ಜಾಗತಿಕ ಮಟ್ಟದಲ್ಲಿ ಇದನ್ನು ಆಯೋಜಿಸಲು ಸುಧಾ ರೆಡ್ಡಿ ಫೌಂಡೇಶನ್ ನಿರ್ಧರಿಸಿದೆ. 2026ರಲ್ಲಿ ಜಾಗತಿಕ ಮಟ್ಟದ ಪಿಂಕ್ ಪವರ್ ರನ್ ನಡೆಸಲಾಗಲಿದೆ. ವಿಶ್ವಾದ್ಯಂತ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಈ ವೇದಿಕೆಯನ್ನು ಬಳಸಿಕೊಳ್ಳಲು ಫೌಂಡೇಶನ್ ಮುಂದಾಗಿದೆ.
ಇದನ್ನೂ ಓದಿ: 11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಅಕ್ಸೆಂಚರ್; ಸಿಇಒ ಜೂಲೀ ಸ್ವೀಟ್ ಬಿಚ್ಚಿಟ್ಟ ಕಾರಣ ಇದು
ಮಿಸ್ ವರ್ಲ್ಡ್ ಆರ್ಗನೈಸೇಶನ್ನಿಂದ ಏಳು ಖಂಡಗಳ ಬ್ಯೂಟಿ ಕ್ವೀನ್ಗಳು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಜಾಗತಿಕ ರಾಯಭಾರಿಯಾಗಿ ನೆರವಾಗಲಿದ್ದಾರೆ. 2026ರಲ್ಲಿ ಈ ಮೆಗಾ ಇವೆಂಟ್ನಲ್ಲಿ ಓಟದ ಸ್ಪರ್ಧಿಗಳು ಬ್ಯಾಟಾನ್ ಅನ್ನು ಒಂದು ಖಂಡದಿಂದ ಮತ್ತೊಂದು ಖಂಡದಲ್ಲಿರುವವರಿಗೆ ಹಸ್ತಾಂತರಿಸುತ್ತಾರೆ. ಈ ರೀತಿ ಏಳು ಖಂಡಗಳಲ್ಲೂ ಈ ಜಾಗೃತಿ ಓಟ ಮುಂದುವರಿದುಕೊಂಡು ಹೋಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




