ಜೈಪುರ: ಬರೋಬ್ಬರಿ 2,150 ಗ್ರಾಂನಷ್ಟು ಮಾದಕ ದ್ರವ್ಯ ಹೊಂದಿದ್ದ ಕೀನ್ಯಾ ಪ್ರಜೆ ಒಬ್ಬಾಕೆಯನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡೆದುಕೊಂಡಿದ್ದಾರೆ. 2,150 ಗ್ರಾಂ ಹೆರಾಯಿನ್ ಹೊಂದಿದ್ದ ಕೀನ್ಯಾ ಪ್ರಜೆ ಮಹಿಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಹೆರಾಯಿನ್ ಸುಮಾರು 14.65 ಕೋಟಿ ಬೆಲೆಬಾಳುತ್ತದೆ ಎಂದು ಹೇಳಲಾಗಿದೆ.
ವಿಮಾನ ನಿಲ್ದಾಣದ ಪತ್ರಿಕಾ ಪ್ರಕಟಣೆಯಂತೆ 33 ವರ್ಷದ ಮಹಿಳೆ ಶಾರ್ಜಾದಿಂದ ಏರ್ ಅರೇಬಿಯಾ ವಿಮಾನದಲ್ಲಿ ಬಂದು ಇಳಿದಿದ್ದಾರೆ. ಆ ವೇಳೆ ಅವರನ್ನು ವಿಚಾರಿಸಲಾಗಿದೆ. ಆಕೆಯ ಮೊಬೈಲ್ ಸಂಖ್ಯೆ ಹಾಗೂ ಈ ಮೊದಲು ನವೆಂಬರ್ 13 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ 90 ಕೋಟಿ ಬೆಲೆ ಬಾಳುವ 12.9 ಕಿಲೋ ಗ್ರಾಂ ಮಾದಕ ದ್ರವ್ಯ ಜಪ್ತಿ ಆದಾಗ ಸಿಕ್ಕಿದ ಉಗಾಂಡ ಮಹಿಳೆಯರ ಮೊಬೈಲ್ ಸಂಖ್ಯೆ ಒಂದೇ ಆಗಿರುವುದು ತಿಳಿದುಬಂದಿದೆ.
ಹೀಗಾಗಿ ಸಂಶಯಾಸ್ಪದವಾಗಿ ಕಂಡ ಅವರ ಲಗೇಜ್ಗಳನ್ನು ಸೂಕ್ಷ್ಮವಾಗಿ ತನಿಖೆ ಮಾಡಲಾಗಿದೆ. ಮಾದಕ ದ್ರವ್ಯ, ನಾರ್ಕೊಟಿಕ್ಸ್ಗಳ ಸ್ಮಗ್ಲಿಂಗ್ ಜಾಲದ ಶಂಕೆ ವ್ಯಕ್ತವಾಗಿದೆ. ಹೀಗಾಗಿ ದೈಹಿಕವಾಗಿ ಮತ್ತು ಎಕ್ಸ್ ರೇ ಮೂಲಕ ತನಿಖೆ ನಡೆಸಲಾಗಿದೆ.
ಮಹಿಳೆ ಮೊದಲು ಅನುಮಾನಾಸ್ಪದವಾಗಿ ಕಾಣದೆ, ಸಹಜ ನಡವಳಿಕೆ ತೋರಿದ್ದಾಳೆ. ಹೀಗಾಗಿ ಹೆಚ್ಚಿನ ತನಿಖೆಗೆ ಆಕೆಯನ್ನು ಹಾಗೂ ಲಗೇಜ್ಗಳನ್ನು ಒಳಪಡಿಸಲಾಗಿದೆ. ಆಗ ಸೂಟ್ಕೇಸ್ ಅಸಹಜ ತೂಕ ಹೊಂದಿರುವುದು ಕಂಡುಬಂದಿದೆ. ಮತ್ತು ಸೂಟ್ಕೇಸ್ನ ತಳ ಹಾಗೂ ಮೇಲಿನ ಭಾಗ ಹೆಚ್ಚುವರಿಯಾಗಿ ಇರುವಂತೆ ಕಂಡುಬಂದಿದೆ. ಅದನ್ನು ಕತ್ತರಿಸಿ ನೋಡಿದಾಗ ಎರಡೂ ಕಡೆಗಳಲ್ಲಿ ಎನ್ವೆಲಪ್ನಲ್ಲಿ ಬಿಳಿ ಬಣ್ಣದ ವಸ್ತು ಇರುವುದು ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಅದು ಹೆರಾಯಿನ್ ಎಂಬುದು ಬಯಲಾಗಿದೆ. ಹೆಚ್ಚಿನ ಪರೀಕ್ಷೆ ಹಾಗೂ ತನಿಖೆಗೆ ವಸ್ತುವನ್ನು ಕೆಮಿಕಲ್ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸದಂತೆ ಪೊಲೀಸ್ ಇಲಾಖೆಯ ಹದ್ದಿನ ಕಣ್ಣು