ಪಾಲಕ್ಕಾಡ್ : ಕೇರಳ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಚುನಾವಣೆಯ ನಂತರ ಬಿಜೆಪಿ ಕಿಂಗ್ ಮೇಕರ್ ಆಗಲಿದೆ ಎಂದು ಬಿಜೆಪಿ ಅಭ್ಯರ್ಥಿ, ಮೆಟ್ರೊಮ್ಯಾನ್ ಇ.ಶ್ರೀಧರನ್ ಹೇಳಿದ್ದಾರೆ. ಬುಧವಾರ ಪಾಲಕ್ಕಾಡ್ ಜಿಲ್ಲೆಯ ಮಲಂಬುಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಚುನಾವಣಾ ಪ್ರಚಾರ ನಡೆಸಿದ ಶ್ರೀಧರನ್, ಈ ಬಾರಿ ಕೇರಳದಲ್ಲಿ ಬಿಜೆಪಿ ಹೆಚ್ಚು ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಹುಮತದಿಂದ ಗೆಲ್ಲಬಹುದು ಇಲ್ಲವೇ ಹೆಚ್ಚಿನ ಸೀಟುಗಳನ್ನು ಗೆದ್ದು ಕಿಂಗ್ ಮೇಕರ್ ಆಗಬಹುದು ಎಂದಿದ್ದಾರೆ.
ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಇ.ಶ್ರೀಧರನ್ ಚುನಾವಣಾ ಕಣಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಕೈಗಾರಿಕೋದ್ಯಮಗಳು ಕಡಿಮೆ ಇವೆ. ಕೈಗಾರಿಕೆಗಳಿಂದಲೇ ರಾಜ್ಯಕ್ಕೆ ಹೆಚ್ಚಿನ ಆದಾಯ ಬರುವುದು. ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿ ಇದ್ದು, ಉದ್ಯೋಗ ಸೃಷ್ಟಿ ಅನಿವಾರ್ಯವಾಗಿದೆ. ಶಿಕ್ಷಣ ವಲಯಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದ್ದು ಪಾರದರ್ಶಕ, ಸಮರ್ಥ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ತರಲು ನಾವು ಪ್ರಯತ್ನಿಸುತ್ತಿದ್ದೇವೆ. ನಾನು ಇಲ್ಲಿನ ಶಿಕ್ಷಣದ ಮಟ್ಟವನ್ನು ಉತ್ತಮ ಪಡಿಸಲು ಬಯಸುತ್ತೇನೆ ಎಂದಿದ್ದಾರೆ ಶ್ರೀಧರನ್.
ನಿವೃತ್ತ ಎಂಜಿನಿಯರ್, ದೆಹಲಿ ಮೆಟ್ರೊ ಯೋಜನೆಯ ರೂವಾರಿ ಇ.ಶ್ರೀಧರನ್ ಫೆಬ್ರವರಿಯಲ್ಲಿ ಬಿಜೆಪಿ ಸೇರಿದ್ದರು. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಐ (ಎಂ) ನೇತೃತ್ವದ ಎಲ್ ಡಿಎಫ್ , ಬಿಜೆಪಿ ನೇತೃತ್ವದ ಎನ್ ಡಿಎ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಸುಮಾರು 4 ದಶಕಗಳಿಂದ ಕೇರಳದಲ್ಲಿ ಯುಡಿಎಫ್ ಮತ್ತು ಎಲ್ ಡಿಎಫ್ ಸರ್ಕಾರಗಳು ಅಧಿಕಾರ ನಡೆಸುತ್ತಲೇ ಬಂದಿವೆ.
ಕೇರಳದಲ್ಲಿರುವ ಏಕೈಕ ಬಿಜೆಪಿ ಶಾಸಕರಾಗಿದ್ದಾರೆ ಒ.ರಾಜಗೋಪಾಲ್. ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಎಲ್ ಡಿಫ್ ಮತ್ತು ಯುಡಿಎಫ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸುತ್ತಿರುವ ಬಿಜೆಪಿ, ಕೇರಳದಲ್ಲಿ ಕಮಲ ಅರಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ.
ಜೂನ್ 1ರಂದು ಕೇರಳದ ವಿಧಾನಸಭೆಯ ಅವಧಿ ಮುಗಿಯಲಿದೆ. 140 ಸ್ಥಾನಗಳಿರುವ ಕೇರಳ ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. 2,67,88,268 ಒಟ್ಟು ಮತದಾರರು ಇಲ್ಲಿದ್ದಾರೆ.
Honourable Home Minister Shri @AmitShah lead the roadshow today at Malamphuza. It was overwhelming to see the massive support. #KeralaVotesBJP pic.twitter.com/bR6kb3A5oN
— Metroman E Sreedharan (@TheMetromanS) March 24, 2021
ಕೇರಳದಲ್ಲಿ ಮತ್ತೆ ಎಲ್ ಡಿಎಫ್ ಎಂದ ಟೈಮ್ಸ್ ನೌ – ಸಿ ವೋಟರ್ ಸಮೀಕ್ಷೆ
ಟೈಮ್ಸ್ ನೌ ಮತ್ತು ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಎಲ್ ಡಿಎಫ್ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ ಡಿಎಫ್ 140 ಸೀಟುಗಳ ಪೈಕಿ 77 ಸೀಟುಗಳನ್ನು ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 62 ಸೀಟುಗಳನ್ನು ಗಳಿಸಲಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ ಸೀಟುಗಳಿಗಿಂತ ಎಲ್ ಡಿಎಫ್ ಗೆ ಕಡಿಮೆ ಸೀಟುಗಳು ಲಭಿಸಲಿದ್ದು, ಯುಡಿಎಫ್ ಗೆ ಸೀಟುಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಎಲ್ಡಿಎಫ್ಗೆ ಗೆಲುವು – ಮಾತೃಭೂಮಿ ಸಿ-ವೋಟರ್ ಸಮೀಕ್ಷೆ
ಮಾತೃಭೂಮಿ- ಸಿ ವೋಟರ್ ಸಮೀಕ್ಷೆ ಪ್ರಕಾರ ಎಲ್ಡಿಎಫ್ 75ರಿಂದ 83 ಸೀಟುಗಳನ್ನು ಗಳಿಸಲಿದೆ. ಯುಡಿಎಫ್ 56-64 ಸೀಟುಗಳನ್ನು ಮತ್ತು ಎನ್ ಡಿಎ 0-2 ಸೀಟುಗಳನ್ನು ಗಳಿಸಲಿದೆ. ಎಲ್ಡಿಎಫ್ಗೆ ಶೇಕಡಾ40.9 ಮತಗಳು ಸಿಗುವ ನಿರೀಕ್ಷೆ ಇದ್ದು ಯುಡಿಎಫ್ ಶೇಕಡಾ 37.9, ಎನ್ ಡಿಎ ಶೇಕಡಾ 16.6 ಮತಗಳನ್ನು ಗಳಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್
Published On - 12:34 pm, Thu, 25 March 21