Kerala Assembly Elections: ಬಿಜೆಪಿ ಸೇರಿದ ‘ಮೆಟ್ರೊಮ್ಯಾನ್’ ಇ.ಶ್ರೀಧರನ್
E Sreedharan Joins BJP: ನನ್ನ ಜೀವನದಲ್ಲಿನ ಮಹತ್ವದ ಕ್ಷಣ ಅದಾಗಿತ್ತು. ಬದುಕಿನ ಹೊಸ ಅಧ್ಯಾಯವೊಂದು ಆರಂಭವಾಗಲಿದೆ. 67 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ನಂತರ ಕೇರಳಕ್ಕೆ ಯಾವುದಾದರೂ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಶಯದಿಂದ ಬಿಜೆಪಿ ಸೇರಿದ್ದೇನೆ ಎಂದ ಶ್ರೀಧರನ್.
ಮಲಪ್ಪುರಂ (ಕೇರಳ): ಭಾರತದ ಮೆಟ್ರೊಮ್ಯಾನ್ ಇ.ಶ್ರೀಧರನ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಬಿಜೆಪಿಯ ಕೇರಳ ವಿಜಯಯಾತ್ರೆ ಸಮಾರೋಪ ಸಮಾರಂಭದಲ್ಲಿ 88ರ ಹರೆಯದ ಶ್ರೀಧರನ್ ಬಿಜೆಪಿಗೆ ಸೇರಿದ್ದಾರೆ. ಕಳೆದ ವಾರ ಕೇರಳ ಬಿಜೆಪಿ ಘಟಕವು ಶ್ರೀಧರನ್ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಿತ್ತು. ವಿಜಯ ಯಾತ್ರೆ ಮಲಪ್ಪುರಂಗೆ ತಲುಪಿದ್ದು, ಶ್ರೀಧರನ್ ತಮ್ಮ ಊರಿನಲ್ಲಿಯೇ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕು ಎಂದು ನಮ್ಮ ಆಸೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ.
ನಾನು ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ, ಇನ್ನು ಔಪಚಾರಿಕ ಪ್ರಕ್ರಿಯೆಗಳು ಬಾಕಿ ಇದೆ. ನಿವೃತ್ತಿ ಹೊಂದಿದ ನಂತರ ಕಳೆದ 10 ವರ್ಷಗಳಿಂದ ನಾನು ಕೇರಳದಲ್ಲಿ ವಾಸಿಸುತ್ತಿದ್ದೇನೆ. ನಾನು ವಿವಿಧ ಸರ್ಕಾರಗಳನ್ನು ನೋಡಿದ್ದು, ಅವರು ಯಾರೂ ಜನರಿಗಾಗಿ ಕೆಲಸ ಮಾಡಿಲ್ಲ. ನನ್ನ ಅನುಭವಗಳನ್ನು ಬಳಸಿ ನನ್ನ ಕಡೆಯಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡುವುದಕ್ಕಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಶ್ರೀಧರನ್ ಹೇಳಿದ್ದರು.
ನನ್ನ ಜೀವನದಲ್ಲಿನ ಮಹತ್ವದ ಕ್ಷಣ ಅದಾಗಿತ್ತು. ಬದುಕಿನ ಹೊಸ ಅಧ್ಯಾಯವೊಂದು ಆರಂಭವಾಗಲಿದೆ. 67 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ನಂತರ ಕೇರಳಕ್ಕೆ ಯಾವುದಾದರೂ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಶಯದಿಂದ ಬಿಜೆಪಿ ಸೇರಿದ್ದೇನೆ. ಕಳೆದ ಹಲವು ವರ್ಷ ಸರ್ಕಾರ ವಿವಿಧ ಹುದ್ದೆಗಳನ್ನು ವಹಿಸಿದ್ದೇನೆ. ಪಾಲಾರಿವಟ್ಟಂ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಮಾಡಲು 18 ತಿಂಗಳುಗಳು ಸಾಕಾಾಗಿತ್ತು. ಆದರೆ ಆ ಕಾರ್ಯವನ್ನು ಪೂರ್ಣಗೊಳಿಸಲು ಐದೂವರೆ ತಿಂಗಳುಗಳೇ ಬೇಕಾಗಿ ಬಂತು. ಮುಂದಿನ ವಾರ ಹೊಸ ಸೇತುವೆಯಲ್ಲಿ ವಾಹನಗಳು ಓಡಾಡಲಿವೆ. ದೇಶ ಸೇವೆ ಬಿಜೆಪಿಯಿಂದಲೇ ಸಾಧ್ಯ ಎಂದು ಅರಿತಿರುವುದರಿಂದಲೇ ನಾನು ಈ ಪಕ್ಷದ ಅಂಗವಾಗಿದ್ದು ಎಂದು ಎಂದು ಬಿಜೆಪಿ ಸೇರಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶ್ರೀಧರನ್ ಹೇಳಿದ್ದಾರೆ.
Metro man Sri E Sreedharan joins @BJP4India at Mallapuram in the presence of Union Minister Sri @RajKSinghIndia during #KeralaVijayaYatra led by @surendranbjp pic.twitter.com/9dZUATwXFG
— B L Santhosh (@blsanthosh) February 25, 2021
ಬಿಜೆಪಿಗೆ ಸೇರುವುದಾಗಿ ನಿರ್ಧಾರ ಪ್ರಕಟಿಸಿದ ಹೊತ್ತಲ್ಲಿ ರಾಜ್ಯ ರಾಜಕೀಯ ಮತ್ತು ದೇಶದ ರಾಜಕೀಯದ ಬಗ್ಗೆ ಎನ್ಡಿಟಿವಿ ಜತೆ ಮಾತನಾಡಿದ್ದ ಶ್ರೀಧರನ್, ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ರಾಜಕೀಯ ಪಕ್ಷಗಳು ಭಾರತವನ್ನು ಕೆಟ್ಟದಾಗಿ ಬಿಂಬಿಸುತ್ತಿವೆ. ವಿರೋಧ ವ್ಯಕ್ತಪಡಿಸಲೇ ಬೇಕು ಎಂದು ಪಟ್ಟು ಹಿಡಿದು ಎಲ್ಲವನ್ನೂ ವಿರೋಧಿಸುತ್ತಿವೆ. ಕಾಂಗ್ರೆಸ್ನಂಥಾ ಪಕ್ಷಗಳು ಭಾರತವನ್ನು ಕೆಟ್ಟದಾಗಿ ತೋರಿಸುತ್ತಿವೆ ಎಂದಿದ್ದರು.
ಶಬರಿ ಮಲೆಗೆ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡಿರುವ ಸುಪ್ರೀಂಕೋರ್ಟ್ ನಿರ್ದೇಶನ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ನಿರ್ಧಾರವನ್ನು ಬಿಜೆಪಿ ವಿರೋಧಿಸಿತ್ತು. ಈ ಹಿಂದೆ ಇದ್ದಂತೆ 10 ವರ್ಷಕ್ಕಿಂತ ಕೆಳಗಿನ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ಶಬರಿಮಲೆಗೆ ಹೋಗಬೇಕು ಎಂಬ ನಿಲುವು ಬಿಜೆಪಿಯದ್ದು. ಇದಕ್ಕಾಗಿ ಬಿಜೆಪಿ, ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ನಡೆದಿತ್ತು. ಅದೇ ವೇಳೆ ಹಿಂದೂ ಮತ್ತು ಮುಸ್ಲಿಂ ವಿವಾಹ ‘ಲವ್ ಜಿಹಾದ್’ ಎಂದು ಆರೋಪಿಸುತ್ತಿರುವ ಬಿಜೆಪಿ ನಿಲುವಿನ ಬಗ್ಗೆ ಶ್ರೀಧರನ್ ಅವರಲ್ಲಿ ಕೇಳಿದಾಗ, ಬಿಜೆಪಿ ನಿಲುವು ಸರಿ. ನಾನು ಬಿಜೆಪಿ ಸೇರುವುದಕ್ಕೆ ಇದೇ ಕಾರಣ. ಪಕ್ಷ ಬಯಸಿದರೆ ನಾನು ಚುನಾವಣೆ ಸ್ಪರ್ಧಿಸುತ್ತೇನೆ ಎಂದಿದ್ದರು.
ಇದನ್ನೂ ಓದಿ: Assembly Elections Date 2021: ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
Published On - 6:40 pm, Fri, 26 February 21