Kerala boat tragedy: ಬೋಟ್ನ ಗಾಜು ಕೈಯಿಂದಲೇ ಒಡೆದು 7 ಜನರನ್ನು ರಕ್ಷಿಸಿದ ರಶೀದ್, ತಾನೂರಿನ ಸ್ಥಳೀಯರೇ ರಿಯಲ್ ಹೀರೋಗಳು
ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಸೈತಲವಿಗೆ ಕಂಡಿದ್ದು ತನ್ನ ಮಗಳ ಮೃತದೇಹವನ್ನು ದಡಕ್ಕೆ ತರುತ್ತಿರುವ ದೃಶ್ಯ. ಪತ್ನಿ, ಇತರೆ ಮಕ್ಕಳು ಹಾಗೂ ಸಂಬಂಧಿಕರೊಂದಿಗೆ 11 ಮಂದಿಯ ಮೃತದೇಹ ಅವರ ಕಣ್ಣಮುಂದೆಯೇ ಇತ್ತು. ಅದರಲ್ಲಿ ಒಂದೂವರೆ ವರ್ಷದ ಮಗು!
ತಾನೂರು: ಕೇರಳದ (Kerala) ಮಲಪ್ಪುರಂ (Malappuram) ಜಿಲ್ಲೆಯ ತಾನೂರಿನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ (Tanur boat accident) 22 ಮಂದಿ ಸಾವಿಗೀಡಾಗಿದ್ದಾರೆ. ಪ್ರವಾಸಿಗಳ ದೋಣಿ ಯಾತ್ರೆಗಾಗಿ ಇದ್ದ ಅಂಟ್ಲಾಟಿಕ್ ಎಂಬ ಬೋಟ್ ಭಾನುವಾರ ರಾತ್ರಿ ನದಿಯಲ್ಲಿ ಮುಳುಗಿದ್ದು, ಬೋಟ್ ಮಾಲೀಕ ನಾಸರ್ ಅವರನ್ನು ಸೋಮವಾರ ಬಂಧಿಸಲಾಗಿದೆ. ಬೋಟ್ ದುರಂತದ ವೇಳೆ ಜನರನ್ನು ಕಾಪಾಡಿದ್ದು, ಆ ಊರಿನ ಜನರು. ದೋಣಿ ಮುಳುಗುತ್ತಿದ್ದದ್ದನ್ನು ಕಂಡು ಸ್ಥಳೀಯ ಮೀನುಗಾರರು ನದಿಗೆ ಹಾರಿ ಜನರನ್ನು ರಕ್ಷಿಸಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ವ್ಯಕ್ತಿಗಳು ತಮ್ಮ ಅನುಭವಗಳನ್ನು ಮಾತೃಭೂಮಿ ಪತ್ರಿಕೆ ಜತೆ ಹಂಚಿಕೊಂಡಿದ್ದಾರೆ. ಅವರ ಅನುಭವದ ಮಾತುಗಳು ಇಲ್ಲಿವೆ.
ಪೂರಪ್ಪುಳದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಪ್ರಜೀಶ್ ದೋಣಿಯ ಕೊನೆಯ ಪ್ರಯಾಣಕ್ಕಾಗಿ ಸದಾ ಕಾಯುತ್ತಿರುತ್ತಾನೆ. ದೋಣಿ ದಡವನ್ನು ತಲುಪಿದಾಗ ಮಾತ್ರ ಅವನು ಬೀಸಿರುವ ಬಲೆಯನ್ನು ತೆಗೆದುಕೊಳ್ಳಬಹುದು. ಅಲ್ಲಿ ಪ್ರವಾಸಿಗರ ದೋಣಿಯ ಕೊನೆಯ ಪ್ರಯಾಣದ ನಂತರ ಪ್ರಜೀಶ್ ನೆಟ್ ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಭಾನುವಾರ ಸಂಜೆ ಪ್ರಜೀಶ್ ಮತ್ತು ಇಬ್ಬರು ಸ್ನೇಹಿತರು ಮನೆ ಸಮೀಪ ಕುಳಿತಿದ್ದರು. ಆಗ ಅಲ್ಲಿ ಬೋಟ್ ವಾಲುತ್ತಿರುವುದನ್ನು ನೋಡಿ ಆ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕ್ಷಣ ಮಾತ್ರದಲ್ಲಿ ಬೋಟ್ ನದಿಯ ಮಧ್ಯದಲ್ಲಿ ಮೊದಲು ನಿಂತಿತು. ಅಲ್ಲಿ ದುರಂತ ನಡೆಯಲಿದೆ ಎಂದು ಮನಗಂಡ ಪ್ರಜೀಶ್ ಮತ್ತು ಆತನ ಸ್ನೇಹಿತರು ನದಿಗೆ ಹಾರಿದ್ದಾರೆ. ದೋಣಿಯ ಹತ್ತಿರ ಬಂದಾಗ, ಈಜಿ ದಡಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು, ‘ಒಬ್ಬ ಮಹಿಳೆ ನನ್ನೊಂದಿಗೆ ಇದ್ದಳು, ನನ್ನ ಕೈ ಕಾಲು ದಣಿಯುತ್ತಿದೆ, ಅವಳು ಕಾಣುತ್ತಿಲ್ಲ ಎಂದು ಹೇಳಿ ಅವರು ಈಜುತ್ತಾ ಮುಂದೆ ಹೋದರು.
#WATCH | Kerala: Rescue operation underway after a tourist boat capsized near Tanur in Malappuram district.
So far, death toll in the incident stands at 18. https://t.co/SXfTZcZyi7 pic.twitter.com/sxvwiAFpV9
— ANI (@ANI) May 7, 2023
ನಾವು ಒಡೆದ ಗಾಜಿನ ಮೂಲಕ ಜನರನ್ನು ದಡಕ್ಕೆ ತರಲು ಪ್ರಾರಂಭಿಸಿದೆವು. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಸಣ್ಣ ದೋಣಿಗಳು ತಕ್ಷಣವೇ ಬಂದವು. ಅಲ್ಲಿ ಜನರನ್ನು ದಡಕ್ಕೆ ವರ್ಗಾಯಿಸಲಾಯಿತು. ಸಣ್ಣ ಮಕ್ಕಳನ್ನು ಗಾಜು ಒಡೆದು ಹೊರತೆಗೆದೆವು. ಅವರು ಬದುಕಿದ್ದಾರೋ ಇಲ್ಲವೋ ಎಂದು ನೋಡಿಲ್ಲ. ತುಂಬಾ ಕಿರುಚಾಟ ಮತ್ತು ಭಯದಿಂದ ಕೂಡಿದ ವಾತಾವರಣ ಅದು. ನಾವು 13 ಮಂದಿಯನ್ನು ರಕ್ಷಿಸಿದೆವು ಎಂದು ಪ್ರಜೀಶ್ ಹೇಳಿದ್ದಾರೆ.
ದೋಣಿ ಮುಳುಗುತ್ತಿದೆ ಬಾ ಎಂದು ಫೋನ್ ಕರೆ ಮಾಡಿದ ಪತ್ನಿ
ನಾವಿದ್ದ ದೋಣಿ ಮುಳುಗುತ್ತಿದೆ ಎಂದು ಪತ್ನಿ ಸೀನತ್ ದೂರವಾಣಿ ಕರೆ ಮಾಡಿದ ತಕ್ಷಣ ಕುನುಮ್ಮಲ್ ಸೈತಲವಿ ಅವರು ಸ್ಥಳೀಯರೊಂದಿಗೆ ತುವಲ್ತೀರಂ ಬೀಚ್ಗೆ ಧಾವಿಸಿದ್ದಾರೆ. ನಾವು ಅಲ್ಲಿಗೆ ತಲುಪುವ ಹೊತ್ತಿಗೆ, ಜನರು ಕಿರುಚುತ್ತಾ ನೀರಿಗೆ ಜಿಗಿಯುತ್ತಿದ್ದರು. ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಸೈತಲವಿಗೆ ಕಂಡಿದ್ದು ತನ್ನ ಮಗಳ ಮೃತದೇಹವನ್ನು ದಡಕ್ಕೆ ತರುತ್ತಿರುವ ದೃಶ್ಯ. ಪತ್ನಿ, ಇತರೆ ಮಕ್ಕಳು ಹಾಗೂ ಸಂಬಂಧಿಕರೊಂದಿಗೆ 11 ಮಂದಿಯ ಮೃತದೇಹ ಅವರ ಕಣ್ಣಮುಂದೆಯೇ ಇತ್ತು. ಅದರಲ್ಲಿ ಒಂದೂವರೆ ವರ್ಷದ ಮಗು!.ಅವರು ನಿಂತಲ್ಲೇ ಕಲ್ಲಾಗಿ ಬಿಟ್ಟಿದ್ದರು.
ಇದನ್ನೂ ಓದಿ: Kerala Boat Tragedy: ಕೇರಳದಲ್ಲಿ ಬೋಟ್ ಮುಳುಗಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ, ಪ್ರಧಾನಿ ಮೋದಿ ಸಂತಾಪ
ಕೈಯಿಂದಲೇ ದೋಣಿಯ ಗಾಜು ಒಡೆದ ರಶೀದ್
ದೋಣಿ ಅಪಘಾತದ ನಂತರ ಜನರು ಕಿರುಚಲು ಆರಂಭಿಸಿದಾಗ ಪರಪ್ಪನಂಙಾಡಿ ನಿವಾಸಿ ಕುನುಮ್ಮಾಲ್ ರಶೀದ್ ಅವರಿಗೆ ಇನ್ನೇನು ತೋಚಲಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ಈಜಿ ಮುಳಿಗಿದ್ದ ದೋಣಿಯತ್ತ ಸಾಗಿದಾಗ ದೋಣಿಯ ಗಾಜಿನ ಬಾಗಿಲುಗಳನ್ನು ತೆರೆಯಲೇ ಬೇಕಿತ್ತು. ಗಾಜಿನ ಬಾಗಿಲು ತೆಗೆದರೆ ಜನರನ್ನು ರಕ್ಷಿಸಬಹುದಾಗಿತ್ತು. ರಶೀದ್ ಮತ್ತೇನೂ ಯೋಚಿಸಿಲ್ಲ, ಕೈಯಿಂದಲೇ ಗಾಜು ಒಡೆದರು. ಕೈಗೆ ಗಾಯವಾಗಿತ್ತು. ಕೈಯಿಂದ ಗಾಜನ್ನು ಒಡೆದು ಒಬ್ಬ ವ್ಯಕ್ತಿಯನ್ನು ರಕ್ಷಿಸಿದಾಗ ಗಾಜಿನಿಂದ ಅವರಿಗೂ ಗಾಯವಾಯಿತು. ನಂತರ ಮತ್ತೊಂದು ಗಾಜು ಒಡೆದೆ ಅಂತಾರೆ ರಶೀದ್.
ಕೈಗೆ ಗಾಯವಾಗಿದ್ದನ್ನು ಲೆಕ್ಕಿಸದೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು ರಶೀದ್. ರಕ್ತಸ್ರಾವ ಆಗುತ್ತಲೇ ಇತ್ತು. ಸ್ವಲ್ಪ ಹೊತ್ತಿಗೆ ಚಳಿ ಆವರಿಸಿ ತಲೆ ಸುತ್ತಿದಂತಾಯಿತು. ಸ್ವಲ್ಪ ಸಾವರಿಸಿಕೊಂಡು ಅಂಗಿಯನ್ನು ಬಿಚ್ಚಿ ಕೈಗೆ ಬಿಗಿದು ಮತ್ತೆ ರಕ್ಷಣಾ ಕಾರ್ಯ ಮುಂದುವರಿಸಿದೆ ಅಂತಾರೆ ರಶೀದ್. ರಶೀದ್ ಹೀಗೆ ರಕ್ಷಿಸಿದ್ದು 7 ಮಂದಿಯನ್ನು. ರಾತ್ರಿಯಿಡೀ ನಡೆದಿತ್ತು ರಕ್ಷಣಾ ಕಾರ್ಯಾಚರಣೆ. ಬೆಳಕು ಹರಿದಾಗಲೇ ರಶೀದ್ ಅವರಿಗೆ ಗೊತ್ತಾಗಿದ್ದು ಮೃತಪಟ್ಟವರಲ್ಲಿ ತಮ್ಮ ಸಂಬಂಧಿಕರೂ ಇದ್ದರು ಎಂದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ