Kerala Floods ಪ್ರವಾಹದ ನಡುವೆ ಬಸ್ ಚಲಾಯಿಸಿದ ಕೇರಳ ಆರ್​​ಟಿಸಿ ಚಾಲಕ ಅಮಾನತು; ತಬಲಾ ನುಡಿಸುವ ವಿಡಿಯೊದೊಂದಿಗೆ ಪ್ರತಿಕ್ರಿಯಿಸಿದ ಚಾಲಕ

| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2021 | 4:27 PM

Kerala RTC ಈರಟ್ಟುಪೇಟೆಯ ಡಿಪೋನ ಎಸ್ ಜಯದೀಪ್ ಎಂದು ಗುರುತಿಸಲಾದ ಬಸ್ಸಿನ ಚಾಲಕನನ್ನು ಅಮಾನತುಗೊಳಿಸಲಾಗಿದೆ. ಪೂಂಞಾರ್‌ನ ಸೇಂಟ್ ಮೇರಿ ಚರ್ಚ್ ಮುಂಭಾಗದಲ್ಲಿ ಜನರ ಜೀವಕ್ಕೆ ಅಪಾಯವನ್ನುಂಟುಮಾಡುವಂತೆ....

Kerala Floods ಪ್ರವಾಹದ ನಡುವೆ ಬಸ್ ಚಲಾಯಿಸಿದ ಕೇರಳ ಆರ್​​ಟಿಸಿ ಚಾಲಕ ಅಮಾನತು; ತಬಲಾ ನುಡಿಸುವ ವಿಡಿಯೊದೊಂದಿಗೆ ಪ್ರತಿಕ್ರಿಯಿಸಿದ ಚಾಲಕ
ನೀರಿನಲ್ಲಿ ಮುಳುಗಿರುವ ಕೆಎಸ್​​ಆರ್​​ಟಿಸಿ ಮತ್ತು ಚಾಲಕ ಜಯದೀಪ್
Follow us on

ತಿರುವನಂತಪುರಂ: ಮಳೆಯಿಂದ ತತ್ತರಿಸಿರುವ ಕೇರಳದ (Kerala) ಕೋಟ್ಟಯಂ ಜಿಲ್ಲೆಯಲ್ಲಿ ಜಲಾವೃತವಾದ ರಸ್ತೆಯಲ್ಲಿ ಅರ್ಧ ಮುಳುಗಿರುವ ಕೇರಳ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್, ಜನರು ಬಸ್ ಕಿಟಿಕಿಯಿಂದ ಹೊರಗೆ ಬರುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಸ್ ಚಾಲಕನನ್ನು ಅಮಾನತುಗೊಳಿಸಲಾಗಿದೆ . ಅಕ್ಟೋಬರ್ 16 ಶನಿವಾರದಂದು ಕೋಟ್ಟಯಂನ ಪೂಂಞಾರ್​​ನಲ್ಲಿ ಪ್ರವಾಹದ ನಡುವೆ ಜಯದೀಪ್ ಸೆಬಾಸ್ಟಿನ್ ಕೆಎಸ್​​ಆರ್​​ಟಿ ಬಸ್ ಚಲಾಯಿಸಿದ್ದರು. ಆದಾಗ್ಯೂ, ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುವ ರೀತಿಯಲ್ಲಿ ಬಸ್ ಚಾಲನೆ ಮಾಡಿದ್ದಕ್ಕಾಗಿ ಬಸ್‌ನ ಚಾಲಕನನ್ನು ಅಮಾನತುಗೊಳಿಸಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಶನಿವಾರ ರಾತ್ರಿ ಹೇಳಿದ್ದಾರೆ.

ಈರಟ್ಟುಪೇಟೆಗೆ ತೆರಳುವ ಕೇರಳ ಆರ್​​ಟಿಸಿ ಬಸ್ ಪ್ರವಾಹದ ರಸ್ತೆಯಲ್ಲಿ ಸಂಚರಿಸಿದ್ದು  ಆರಂಭದಲ್ಲಿ ಬಸ್  ಟೈರ್ ತನಕ ಮುಳುಗಿರುವುದನ್ನು ಕಾಣಬಹುದು. ಆದರೂ ಚಾಲಕ ನಿಲ್ಲಿಸಲಿಲ್ಲ. ಕ್ರಮೇಣ ನೀರಿನ ಮಟ್ಟ ಹೆಚ್ಚುತ್ತಾ ಬಂದು ಬಸ್ ಅರ್ಧ ಮುಳುಗುವಂತಾಯಿತು. ಕೂಡಲೇ ಬಸ್​​ನ್ನು ಆ ಪ್ರದೇಶದ ಸೇಂಟ್ ಮೇರಿ ಚರ್ಚ್ ಮುಂದೆ ನಿಲ್ಲಿಸಿ ಬಸ್‌ನ ಮುಂಭಾಗದ ಕಿಟಕಿ ಮತ್ತು ಬಾಗಿಲುಗಳ ಮೂಲಕ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸುತ್ತಿರುವುದು ವಿಡಿಯೊದಲ್ಲಿದೆ.


ಈರಟ್ಟುಪೇಟೆಯ ಡಿಪೋನ ಎಸ್ ಜಯದೀಪ್ ಎಂದು ಗುರುತಿಸಲಾದ ಬಸ್ಸಿನ ಚಾಲಕನನ್ನು ಅಮಾನತುಗೊಳಿಸಲಾಗಿದೆ. ಪೂಂಞಾರ್‌ನ ಸೇಂಟ್ ಮೇರಿ ಚರ್ಚ್ ಮುಂಭಾಗದಲ್ಲಿ ಜನರ ಜೀವಕ್ಕೆ ಅಪಾಯವನ್ನುಂಟುಮಾಡುವಂತೆ ಬಸ್ ಚಲಾಯಿಸಿದ ಚಾಲಕನನ್ನು ಅಮಾನತುಗೊಳಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಎಂದು ಸಾರಿಗೆ ಸಚಿವ ಆಂಟನಿ ರಾಜು ಫೇಸ್​​ಬುಕ್​​ನಲ್ಲಿ ಬರೆದಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರದವರೆಗೆ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೇರಳದ ಹಲವು ಮಧ್ಯ ಜಿಲ್ಲೆಗಳಾದ ಕೋಟ್ಟಯಂ, ಇಡುಕ್ಕಿ ಮತ್ತು ಪತ್ತನಂತಿಟ್ಟದ ಭಾಗಗಳು ಹೆಚ್ಚಾಗಿ ಹಾನಿಗೊಳಗಾಗಿವೆ. ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ಅನೇಕ ಪ್ರದೇಶಗಳಿಂದ ಅನೇಕ ಭೂಕುಸಿತಗಳು ವರದಿಯಾಗಿವೆ. ಕೋಟ್ಟಯಂನ ಗುಡ್ಡಗಾಡು ಪ್ರದೇಶ ಹೆಚ್ಚು ಬಾಧಿತ ಪ್ರದೇಶಗಳಲ್ಲಿ ಒಂದಾಗಿದೆ. ಭೂಕುಸಿತ ಮತ್ತು ದಿಢೀರ್ ಪ್ರವಾಹದಿಂದಾಗಿ ಕೋಟ್ಟಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು ಮತ್ತು ಕನಿಷ್ಠ 10 ಜನರು ಕಾಣೆಯಾಗಿದ್ದಾರೆ.

ಪ್ರಯಾಣಿಕರನ್ನು ಕಾಪಾಡಿದ್ದಕ್ಕೆ ಈ ಶಿಕ್ಷೆ; ತಬಲಾ ನುಡಿಸುವ ವಿಡಿಯೊ ಪೋಸ್ಟ್ ಮಾಡಿ ಚಾಲಕನ ಪ್ರತಿಕ್ರಿಯೆ
ಪ್ರಯಾಣಿಕರ ಜೀವ ರಕ್ಷಿಸಿದ್ದಕ್ಕಾಗಿ ಕೆಎಸ್​​ಆರ್​​ಟಿಸಿ ನನ್ನನ್ನು ಅಮಾನತು ಮಾಡಿದೆ ಎಂದು ಚಾಲಕ ಜಯದೀಪ್ ಪ್ರತಿಕ್ರಿಯಿಸಿದ್ದಾರೆ. ಫೇಸ್​​ಬುಕ್​​ನಲ್ಲಿ ತಬಲಾ ನುಡಿಸುತ್ತಿರುವ ವಿಡಿಯೊ ಪೋಸ್ಟ್ ಮಾಡಿರುವ ಜಯದೀಪ್, ಪ್ರಯಾಣಿಕ ಜೀವ ರಕ್ಷಿಸಿದ್ದಕ್ಕೆ ಅಮಾನತಿಗೊಳಗಾದ ಸಂತೋಷದಲ್ಲಿ ಜಯನಾಶಾನ್ ತಬಲಾ ನುಡಿಸಿದಾಗ ಎಂಬ ಶೀರ್ಷಿಕೆ ನೀಡಿದ್ದಾರೆ.

ಅಮಾನತು ಸುದ್ದಿಯನ್ನು ಶೇರ್ ಮಾಡಿರುನ ಜಯದೀಪ್, ಸೂಪರ್ ಹಿಟ್ ಆಗಿರುವ ಸುದ್ದಿ ಪತ್ರಿಕೆಯಲ್ಲೂ ಬಂದಿದೆ. ಒಂದು ರಜೆ ಕೇಳಿದರೆ ಕೊಡದೇ ಇರುವ ದೊಡ್ಡ ಜನಗಳು ಇನ್ನು ಬೇರೆ ವ್ಯಕ್ತಿಯನ್ನು ಕರೆದು ಬಸ್ ಓಡಿಸಲಿ. ಇಲ್ಲಾಂದ್ರೆ ಅವರೇ ಓಡಿಸಲಿ. ಅವ ನಿವೃತ್ತಿಯಾಗಿ ಅಟ್ಯಾಕ್ ಬಂದ ನಂತರ ಬದುಕಿ ಉಳಿದರೆ ಶಾಲಾ ಬಸ್,ಆಟೋ ರಿಕ್ಷಾ ಚಲಾಯಿಸಿ ಅಕ್ಕಿ ಖರೀದಿಸಬೇಕಲ್ಲವೇ? ಒಮ್ಮೆ ಪ್ರಾಕ್ಟೀಸ್ ಆಗಲಿ. ನಾನು ಮನೆ ಕೆಲಸ ನೋಡಿಕೊಂಡು ಟಿಎಸ್ ನಂ 50ರಲ್ಲಿಯೂ ಹೋಗಿ ವಿಶ್ರಾಂತಿ ಪಡೆದುಕೊಳ್ಳುವೆ ಎಂದು ಬರೆದಿದ್ದಾರೆ.

ಶನಿವಾರ ಭೂಕುಸಿತದಿಂದಾಗಿ ದಿಢೀರ್ ಪ್ರವಾಹ ಬಂದಿತ್ತು. ಬಸ್ ಈ ವೇಳೆ ಮುಳುಗಿದೆ,ನಾನು ಜನರನ್ನು ಕಾಪಾಡಿದ್ದೇನೆ ಎಂದು ಜಯದೀಪ್ ಸೆಬಾಸ್ಟಿಯನ್ ವಾದಿಸಿದ್ದು, ನೀರು ಬಸ್ಸೊಳಗೆ ನುಗ್ಗುತ್ತಿರುವ ವಿಡಿಯೊ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Kerala floods ಕೇರಳದಲ್ಲಿ ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ಎಲ್ಲ ರೀತಿಯ ಸಹಾಯ ಮಾಡಲು ಕೇಂದ್ರ ಸಿದ್ಧ: ಅಮಿತ್ ಶಾ ಭರವಸೆ

ಇದನ್ನೂ ಓದಿ: Kerala Rain Updates: ಕೇರಳದಲ್ಲಿ ಧಾರಾಕಾರ ಮಳೆ; ಇದುವರೆಗೆ 18 ಮಂದಿ ಸಾವು, ಸೇನೆಯಿಂದ ಸಹಾಯಬೇಕೆಂದ ಪಿಣರಾಯಿ ವಿಜಯನ್​

Published On - 4:24 pm, Sun, 17 October 21