ಕೊಚ್ಚಿ: ಸಂಕ್ರಾಂತಿ ಪೊಂಗಲ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಗೆ ಆಗಮಿಸುವ ಭಕ್ತರನ್ನು ಗಮನದಲ್ಲಿರಿಸಿಕೊಂಡು ದಿನಕ್ಕೆ 5,000 ಜನರ ಭೇಟಿಗೆ ಅವಕಾಶ ನೀಡಿ, ಕೇರಳ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಉಚ್ಛ ನ್ಯಾಯಾಲಯದ ಸದರಿ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಶಬರಿಮಲೆ ಭೇಟಿಗೆ ಭಕ್ತಾದಿಗಳಿಗೆ ಅವಕಾಶ ನೀಡುವ ಕುರಿತು ರಾಜ್ಯ ಸರ್ಕಾರ ಈಗಾಗಲೇ ಉನ್ನತ ಮಟ್ಟದ ಸಮಿತಿ ರಚಿಸಿದೆ. ಸಮಿತಿಯ ನಿರ್ಧಾರದ ಪ್ರಕಾರ ವಾರದ ದಿನಗಳಲ್ಲಿ 2,000 ಜನರಿಗೆ ಮತ್ತು ವಾರಾಂತ್ಯದಲ್ಲಿ 3,000 ಜನರಿಗೆ ದೇಗುಲ ಪ್ರವೇಶಿಸಲು ಅನುಮತಿ ನೀಡುವುದು ಸೂಕ್ತ. ಆದರೆ, ಹೈಕೋರ್ಟ್ 5,000 ಜನರಿಗೆ ಅನುಮತಿ ನೀಡಿದೆ. ಕೊವಿಡ್ 19 ಪರಿಸ್ಥಿತಿಯಲ್ಲಿ ಇಂತಹ ನಿಲುವು ತಳೆಯುವುದು ಸೂಕ್ತವಲ್ಲ ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಒಮ್ಮೆಲೆ 5 ಸಾವಿರ ಜನರಿಗೆ ಅವಕಾಶ ನೀಡಿದರೆ ಅದು ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ. ಈ ದೃಷ್ಟಿಯಿಂದಲೇ ಡಿಸೆಂಬರ್ 20ರಿಂದ ಜನವರಿ 14ರ ಅವಧಿಯಲ್ಲಿ ಭಕ್ತಾದಿಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿ ಸೂಕ್ತ ನಿರ್ಧಾರ ಪ್ರಕಟಿಸಿತ್ತು. ಆದರೆ, ಈಗ ಹೈಕೋರ್ಟ್ ಆದೇಶ ಇದಕ್ಕೆ ವ್ಯತಿರಿಕ್ತವಾಗಿದೆ ಎಂದು ತಿಳಿಸಿದೆ.
ಭಕ್ತಾದಿಗಳ ಪ್ರವೇಶಕ್ಕೆ ಅವಕಾಶ ನೀಡುವ ಮುನ್ನ ಪ್ರತಿಯೊಬ್ಬರ ತಪಾಸಣೆ ನಡೆಸಬೇಕು. ಸಾವಿರಾರು ಜನರು ಆಗಮಿಸಿದರೆ ತಪಾಸಣಾ ಪ್ರಕ್ರಿಯೆ ಒತ್ತಡವನ್ನು ಉಂಟು ಮಾಡುತ್ತದೆ. ಇನ್ನೊಂದೆಡೆ ಬ್ರಿಟನ್ನಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತ-ಬ್ರಿಟನ್ ನಡುವಿನ ವಿಮಾನಯಾನಕ್ಕೆ ನಿರ್ಬಂಧ ಹೇರಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಸರಿಯಲ್ಲ. ಆದ್ದರಿಂದ ಸರ್ವೋಚ್ಛ ನ್ಯಾಯಾಲಯ ಈ ಕೂಡಲೇ ಮಧ್ಯ ಪ್ರವೇಶಿಸಿ ಕೇರಳ ಸರ್ಕಾರದ ಮನವಿಯನ್ನು ಪುರಸ್ಕರಿಸಬೇಕು ಎಂದು ವಿನಂತಿಸಿಕೊಂಡಿದೆ.
ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ವಿದೇಶಿಯರು ತವರಿಗೆ ಮರಳಲು ನೆರವಾಗಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ