BBC Documentary: ಬ್ರಿಟಿಷ್ ದೌರ್ಜನ್ಯದ ಸಾಕ್ಷ್ಯಚಿತ್ರ ಏಕಿಲ್ಲ? ಬಿಬಿಸಿ ವಿರುದ್ಧ ಕೇರಳ ರಾಜ್ಯಪಾಲ ಕಿಡಿ

|

Updated on: Jan 28, 2023 | 1:28 PM

ಅವರು ಯಾಕೆ ಬ್ರಿಟಿಷ್ ದೌರ್ಜನ್ಯಗಳ ಮೇಲೆ ಸಾಕ್ಷ್ಯಚಿತ್ರ ನಿರ್ಮಿಸುವುದಿಲ್ಲ? ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನೆ.

BBC Documentary: ಬ್ರಿಟಿಷ್ ದೌರ್ಜನ್ಯದ ಸಾಕ್ಷ್ಯಚಿತ್ರ ಏಕಿಲ್ಲ? ಬಿಬಿಸಿ ವಿರುದ್ಧ ಕೇರಳ ರಾಜ್ಯಪಾಲ ಕಿಡಿ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (ಎಎನ್​ಐ ಚಿತ್ರ)
Image Credit source: ANI
Follow us on

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ವಿವಾದಾತ್ಮಕ ಸಾಕ್ಷ್ಯಚಿತ್ರ ನಿರ್ಮಿಸಿರುವ ಬಿಬಿಸಿ (BBC documentary) ಮತ್ತು ಆ ಸಾಕ್ಷ್ಯಚಿತ್ರವನ್ನು ಬೆಂಬಲಿಸುತ್ತಿರುವ ಭಾರತೀಯರ ವಿರುದ್ಧ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohd Khan) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತವು ವಿಶ್ವದಲ್ಲೇ ಉತ್ತಮವಾಗಿ ಬೆಳವಣಿಗೆ ಕಾಣುತ್ತಿದೆ. ಇದರಿಂದಾಗಿ ಅವರಿಗೆ ಹತಾಶೆಯಾಗಿದೆ. ಅವರು ಯಾಕೆ ಬ್ರಿಟಿಷ್ ದೌರ್ಜನ್ಯಗಳ ಮೇಲೆ ಸಾಕ್ಷ್ಯಚಿತ್ರ ನಿರ್ಮಿಸುವುದಿಲ್ಲ? ಕೆಲವೊಂದು ಮಂದಿಗಳ ಬಗ್ಗೆ ನನಗೆ ತೀವ್ರ ವಿಷಾದವಿದೆ. ಯಾಕೆಂದರೆ ಅವರು ನ್ಯಾಯಾಂಗವು ನೀಡಿರುವ ತೀರ್ಪಿಗಿಂತಲೂ ಹೆಚ್ಚಾಗಿ ಸಾಕ್ಷ್ಯಚಿತ್ರವೊಂದರ ಮೇಲೆ ನಂಬಿಕೆ ಇರಿಸುತ್ತಿದ್ದಾರೆ ಎಂದು ಆರಿಫ್ ಖಾನ್ ಹೇಳಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿರುವ ಸಂದರ್ಭವನ್ನೂ ಆರಿಫ್ ಖಾನ್ ಪ್ರಶ್ನಿಸಿದ್ದರು. ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ದೊರೆತಿರುವ ಸಂದರ್ಭದಲ್ಲೇ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿರುವುದರ ಹಿಂದಿನ ಮರ್ಮವೇನು ಎಂದು ಅವರು ಪ್ರಶ್ನಿಸಿದ್ದರು.

ನಮ್ಮ ವಸಾಹತುಶಾಹಿ ಒಡೆಯರು ಸಾಕ್ಷ್ಯಚಿತ್ರ ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ. ಕೆಲವೊಬ್ಬರು ನಮ್ಮ ನ್ಯಾಯಾಲಯಗಳು ನೀಡಿರುವ ತೀರ್ಪಿಗಿಂತಲೂ ಹೆಚ್ಚಾಗಿ ಅದನ್ನು ನಂಬುತ್ತಾರೆ. 200ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮನ್ನು ಆಳಿದವರು, ಈಗ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ನಮ್ಮಲ್ಲಿ ಒಡಕು ಸೃಷ್ಟಿಸಬಹುದು ಎಂದು ಭಾವಿಸಿದ್ದಾರೆ. ಆದರೆ ನಾವು ಮತ್ತಷ್ಟು ಒಗ್ಗಟ್ಟಾಗಲಿದ್ದೇವೆ. ಹಳೆಯ ವಸಾಹತುಶಾಹಿಗಳು ಬಿಡುಗಡೆ ಮಾಡಿರುವ ಚಿತ್ರವನ್ನು ತಿರಸ್ಕರಿಸಬೇಕು ಎಂದು ಅವರು ಹೇಳಿದ್ದರು.


ಬಿಬಿಸಿಯ ಎರಡು ಕಂತುಗಳ ಸಾಕ್ಷ್ಯಚಿತ್ರದ ಪ್ರಸಾರವನ್ನು ಕೇಂದ್ರ ಸರ್ಕಾರ ಐಟಿ ಕಾಯ್ದೆಯ ನಿಯಮಗಳ ಅನ್ವಯ ಈಗಾಗಲೇ ನಿಷೇಧಿಸಿದೆ. ಯೂಟ್ಯೂಬ್​ನಿಂದ ಸಾಕ್ಷ್ಯಚಿತ್ರದ ಲಿಂಕ್ ಅನ್ನು ತೆಗೆದುಹಾಕಲಾಗಿದೆ. ಸರ್ಕಾರ ನಿಷೇಧಿಸಿದಾಗ್ಯೂ ಬಿಬಿಸಿ ಸಾಕ್ಷ್ಯಚಿತ್ರಗಳನ್ನು ದೇಶದ ವಿವಿಧೆಡೆ ಪ್ರಸಾರ ಮಾಡುವ ಪ್ರಯತ್ನ ನಡೆದಿದ್ದು, ಅಂಥವರ ವಿರುದ್ಧ ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಇದನ್ನೂ ಓದಿ: BBC Documentary: ಬಿಬಿಸಿ ಡಾಕ್ಯುಮೆಂಟರಿ ನಿಷೇಧ ನಿರ್ಧಾರ: ಪತ್ರಿಕಾ ಸ್ವಾತಂತ್ರ್ಯ ಮುಖ್ಯ ಎಂದ ಅಮೆರಿಕ

2002ರಲ್ಲಿ ಗೋಧ್ರಾ ರೈಲು ದುರಂತದ ನಂತರ ಗುಜರಾತ್ ರಾಜ್ಯಾದ್ಯಂತ ಸಂಭವಿಸಿದ ಭೀಕರ ಗಲಭೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಹತರಾಗಿದ್ದರು. ಅಂದು ಗುಜರಾತ್​ನಲ್ಲಿ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಅಂದಿನ ಅವರ ನೇತೃತ್ವದ ಸರ್ಕಾರವೇ ಗಲಭೆಗಳಿಗೆ ಕುಮ್ಮಕ್ಕು ಕೊಟ್ಟಿತ್ತು ಎಂಬುದು ಆರೋಪ. ಭಾರತದ ಸುಪ್ರೀಂಕೋರ್ಟ್​ನಲ್ಲಿ ಈ ಪ್ರಕರಣದ ವಿಚಾರಣೆಯಾಗಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದಾಗ್ಯೂ ಬಿಬಿಸಿ ಈ ಘಟನೆ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಿದೆ. ಅಂದಿನ ಗಲಭೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಕ್ಷ್ಯಗಳಾಗಿದ್ದವರ ಹೇಳಿಕೆಗಳನ್ನು ಆಧರಿಸಿ ‘ಇಂಡಿಯಾ: ದಿ ಮೋದಿ ಕ್ವಸ್ಚನ್’ ಎಂಬ ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಿದೆ.

ಪ್ರಮುಖ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Sat, 28 January 23