ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ರಹಸ್ಯ ಮೈತ್ರಿ: ಪಿಣರಾಯಿ ವಿಜಯನ್ ಆರೋಪ

|

Updated on: Dec 07, 2020 | 1:25 PM

ಚುನಾವಣೆ ಮುಗಿದ ನಂತರ ಈ ಮೈತ್ರಿ ಯಾವ ರೀತಿ ಹೊಡೆತ ನೀಡಲಿದೆ ಎಂಬುದು ಕಾಂಗ್ರೆಸ್​​ನ ಮಿತ್ರ ಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್​ಗೆ (ಐಯುಎಂಎಲ್) ಅರ್ಥವಾಗಲಿದೆ ಎಂದು ಪಿಣರಯಿ ವಿಜಯನ್ ಹೇಳಿದ್ದಾರೆ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ರಹಸ್ಯ ಮೈತ್ರಿ: ಪಿಣರಾಯಿ ವಿಜಯನ್ ಆರೋಪ
ಪಿಣರಾಯಿ ವಿಜಯನ್
Follow us on

ತಿರುವನಂತಪುರಂ: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೊದಲ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇದೆ. ಮೂರು ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ನಾಳೆ (ಡಿ.8) ತಿರುವನಂತಪುರಂ, ಕೊಲ್ಲಂ, ಇಡುಕ್ಕಿ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಚುನಾವಣೆಯ ಪ್ರಚಾರದ ಅಂಗವಾಗಿ ಶನಿವಾರ ವರ್ಚ್ಯುವಲ್ ರ‍್ಯಾಲಿ ನಡೆಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮತ ಪಡೆಯುವುದಕ್ಕಾಗಿ ಎಲ್​​ಡಿಎಫ್ ಯಾವುದೇ ಕೋಮುವಾದಿ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಯುಡಿಎಫ್ ಸಾರ್ವಜನಿಕವಾಗಿ ಮತ್ತು ರಹಸ್ಯವಾಗಿ ಮೈತ್ರಿ ಮಾಡಿಕೊಂಡಿವೆ. ಯುಡಿಎಫ್ ಜಮಾತ್-ಇ-ಇಸ್ಲಾಮಿ ಜತೆ ಮೈತ್ರಿ ಮಾಡಿಕೊಂಡಿದೆ. ಚುನಾವಣೆ ಮುಗಿದ ನಂತರ ಈ ಮೈತ್ರಿ ಯಾವ ರೀತಿ ಹೊಡೆತ ನೀಡಲಿದೆ ಎಂಬುದು ಕಾಂಗ್ರೆಸ್​​ನ ಮಿತ್ರ ಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್​ಗೆ (ಐಯುಎಂಎಲ್) ಅರ್ಥವಾಗಲಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್, ಐಯುಎಂಎಲ್ ಅಥವಾ ಯುಡಿಎಫ್​ನ ಯಾವುದೇ ಒಬ್ಬ ನಾಯಕ ಬಿಜೆಪಿ ವಿರುದ್ಧ ಮಾತನಾಡಿಲ್ಲ ಎಂದಿದ್ದಾರೆ ಪಿಣರಾಯಿ.

ಕೇಂದ್ರ ಸರ್ಕಾರ ದೇಶದಲ್ಲಿನ ಆಡಳಿತ ವ್ಯವಸ್ಥೆಯನ್ನೇ ನಾಶ ಮಾಡುತ್ತಿದೆ. ಕೆಲವೊಂದು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹೀಗಿದ್ದರೂ ಬಿಜೆಪಿ ಯಾವಾಗ ಬೇಕಾದರೂ ಅವರನ್ನು ಆಡಳಿತದಿಂದ ಕೆಳಗಿಳಿಸಬಹುದು. ನಾವು ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಇದನ್ನು ನೋಡಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಕೇರಳ ಸರ್ಕಾರಕ್ಕೆ ತೊಂದರೆ ಕೊಡುವುದಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಯನ್ನು (ಸಿಬಿಐ) ಬಳಸುತ್ತಿದೆ. ಕೇರಳ ಸರ್ಕಾರವನ್ನು ಬುಡಮೇಲು ಮಾಡುವುದಕ್ಕೋಸ್ಕರವೇ ಕೇಂದ್ರ ಸರ್ಕಾರ ಮತ್ತು ಬಿಜೆಪಿ ದೊಡ್ಡ ಮೊತ್ತದಲ್ಲಿ ಹಣ ವ್ಯಯಿಸುತ್ತಿದೆ. ಸಂವಿಧಾನವನ್ನು ನಾಶ ಮಾಡುತ್ತಿರುವುದರ ಬಗ್ಗೆ, ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವುದರ ವಿರುದ್ಧ ಮತ್ತು ಜನರ ಹಕ್ಕುಗಳನ್ನು ಕಸಿಯುತ್ತಿರುವ ಬಗ್ಗೆ ಕಾರ್ಮಿಕರು ಮತ್ತು ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳದಲ್ಲಿ ಡಿಸೆಂಂಬರ್ 10ರಂದು ಎರಡನೇ ಹಂತದ ಮತ್ತು 14ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಡಿಸೆಂಬರ್ 16ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಕೇರಳ: ಸಾಮಾಜಿಕ ಮಾಧ್ಯಮ ನಿರ್ಬಂಧ ಸುಗ್ರೀವಾಜ್ಞೆಗೆ ತಾತ್ಕಾಲಿಕ ತಡೆ