Kerala Landslide: ಕೇರಳದ ಕೊಟ್ಟಾಯಂನಲ್ಲಿ ಭಾರೀ ಭೂಕುಸಿತ; ಮೂವರು ಸಾವು, 13ಕ್ಕೂ ಹೆಚ್ಚು ಜನ ನಾಪತ್ತೆ

| Updated By: ಸುಷ್ಮಾ ಚಕ್ರೆ

Updated on: Oct 16, 2021 | 6:17 PM

Kerala Rains: ಕೊಟ್ಟಾಯಂನಲ್ಲಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿ 13ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

Kerala Landslide: ಕೇರಳದ ಕೊಟ್ಟಾಯಂನಲ್ಲಿ ಭಾರೀ ಭೂಕುಸಿತ; ಮೂವರು ಸಾವು, 13ಕ್ಕೂ ಹೆಚ್ಚು ಜನ ನಾಪತ್ತೆ
ಕೇರಳದ ಕೊಟ್ಟಾಯಂನಲ್ಲಿ ಭೂಕುಸಿತ
Follow us on

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಕೊಟ್ಟಾಯಂನಲ್ಲಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿ 13ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಅವರಲ್ಲಿ ಒಂದೇ ಕುಟುಂಬದ 6 ಜನರು ಸೇರಿದ್ದಾರೆ. ಮಳೆ ಹೆಚ್ಚಾಗಿರುವುದರಿಂದ ಹಲವೆಡೆ ಪ್ರವಾಹದ ಆತಂಕ ಎದುರಾಗಿದ್ದು, ಮನೆಗಳು ಕೊಚ್ಚಿ ಹೋಗಿವೆ. ಮಳೆಯಿಂದ ಸಾಕಷ್ಟು ಆಸ್ತಿ-ಪಾಸ್ತಿಗಳು ನಷ್ಟವಾಗಿವೆ.

ಮಳೆಯಿಂದ ಕೊಟ್ಟಾಯಂನ ಕೂಟ್ಟಿಕಲ್ ಗ್ರಾಮದಲ್ಲಿ 3 ಮನೆಗಳು ಹಾಗೂ ಅಂಗಡಿಗಳು ಕೊಚ್ಚಿ ಹೋಗಿವೆ. ಕೇರಳದಲ್ಲಿ ಬೇರೆ ಜಿಲ್ಲೆಗಳಿಗಿಂತಲೂ ಕೊಟ್ಟಾಯಂ ಮತ್ತು ಪಥನಾಂತಿಟ್ಟ ಹೆಚ್ಚು ಹಾನಿಗೊಳಗಾಗಿವೆ. ಮಳೆಯಿಂದ ರಸ್ತೆಗಳೆಲ್ಲ ನದಿಯಂತಾಗಿದ್ದು, ಕೆಎಸ್​ಆರ್​ಟಿಸಿ ಬಸ್ ಮಳೆ ನೀರಿನಲ್ಲಿ ಅರ್ಧ ಮುಳುಗಿರುವ ವಿಡಿಯೋಗಳು ವೈರಲ್ ಆಗಿವೆ.

ಕೇರಳದಲ್ಲಿ ಇನ್ನೂ 2-3 ದಿನ ಮಳೆಯಾಗುವ ಹಿನ್ನೆಲೆಯಲ್ಲಿ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕೇರಳದಲ್ಲಿ ನಿನ್ನೆ ಸಂಜೆಯಿಂದ ಮಳೆ ಹೆಚ್ಚಾಗಿದೆ. ಇಂದು ಕೂಡ ಕೇರಳದಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ, ವಿಪರೀತ ಮಳೆಯಾಗುತ್ತಿರುವ ಪಥನಾಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಪಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಾಳೆಯವರೆಗೂ ಕೇರಳದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ, ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು, ಆಯಾ ಜಿಲ್ಲೆಗಳ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇದನ್ನೂ ಓದಿ: Kerala Rain: ಕೇರಳದಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಕೊವಿಡ್​ 19ನಿಂದ ಮೃತಪಟ್ಟವರ ಕುಟುಂಬಕ್ಕೆ 5000 ರೂ. ಮಾಸಾಶನ ನೀಡಲಿದೆ ಕೇರಳ ಸರ್ಕಾರ; ಷರತ್ತು ಅನ್ವಯ

Published On - 6:10 pm, Sat, 16 October 21